ನೆಲ್ಯಾಡಿ : ಕೇಂದ್ರ ಗ್ರಾಮೀಣಾಭಿವೃದ್ಧಿ ಇಲಾಖೆ ಬಿಡುಗಡೆ ಮಾಡಿರುವ ದೇಶದ ಅತ್ಯುತ್ತಮ ಗ್ರಾ.ಪಂ.ಗಳ ಪಟ್ಟಿಯಲ್ಲಿ ನೆಲ್ಯಾಡಿ ಗ್ರಾ.ಪಂ.ಗೆ 9ನೇ ಸ್ಥಾನ ದೊರೆತಿದೆ. ಇದರ ಪರಿಶೀಲನೆಗೆ ಆ. 10ರಂದು ಹೈದರಾಬಾದ್‌ನ ಎನ್‌ಐಆರ್‌ಡಿ ತಂಡದ ಪ್ರತಿನಿಧಿ ಗ್ರಾ.ಪಂ.ಗೆ ಭೇಟಿ ನೀಡಿ ಜನಪ್ರತಿನಿಧಿ, ಇಲಾಖಾ ಧಿಕಾರಿಗಳು ಹಾಗೂ ಸಾರ್ವಜನಿಕರೊಂದಿಗೆ ಸಂವಾದ ನಡೆಸಿದ್ದಾರೆ. ಗ್ರಾಮೀಣಾಭಿವೃದ್ಧಿ ಇಲಾಖೆಯ ಅಂತ್ಯೋದಯ ಯೋಜನೆಯಡಿ ವಿವಿಧ ಮಾನದಂಡಗಳ ಮೂಲಕ ದೇಶದ 41,617 ಗ್ರಾಮ ಪಂಚಾಯಿತ್‌ಗಳ ಮಾಹಿತಿಯನ್ನು ಕ್ರೋಢೀಕರಿಸಿ ಈ ಪಟ್ಟಿ ಬಿಡುಗಡೆ ಮಾಡಲಾಗಿದೆ.
ಗ್ರಾ.ಪಂ.ನ ಪ್ರಾಥಮಿಕ ಅಂಶ, ಮೂಲಸೌಕರ್ಯ, ಆರ್ಥಿಕ ಅಭಿವೃದ್ಧಿ, ಆರೋಗ್ಯ, ಮಹಿಳಾ ಸಬಲೀಕರಣ, ಆರ್ಥಿಕ ಒಳಗೊಳ್ಳುವಿಕೆ ಆಧರಿಸಿ ಗ್ರಾ.ಪಂ.ಗಳಿಗೆ ಅಂಕ ನೀಡಲಾಗಿದ್ದು, ಇದರಲ್ಲಿ 83 ಅಂಕ ಪಡೆದುಕೊಂಡ ನೆಲ್ಯಾಡಿ ಗ್ರಾ.ಪಂ. ದೇಶದಲ್ಲಿ 9ನೇ, ರಾಜ್ಯದಲ್ಲಿ 5ನೇ ಹಾಗೂ ದ.ಕ.ಜಿಲ್ಲೆಯಲ್ಲಿ 1ನೇ ಸ್ಥಾನ ಪಡೆದುಕೊಂಡಿದೆ. ಈ ಹಿನ್ನೆಲೆಯಲ್ಲಿ ಇದರ ಪರಿಶೀಲನೆಗೆ ಕೇಂದ್ರ ಗ್ರಾಮೀಣಾಭಿವೃದ್ಧಿ ಇಲಾಖೆಯ ಪ್ರತಿನಿಧಿಯಾಗಿ ಹೈದರಾಬಾದ್‌ನ ಎನ್‌ಐಆರ್‌ಡಿ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಸಹಾಯಕ ಪ್ರೊಫೆಸರ್ ಡಾ| ರಾಜ್‌ಕುಮಾರ್ ಪಮ್ಮಿ ಅವರು ಜಿ.ಪಂ. ಹಾಗೂ ತಾ.ಪಂ.ನ ಪ್ರತಿನಿ ಧಿಗಳ ಜತೆಗೆ ನೆಲ್ಯಾಡಿ ಗ್ರಾ.ಪಂ.ಗೆ ಭೇಟಿ ನೀಡಿ ಸಂವಾದ ನಡೆಸಿದರು.
ಡಾ| ರಾಜ್‌ಕುಮಾರ್ ಪಮ್ಮಿ ಮಾತನಾಡಿ, ದೇಶದಲ್ಲಿ 2.50 ಲಕ್ಷ ಗ್ರಾ.ಪಂಗಳಿದ್ದು, 50 ಸಾವಿರ ಗ್ರಾ.ಪಂ.ಗಳಲ್ಲಿ ಮಿಷನ್ ಅಂತ್ಯೋದಯ ಯೋಜನೆ ಜಾರಿಯಲ್ಲಿದೆ. ಕರ್ನಾಟಕದ 5 ಜಿಲ್ಲೆಗಳಲ್ಲಿ ಮಿಷನ್ ಅಂತ್ಯೋದಯ ಯೋಜನೆ ಜಾರಿಯಲ್ಲಿದೆ. ಈ ಯೋಜನೆಗೆ ಶೇ. 80ಕ್ಕಿಂತ ಹೆಚ್ಚು ಸಾಧನೆ ಮಾಡಿದ ಗ್ರಾ.ಪಂ. ಗಳನ್ನು ಆಯ್ಕೆ ಮಾಡಲಾಗಿದೆ ಎಂದರು.
ಮಾಹಿತಿ ಕ್ರೋಢೀಕರಣ
ಸಂವಾದದಲ್ಲಿ ಅವರು ಕೃಷಿ, ಜಿಪಿಡಿಪಿ, ಉದ್ಯೋಗ ಖಾತರಿ, ಗ್ರಾ.ಪಂ.ಸದಸ್ಯರಿಗೆ ನೀಡಿದ ತರಬೇತಿ, ಉದ್ಯೋಗ ಖಾತರಿ ಯೋಜನೆಯ ರೋಜ್‌ಗಾರ್ ದಿವಸ್, ಸ್ತ್ರೀಶಕ್ತಿ ಯೋಜನೆ, ಆರೋಗ್ಯ ಇಲಾಖೆ, ಅಂಗನವಾಡಿ ಮಕ್ಕಳಿಗೆ ನೀಡುತ್ತಿರುವ ಆಹಾರ, ಶಿಕ್ಷಣ ಇಲಾಖೆ, ಗ್ರಾಮದ ಘನ ದ್ರವ ತ್ಯಾಜ್ಯ ವಿಲೇವಾರಿ, ಕೃಷಿ ಚಟುವಟಿಕೆ, ಸ್ವಂತ ಸಂಪನ್ಮೂಲ, ಅನುದಾನ, ದಾನಿಗಳ ಸಹಕಾರ, ಇಂಟರ್‌ನೆಟ್ ಸೌಲಭ್ಯದ ಬಗ್ಗೆ ಮಾಹಿತಿ ಪಡೆದುಕೊಂಡರು. ದ.ಕ. ಜಿ.ಪಂ. ಸಹಾಯಕ ಜಿಲ್ಲಾ ಕಾರ್ಯಕ್ರಮ ಸಂಯೋಜಕ ಆದಿತ್ಯ ಆಯ್ಯರ್, ತಾಲೂಕು ಎಂಐಎಸ್ ಸಂಯೋಜಕ ನಿಶ್ಚಿತ್‌ಕುಮಾರ್, ಬಜತ್ತೂರು ಪಿಡಿಒ ಪ್ರವೀಣ್‌ಕುಮಾರ್ ಜತೆಗಿದ್ದರು.
ನೆಲ್ಯಾಡಿ ಸಂತ ಜಾರ್ಜ್ ಕನ್ನಡ ಮಾಧ್ಯಮ ಪ್ರೌಢಶಾಲೆಯ ನಿವೃತ್ತ ಮುಖ್ಯಶಿಕ್ಷಕ ರವೀಂದ್ರ ಟಿ. ಅವರು ಕೇಂದ್ರ ತಂಡಕ್ಕೆ ಸಮನ್ವಯಕಾರರಾಗಿದ್ದರು. ಜಿ.ಪಂ. ಸದಸ್ಯ ಸರ್ವೋತ್ತಮ ಗೌಡ, ತಾ.ಪಂ. ಸದಸ್ಯೆ ಉಷಾ ಅಂಚನ್, ಗ್ರಾ.ಪಂ. ಅಧ್ಯಕ್ಷ ಜಯಾನಂದ ಬಂಟ್ರಿಯಾಲ್, ಸದಸ್ಯರಾದ ಗಂಗಾಧರ ಶೆಟ್ಟಿ ಹೊಸಮನೆ, ಅಬ್ದುಲ್ ಹಮೀದ್, ಶಬ್ಬೀರ್ ಸಾಹೇಬ್, ಮೋಹಿನಿ, ಉಷಾ ಜೋಯಿ ಒ.ಕೆ., ಲೈಲಾ ಥಾಮಸ್, ಅಬ್ರಹಾಂ ಕೆ.ಪಿ., ಪ್ರೋರಿನಾ ಡಿ’ಸೋಜಾ, ಉಮಾವತಿ ದರ್ಖಾಸು, ತೀರ್ಥೇಶ್ವರ ಉರ್ಮಾನು, ಮಂಗಳೂರು ವಿವಿ ನೆಲ್ಯಾಡಿ ಘಟಕ ಕಾಲೇಜಿನ ಪ್ರಾಂಶುಪಾಲ ಡಾ| ಯತೀಶ್ ಕುಮಾರ್, ನೆಲ್ಯಾಡಿ ಪ್ರಾ.ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ| ಕೃಷ್ಣಾನಂದ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕಿ ಉಮಾವತಿ, ನೆಲ್ಯಾಡಿ ಸಂತಜಾರ್ಜ್ ಪ.ಪೂ. ಕಾಲೇಜಿನ ಉಪನ್ಯಾಸಕ, ನೆಲ್ಯಾಡಿ ಜೇಸಿಐ ಅಧ್ಯಕ್ಷ ವಿಶ್ವನಾಥ ಶೆಟ್ಟಿ, ನೆಲ್ಯಾಡಿ ಸರಕಾರಿ ಉ.ಹಿ.ಪ್ರಾ.ಶಾಲಾ ಮುಖ್ಯಶಿಕ್ಷಕ ಆನಂದ ಅಜಿಲ, ಪುಚ್ಚೇರಿ ಸರಕಾರಿ ಹಿ.ಪ್ರಾ.ಶಾಲಾ ಮುಖ್ಯಶಿಕ್ಷಕ ಪದ್ಮನಾಭ ಪಿ., ಪಡುಬೆಟ್ಟು ಸರಕಾರಿ ಹಿ.ಪ್ರಾ.ಶಾಲಾ ದೈಹಿಕ ಶಿಕ್ಷಣ ಶಿಕ್ಷಕಿ ಲೀಲಾವತಿ ಎಂ., ನೆಲ್ಯಾಡಿ-ಕೌಕ್ರಾಡಿ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಸು ಧೀರ್ ಕುಮಾರ್, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಗ್ರಾಮಸ್ಥರು ಉಪಸ್ಥಿತರಿದ್ದರು.
ಪಿಡಿಒ ದೇವರಾಜ್ ಸ್ವಾಗತಿಸಿದರು. ಸಿಬಂದಿ ಶಿವಪ್ರಸಾದ್ ವಂದಿಸಿದರು. ಸಿಬಂದಿಗಳಾದ ಸೋಮಶೇಖರ, ಗಿರೀಶ್, ಲಲಿತಾ, ಭವ್ಯಾ, ಅಬ್ದುಲ್ ರಹಿಮಾನ್ ಅವರು ಸಹಕರಿಸಿದರು. ಸಭೆ ಬಳಿಕ ತಂಡವು ನೆಲ್ಯಾಡಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಸೌಲಭ್ಯಗಳ ಬಗ್ಗೆ ಪರಿಶೀಲನೆ ನಡೆಸಿತು.
ವರದಿ ಸಲ್ಲಿಸುತ್ತೇವೆ
ಕೇಂದ್ರಕ್ಕೆ ವರದಿ ಸಲ್ಲಿಕೆ ನೆಲ್ಯಾಡಿ ಗ್ರಾ.ಪಂ. ಕೈಗೊಂಡಿರುವ ಅಭಿವೃದ್ಧಿ ಕೆಲಸಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಗ್ರಾ.ಪಂ.ಅಧ್ಯಕ್ಷ ಜಯಾನಂದ ಬಂಟ್ರಿಯಾಲ್ ಹಾಗೂ ಪಿಡಿಒ ದೇವರಾಜ್ ಅವರನ್ನು ವಿಶೇಷವಾಗಿ ಅಭಿನಂದಿಸಿದರು. ಇಲ್ಲಿನ ಅಭಿವೃದ್ಧಿ ಕೆಲಸಗಳ ಕುರಿತ ವರದಿಯನ್ನು ಕೇಂದ್ರಕ್ಕೆ ಸಲ್ಲಿಸುವುದಾಗಿ ಎನ್‌ಐಆರ್‌ಡಿ ಅಧಿಕಾರಿಗಳು ತಿಳಿಸಿದ್ದಾರೆ.