ಬೆಂಗಳೂರು: “ಜಾತಿ-ಧರ್ಮಗಳು ಬೇರೆಯಾದರೂ, ನಾವೆಲ್ಲರೂ ಭಾರತೀಯರು. ಈ ಪರಿಕಲ್ಪನೆಯಲ್ಲಿ ದೇಶವನ್ನು ಕಟ್ಟುವ ಅವಶ್ಯಕತೆ ಇದೆ,’ ಎಂದು ಆರ್ಚ್ ಬಿಷಪ್ ಆಫ್ ಬೆಂಗಳೂರು ರೆವರೆಂಡ್ ಡಾ.ಬರ್ನಾಡ್ ಮೊರಸ್ ತಿಳಿಸಿದರು.
ನಗರದ ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಗುರುವಾರ ಹಮ್ಮಿಕೊಂಡಿದ್ದ ಕ್ರಿಸ್‌ಮಸ್ ಮತ್ತು ಹೊಸ ವರ್ಷಾಚರಣೆ ಉದ್ಘಾಟಿಸಿ ಅವರು ಮಾತನಾಡಿ, ಮನುಷ್ಯರನ್ನು ಪರಸ್ಪರ ಪ್ರೀತಿಸುವುದನ್ನು ಕಲಿಯಬೇಕು.
ನಮ್ಮ ಜಾತಿ-ಧರ್ಮಗಳು ಬೇರೆ ಬೇರೆ ಆಗಿರಬಹುದು. ಆದರೆ, ನಮ್ಮಲ್ಲಿ ನೆಲೆಸಿರುವ ಮನುಷ್ಯತ್ವ ಒಂದೇ. ಈ ಮನುಷ್ಯತ್ವದ ಬೀಜ ಬಿತ್ತಲಿಕ್ಕಾಗಿಯೇ ದೇವಪುತ್ರ ಏಸು ಲೋಕದಲ್ಲಿ ಮನುಷ್ಯ ರೂಪದಲ್ಲಿ ಅವತರಿಸುತ್ತಾನೆ ಎಂದ ಅವರು, ಶಾಂತಿ-ಸಹಬಾಳ್ವೆಯಿಂದ ಬದುಕಬೇಕು ಎಂದು ಹೇಳಿದರು.
ನಿವೃತ್ತ ಪೊಲೀಸ್ ಮಹಾನಿರ್ದೇಶಕ ಎಫ್ಟಿಆರ್ ಕೊಲಾಸೊ ಮಾತನಾಡಿ, ಆಕಸ್ಮಿಕವಾಗಿ ನಾವು ಬೇರೆ ಬೇರೆ ಜಾತಿ-ಧರ್ಮಗಳಲ್ಲಿ ಜನಿಸಿದ್ದೇವೆ. ಆದರೆ, ಮೂಲತಃ ನಾವೆಲ್ಲರೂ ಮಾನವೀಯ ಮೌಲ್ಯಗಳನ್ನು ಹೊಂದಿರುವ ಮನುಷ್ಯರು ಎಂದು ತಿಳಿಸಿದರು.
ನಮ್ಮೆಲ್ಲರಲ್ಲಿ ಹರಿಯುತ್ತಿರುವ ರಕ್ತ ಒಂದೇ ಎನ್ನುವುದನ್ನು ಮರೆಯಬಾರದು. ಮತ್ತೂಬ್ಬರ ಮೇಲೆ ನಮ್ಮ ಆದರ್ಶಗಳನ್ನು ಹೇರುವುದು ಸಲ್ಲದು ಎಂದ ಅವರು, ಇಡೀ ವಿಶ್ವದಲ್ಲಿ ಭಾರತ ಮುಂಚೂಣಿಯಲ್ಲಿ ನಿಲ್ಲುವ ಸಾಮರ್ಥ್ಯ ಹೊಂದಿದೆ. ಆದರೆ, ಶಾಂತಿ ಮತ್ತು ಸಾಮರಸ್ಯದ ತಳಹದಿಯಲ್ಲಿ ನಮ್ಮನ್ನು ಆಳುವ ನಾಯಕರ ಅವಶ್ಯಕತೆ ಇದೆ ಎಂದು ಹೇಳಿದರು.
ಭಾರತ್ ಸ್ಕೌಟ್ಸ್ ಆಂಡ್ ಗೈಡ್ಸ್‌ನ ರಾಜ್ಯ ಮುಖ್ಯ ಆಯುಕ್ತ ಪಿ.ಜಿ.ಆರ್. ಸಿಂಧ್ಯಾ, ಉಪಾಧ್ಯಕ್ಷರಾದ ಕೊಂಡಜ್ಜಿ ಬಿ. ಷಣ್ಮುಖಪ್ಪ ಮತ್ತು ಭಾರತಿ ಚಂದ್ರಶೇಖರ್, ಕಾರ್ಯದರ್ಶಿ ಚಿನ್ನಸ್ವಾಮಿ ರೆಡ್ಡಿ, ಜಿಲ್ಲಾ ಘಟಕದ ಆಯುಕ್ತರಾದ ಪಿ. ಸರೋಜಾ, ಭಾರತ್ ಸ್ಕೌಟ್ಸ್ ಆಂಡ್ ಗೈಡ್ಸ್ ರಾಷ್ಟೀಯ ಆಯುಕ್ತ (ಸ್ಕೌಟ್ಸ್) ಎಂ.ಎ. ಖಾಲಿದ್ ಮತ್ತಿತರರು ಉಪಸ್ಥಿತರಿದ್ದರು.