ಅಫಜಲಪುರ: ಹಳ್ಳಿಗಳು ಅಭಿವೃದ್ಧಿ ಆದಾಗ ಮಾತ್ರ ದೇಶ ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ. ಹೀಗಾಗಿ ಈ ಗ್ರಾಮಕ್ಕೆ ಬೇಕಾಗುವ ಎಲ್ಲ ಮೂಲ ಸೌಕರ್ಯ ಒದಗಿಸಲು ಸದಾ ಸಿದ್ಧನಾಗಿದ್ದೇನೆ ಎಂದು ಶಾಸಕ ಎಂ.ವೈ.ಪಾಟೀಲ ಭರವಸೆ ನೀಡಿದರು.
ಲೋಕೋಪಯೋಗಿ ಇಲಾಖೆ 2021-22ನೇ ಸಾಲಿನ ಕೆಕೆಆರ್‌ಡಿಬಿ ಯೋಜನೆ ಅಡಿಯಲ್ಲಿ ತಾಲೂಕಿನ ಬಂಕಲಗಾ ಗ್ರಾಮದಿಂದ ಗೌರ(ಕೆ) ಗ್ರಾಮದ ಕೂಡು ರಸ್ತೆ ನಿರ್ಮಾಣ (99 ಲಕ್ಷ ರೂ. ವೆಚ್ಚದ) ಕಾಮಗಾರಿಗೆ ಅಡಿಗಲ್ಲು ನೆರವೇರಿಸಿ ಅವರು ಮಾತನಾಡಿದರು.
ಬಂಕಲಗಾ ಗ್ರಾಮಕ್ಕೆ ಶಾಶ್ವತ ವಿದ್ಯುತ್ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ 110 ಕೆಬಿ ವಿದ್ಯುತ್ ಘಟಕ ಮಂಜೂರು ಮಾಡಲಾಗಿದೆ. ಈ ಕಾಮಗಾರಿ ಶೀಘ್ರದಲ್ಲೇ ಪ್ರಾರಂಭವಾಗಲಿದೆ. ಪ್ರವಾಹ ಬಂದಾಗ ರೋಗರುಜಿನಗಳು ಹೆಚ್ಚಾಗುತ್ತಿದ್ದು ಜನ ಜೀವನ ಅಸ್ತವ್ಯಸ್ತ ಆಗುತ್ತಿದೆ. ಆದ್ದರಿಂದ ಈಗಾಗಲೇ ಸ್ವಲ್ಪ ಪ್ರಮಾಣದಲ್ಲಿ ಈ ಗ್ರಾಮವನ್ನು ಹೊಸ ಬಡಾವಣೆಗೆ ಸ್ಥಳಾಂತರಿಸಲಾಗಿದೆ. ಇನ್ನುಳಿದ ಕುಟುಂಬಗಳನ್ನು ಸ್ಥಳಾಂತರಗೊಳಿಸಿ ಅವರಿಗೆ ಮೂಲಸೌಕರ್ಯ ಒದಗಿಸುವ
ನಿಟ್ಟಿನಲ್ಲಿ ಸರ್ಕಾರದ ಮೇಲೆ ಈಗಾಗಲೇ ಒತ್ತಡ ಹೇರಲಾಗಿದೆ ಎಂದರು.
ಗ್ರಾಮದಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಾಲೆ ವ್ಯವಸ್ಥೆಯಿದ್ದು ಕಾಲೇಜಿಗಾಗಿ ಬೇರೆಡೆ ಹೋಗುವ ದುಸ್ಥಿತಿ ಇದೆ. ಆದ್ದರಿಂದ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಕಾಲೇಜು ನಿರ್ಮಾಣಕ್ಕೆ ಸರ್ಕಾರದ ಗಮನಕ್ಕೆ ತಂದು ಅನುಮೋದನೆ ಮಾಡಿಸಲಾಗುವುದು. ಈ ಕಾಮಗಾರಿ ಗುಣಮಟ್ಟದಿಂದ ಮಾಡಿ ಜನರಿಗೆ ಅನುಕೂಲ ಕಲ್ಪಿಸಬೇಕು ಎಂದು ಲೋಕೋಪಯೋಗಿ ಇಲಾಖೆ ಎಇಇಗೆ ಸೂಚನೆ ನೀಡಿದರು.
ಮುಖಂಡರಾದ ಶಿವಾನಂದ ಗಾಡಿ ಸಾಹುಕಾರ, ಶರಣು ಕುಂಬಾರ, ಅಂಬರೀಷ ಬುರಲಿ, ಕಾಶಿನಾಥ ನೀಲಂಗಿ, ಕಲ್ಲಪ್ಪ ಪ್ಯಾಟಿ, ಬಸವರಾಜ ಮೊಟೆ, ರಾಜಶೇಖರ ನೂಲಾ, ಚಂದ್ರಶಾ ಸೂತೋಡೆ,ಚಂದ್ರಕಾಂತ ದೊಡ್ಡಮನಿ, ಭೀಮರಾಯ ಗೌರ, ಬಸವರಾಜ ಕಾಂಬಳೆ, ಬಸವರಾಜ ಪಾಟೀಲ, ಭೀಮಾಶಂಕರ ಜಾಮಗೊಂಡ, ಇಲಾಖೆ ಎಇಇ ಸಿದ್ಧರಾಮ ಅಜಗೊಂಡ ಇನ್ನಿತರರು ಇದ್ದರು.