ಪುತ್ತೂರು :ಸೈನಿಕನಾಗಿ ದೇಶ ರಕ್ಷಣೆಗೆ ಜೀವನ ಸಮರ್ಪಿಸಿಕೊಳ್ಳುವುದು ಅತ್ಯಂತ ಪುಣ್ಯದ ಕಾರ್ಯ. ಇಂತಹ ದೇಶ ರಕ್ಷಕ ಕುಟುಂಬದ ಕುಡಿ ರಾಧೇಶ್ ಆರ್.ಗೌಡ ಅವರು ಕ್ಯಾಪ್ಟನ್ ಆಗಿ ಪದೋನ್ನತಿ ಗೊಂಡು ಕಾರ್ಗಿಲ್‌ಗೆ ತೆರಳುತ್ತಿರುವುದು ಪುತ್ತೂರಿಗರ ಸೌಭಾಗ್ಯ ಎಂದು ಶಾಸಕಿ ಶಕುಂತಳಾ ಟಿ. ಶೆಟ್ಟಿ ಹೇಳಿದರು.
ಬಪ್ಪಳಿಗೆ ಅಂಬಿಕಾ ವಿದ್ಯಾಲಯದ ಸಭಾಂಗಣದಲ್ಲಿ ಭಾರತೀಯ ಭೂಸೇನೆಯ ಕ್ಯಾಪ್ಟನ್ ಆಗಿ ಪದೋನ್ನತಿ ಗೊಂಡಿರುವ ಎಪಿಎಂಸಿ ನಿವಾಸಿ ರಾಧೇಶ್ ಆರ್. ಗೌಡ ಅವರ ಸಾರ್ವಜನಿಕ ಅಭಿ ನಂದನ ಸಮಾರಂಭದಲ್ಲಿ ಸಮ್ಮಾನಿಸಿ ಅವರು ಮಾತನಾಡಿದರು.
ಸೈನಿಕರ ನೆನಪು ಎಷ್ಟು ಮಂದಿಗೆ ಇದೆ ಅನ್ನುವ ಬಗ್ಗೆ ಯೋಚಿಸಬೇಕಾದ ಹೊತ್ತು. ಆದರೆ ಓರ್ವ ಸೈನಿಕ ಗಡಿಯಲ್ಲಿ ಕಠಿನ ಸ್ಥಿತಿಯಲ್ಲೂ ದೇಶ ಕಾಯುವ ಆತನ ದೇಶ ಭಕ್ತಿಯನ್ನು ನಿತ್ಯವೂ ನೆನಪಿಸಿಕೊಳ್ಳಬೇಕು ಎಂದ ಅವರು, ತನ್ನ ಇಬ್ಬರು ಪುತ್ರರನ್ನು ದೇಶಸೇವೆಗೆ ಕಳುಹಿಸಿದ ಮಾಜಿ ಸೈನಿಕ ರಾಧಾಕೃಷ್ಣ ಗೌಡ ಮತ್ತು ಉಷಾ ರಾಧಾಕೃಷ್ಣ ದಂಪತಿ ಎಲ್ಲ ಹೆತ್ತವರಿಗೆ ಮಾದರಿ ಎಂದು ಶಾಸಕಿ ಶ್ಲಾಘಿಸಿದರು.
ದೇಶದ ಕೀರ್ತಿ ಪತಾಕೆ ಹತ್ತೂರಿನಲ್ಲಿ ಪಸರಿಸುವ ಕೆಲಸ ಇಲ್ಲಿ ನಡೆದಿದೆ. ಸಿಯಾಚಿನ್, ಕಾರ್ಗಿಲ್‌ನಂತಹ ಯುದ್ಧ ಭೂಮಿ ಅತ್ಯಂತ ಕಠಿನವಾದದು. ಇದು ರಾಧೇಶ್ ಗೌಡ ಅವರ ಹೆತ್ತವರಿಗೂ ತಿಳಿದಿದೆ. ಆದರೂ ಮಕ್ಕಳನ್ನು ದೇಶ ಸೇವೆಗೆ ಕಳುಹಿಸಿ, ಇನ್ನುಳಿದವರಿಗೆ ಪ್ರೇರಕ ಶಕ್ತಿಗಳಾಗಿದ್ದಾರೆ. ಅಂತಹ ಮನಃಸ್ಥಿತಿ ಎಲ್ಲ ಹೆತ್ತವರಲ್ಲೂ ಮೂಡಲಿ ಎಂದರು.
ಕಾರ್ಗಿಲ್‌ನಲ್ಲೂ ಯಶಸ್ಸು ಸಾಧಿಸಿ ಊರಿಗೆ ಬರಬೇಕು. ಆ ವೇಳೆ ಪುತ್ತೂರಿನಲ್ಲಿ ಬೃಹತ್ ಕಾರ್ಯಕ್ರಮ ಆಯೋಜಿಸಿ ಸಮ್ಮಾನಿಸುವ ಸೌಭಾಗ್ಯ ಎಲ್ಲರಿಗೂ ದೊರೆ ಯಲಿ ಎಂದು ಹೇಳಿದರು.
ಸಮ್ಮಾನ ಸ್ವೀಕರಿಸಿದ ರಾಧೇಶ್ ಆರ್. ಗೌಡ ಅವರು ಮಾತನಾಡಿ, ತಂದೆ, ಅಣ್ಣನಂತೆ ಸೈನಿಕನಾಗುವ ಕನಸಿತ್ತು. ಅದಕ್ಕೆ ಮನೆಯಲ್ಲಿಯೂ ಉತ್ತಮ ಬೆಂಬಲ ಸಿಕ್ಕಿತ್ತು. ದೇಶ ಸೇವೆಯಲ್ಲಿ ದೊರೆಯುವ ಆತ್ಮ ಸಂತೃಪ್ತಿ ಅತ್ಯಂತ ಶ್ರೇಷ್ಠವಾದುದು ಎಂದು ಹೇಳಿದರು.