ದೇವನಹಳ್ಳಿ: ಪ್ರತಿ ವಿದ್ಯಾರ್ಥಿಯಲ್ಲೂ ಗುಣಮಟ್ಟದ ಶಿಕ್ಷಣದ ಜೊತೆಗೆ ಪರಿಸರ ಪ್ರಜ್ಞೆ ಮೂಡಿಸಲಾಗುವುದು. ದೇಶ ಭಕ್ತಿ, ಶಿಸ್ತು, ಬದುಕುವ ಕಲೆ, ಸದಾ ಸೇವೆಗಾಗಿ ಬಾಳುವುದನ್ನು ಮಕ್ಕಳಿಗೆ ಕಲಿಸುವುದೇ ಸ್ಕೌಟ್ಸ್ ಮತ್ತು ಗೈಡ್ಸ್‌ನ ಮೂಲ ಉದ್ದೇಶ ಎಂದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಮುಖ್ಯ ಆಯುಕ್ತ ಬಿ.ಕೆ.ಶಿವಪ್ಪ ತಿಳಿಸಿದರು.
ಪಟ್ಟಣದ ಹೊಸಕುರುಬರಕುಂಟೆ ರಸ್ತೆಯಲ್ಲಿರುವ ಎಸ್‌ಎಲ್‌ಎಸ್ ಶಾಲೆಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ ವತಿಯಿಂದ ಹಮ್ಮಿಕೊಂಡಿದ್ದ ಮಹಾತ್ಮ ಗಾಂಧೀಜಿ ಹಾಗೂ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರೀ ಜನ್ಮ ದಿನಾಚರಣೆ ಪ್ರಯುಕ್ತ ಹಮ್ಮಿಕೊಂಡಿದ್ದ ಸ್ವತ್ಛತಾ ಕಾರ್ಯಕ್ರಮ ಹಾಗೂ ಸರ್ವಧರ್ಮ ಪ್ರಾರ್ಥನಾ ಶಿಬಿರದಲ್ಲಿ ಭಾಗವಹಿಸಿ ಮಾತನಾಡಿದರು.
ದೇಶ ಶರವೇಗದಲ್ಲಿ ಬೆಳೆಯುತ್ತಿದೆ. ಇಲ್ಲಿರುವ ಮಾನವ ಸಂಪನ್ಮೂಲವನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳಬೇಕಾಗಿದೆ. ಮಕ್ಕಳನ್ನು ಜವಾಬ್ದಾರಿಯುತ ವ್ಯಕ್ತಿಗಳನ್ನಾಗಿ ರೂಪಿಸುವುದು ನಮ್ಮೆಲ್ಲರ ಕರ್ತವ್ಯ. ಮಕ್ಕಳಿಗೆ ಸಂಸ್ಕಾರ, ಮಾರ್ಗದರ್ಶನ, ಜವಾಬ್ದಾರಿಗಳನ್ನು ತಿಳಿಸಬೇಕು. ಈ ಮೂಲಕ ಉತ್ತಮ ವ್ಯಕ್ತಿಗಳನ್ನಾಗಿ ರೂಪಿಸುವುದು ನಮ್ಮೆಲ್ಲರ ಜವಾಬ್ದಾರಿ. ಲಾಲ್ ಬಹದ್ದೂರ್ ಶಾಸ್ತ್ರೀ ಅವರ ಆದರ್ಶಗಳನ್ನು ಮಕ್ಕಳು ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಕಿವಿಮಾತು ಹೇಳಿದರು.
ಮೌಲ್ಯ ಅಳವಡಿಸಿಕೊಳ್ಳಿ: ಜಿಲ್ಲಾ ಆಯುಕ್ತ (ಸ್ಕೌಟ್ಸ್) ನಾಗರಾಜ್ ಮಾತನಾಡಿ, ಗಾಂಧೀಜಿಯವರ ಜೀವನದ ಮೌಲ್ಯಗಳನ್ನು ಮಕ್ಕಳು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ಉತ್ತಮ ಸಮಾಜವನ್ನು ನಿರ್ಮಿಸುವಲ್ಲಿ ಎಲ್ಲರೂ ಕೈಜೋಡಿಸಬೇಕು. ರಾಮರಾಜ್ಯದ ಕನಸು ನನಸಾಗಲು ನಾವೆಲ್ಲರೂ ಜವಾಬ್ದಾರಿಗಳನ್ನು ಅರಿಯಬೇಕು. ಎಲ್ಲರೂ ತಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವತ್ಛವಾಗಿಟ್ಟುಕೊಳ್ಳಬೇಕು. ಮನೆಯ ಸುತ್ತಲೂ ಖಾಲಿ ಜಾಗವಿದ್ದರೆ ಗಿಡಗಳನ್ನು ನೆಟ್ಟು ಪರಿಸರವನ್ನು ಕಾಪಾಡಬೇಕು. ಮಕ್ಕಳು ತಮ್ಮ ಕೆಲಸಗಳನ್ನು ತಾವೇ ಮಾಡಿಕೊಳ್ಳಬೇಕು ಎಂದರು.
ಶಾಲೆಯ ಸಂಸ್ಥಾಪಕ ಕಾರ್ಯದರ್ಶಿ ಧನಂಜಯ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಶಿಬಿರದ ನಾಯಕಿ ಮತ್ತು ಜಿಲ್ಲಾ ಪ್ರತಿನಿಧಿ ಬೇಬಿ ನಾಯಕ್ ಸರ್ವ ಧರ್ಮ ಪ್ರಾರ್ಥನೆ ನಡೆಸಿಕೊಟ್ಟರು. ಜಿಲ್ಲಾ ತರಬೇತಿ ಆಯುಕ್ತ ಕೆ.ಜವರಯ್ಯ, ಜಿಲ್ಲಾ ಕಾರ್ಯದರ್ಶಿ ಶ್ರೀನಿವಾಸ ಪ್ರಸಾದ್, ಜಿಲ್ಲಾ ಖಜಾಂಚಿ ಸಾವಕನಹಳ್ಳಿ ಗೋಪಾಲಸ್ವಾಮಿ, ಶಿಕ್ಷಕರು ಮತ್ತಿತರರು ಇದ್ದರು.