ಬೆಂಗಳೂರು: ದೇಶ ವಿಭಜನೆಯಾಗಿರುವುದನ್ನು ರಾಜಕೀಯವಾಗಿ ಒಪ್ಪಿದರೂ, ಸಾಂಸ್ಕೃತಿಕವಾಗಿ ಒಪ್ಪಲು ಸಾಧ್ಯವಿಲ್ಲ ಎಂದು ಕೇಂದ್ರ ಕೌಶಲಾಭಿವೃದ್ಧಿ ಸಚಿವ ಅನಂತ್ ಕುಮಾರ್ ಹೆಗಡೆ ಅಭಿಪ್ರಾಯ ವ್ಯಕ್ತಪಡಿಸಿದರು.
ಬಸವನಗುಡಿಯ ಅಬಲಾಶ್ರಮದಲ್ಲಿ ಭಾನುವಾರ ಜಾಗೃತ ಭಾರತಿ ಪ್ರಕಾಶನದ ವತಿಯಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ “ವಿಭಜಿತ ಭಾರತ-1947′ ಎಂಬ ವಿಷಯ ಕುರಿತು ಉಪನ್ಯಾಸ ನೀಡಿದ ಅವರು, ಭಾರತದಿಂದ ಬೇರಾದ ಭೂ ಭಾಗವನ್ನು ಮುಂದೊಂದು ದಿನ ಪಡೆಯುತ್ತೇವೆ. ಅದು ಪ್ರೀತಿಯಿಂದಲೋ ಅಥವಾ ರಾಜಕೀಯವಾಗಿಯೋ ಎಂಬುದು ಮುಂದೆ ತಿಳಿಯಲಿದೆ ಎಂದು ಹೇಳಿದರು.
ಕೆಲವು ರಾಜಕೀಯ ನಾಯಕರ ನಿರ್ಲಕ್ಷ್ಯ ಹಾಗೂ ವೈಯಕ್ತಿಕ ಹಿತಾಸಕ್ತಿಯಿಂದ ದೇಶ ವಿಭಜನೆಯಾಗಿದೆ. ದೇಶದ ಸ್ವಾತಂತ್ರ್ಯಕ್ಕಾಗಿ ಅನೇಕರು ಕ್ರಾಂತಿಕಾರಿ ಹೋರಾಟ ಮಾಡಿದ್ದಾರೆ. ವಿ.ಡಿ.ಸಾರ್ವಕರ್ ಸ್ವಾತಂತ್ರ್ಯಕ್ಕಾಗಿಯೇ ಅತಿ ಹೆಚ್ಚು ವರ್ಷ ಜೈಲು ವಾಸ ಅನುಭವಿಸಿದ್ದರು. ಇಂದು ಅಮೇರಿಕ, ಜಪಾನ್ ಮತ್ತು ಇಸ್ರೇಲ್ ಮೊದಲಾದ ದೇಶಗಳು ಭಾರತದ ಬಲಗಡೆ ಇದೆಯೋ ಹೊರತು ಪಾಕಿಸ್ತಾನವಲ್ಲ ಎಂದರು.
ಜಾತ್ಯಾತೀತರು ಎಂದು ಹೇಳಿಕೊಂಡು ಓಡಾಡುವವರು ಹೆಚ್ಚಾಗಿದ್ದಾರೆ. ಹೀಗೆ ಹೇಳಿಕೊಂಡು ಓಡಾಡುವವರಿಗೆ ಅವರ ತಂದೆ-ತಾಯಿಯ ಪರಿಚಯ ಇರುವುದಿಲ್ಲ. ಆದರೂ, ಜ್ಯಾತಾತೀತತೆ ಕುರಿತು ಭಾಷಣ ಮಾಡುತ್ತಾರೆ. ಇನ್ನು ಕೆಲವರಿಗೆ ಪ್ರಜಾಪ್ರಭುತ್ವದ ಬಗ್ಗೆ ಮಾತನಾಡುವ ಯೋಗ್ಯತೆ ಇಲ್ಲದೇ ಇದ್ದರೂ ಮಾತನಾಡುತ್ತಾರೆ. ಇದಕ್ಕಾಗಿ ಒಂದು ಒಕ್ಕೂಟವನ್ನು ಆರಂಭಿಸಿಕೊಂಡಿದ್ದಾರೆ ಎಂದು ಕಿಡಿ ಕಾರಿದರು.
ಗುಲಾಮಗಿರಿಯನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಬುದ್ಧಿಜೀವಿಗಳು ರಾಮ ಮಂದಿರದ ಬದಲಿಗೆ ಶೌಚಾಲಯ ಕಟ್ಟುವಂತೆ ಹೇಳುತ್ತಿದ್ದಾರೆ. ಅದೇ ರಾಮಮಂದಿರ ನಮ್ಮ ಸಂಸ್ಕೃತಿಯ ಪ್ರತೀಕ ಎಂಬುದು ಬುದ್ಧಿಜೀವಿಗಳಿಗೆ ತಿಳಿದಿಲ್ಲ ಎಂದು ವಾಗ್ಧಾಳಿ ನಡೆಸಿದರು.