ನವದೆಹಲಿ:“ಭಾರತದ ಮೇಲೆ ವಿದೇಶಿಗರು ಆಕ್ರಮಣ ನಡೆಸಿ, ಆಳಿದ್ದರು ಎಂಬುದು ಇತಿಹಾಸದ ಸತ್ಯ. ನಮಗೆ ಬೇಕಾದಂತೆ ಇತಿಹಾಸವನ್ನು ಬದಲಿಸಲು ಸಾಧ್ಯವಿಲ್ಲ. ಯಾವುದೇ ದೇಶದ ಇತಿಹಾಸವು ಆ ದೇಶದ ವರ್ತಮಾನ ಹಾಗೂ ಭವಿಷ್ಯದ ಪೀಳಿಗೆಯನ್ನು ಕಾಡುವಂತಿರಬಾರದು’ ಎಂದು ಸುಪ್ರೀಂಕೋರ್ಟ್ ಅಭಿಪ್ರಾಯ ಪಟ್ಟಿದೆ.
ವಿದೇಶಿ ಆಕ್ರಮಣಕಾರರಿಂದ ಹೆಸರು ಬದಲಾಗಿರುವ ದೇಶದ ಸಾಂಸ್ಕೃತಿಕ, ಪ್ರಾಚೀನ ಹಾಗೂ ಧಾರ್ಮಿಕ ಕ್ಷೇತ್ರಗಳ ಮೂಲ ಹೆಸರನ್ನೇ ಮತ್ತೆ ಇಡಲು ಮರು ನಾಮಕರಣ ಆಯೋಗ ರಚಿಸಬೇಕು ಎಂದು ಕೋರಿ ವಕೀಲ ಅಶ್ವಿನಿ ಉಪಾಧ್ಯಾಯ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಕೆ.ಎಂ.ಜೋಸೆಫ್ ಹಾಗೂ ನ್ಯಾ..ಬಿ.ವಿ. ನಾಗರತ್ನ ಅವರ ನ್ಯಾಯಪೀಠ ವಜಾಗೊಳಿಸಿದೆ.
ಇಂಥ ಅರ್ಜಿಗಳ ಮೂಲಕ ದೇಶದಲ್ಲಿ ವಿವಾದದ ಬೆಂಕಿ ಹೊತ್ತಿಸಕೂಡದು ಎಂದು ನ್ಯಾಯಪೀಠ ಸೂಚಿಸಿದೆ. ವಿದೇಶಿಗರ ಆಕ್ರಮಣ ಮತ್ತು ಆಡಳಿತ ಇತಿಹಾಸದ ಭಾಗವಾಗಿದೆ. ಈಗ ನಾವು ನಮಗೆ ಬೇಕಾದದ್ದನ್ನು ಆಯ್ದ ಇತಿಹಾಸ ಪುಟಗಳಲ್ಲಿ ಸೇರಿಸಲು ಸಾಧ್ಯವಿಲ್ಲ. ಅಲ್ಲದೇ, ಭಾರತ ಜಾತ್ಯತೀತ ರಾಷ್ಟ್ರ, ಹಿಂದೂ ಎನ್ನುವುದು ಒಂದು ಜೀವನಕ್ರಮ. ಅದು ಎಲ್ಲರನ್ನೂ ಒಗ್ಗೂಡಿಸಿದೆ. ಅದರಲ್ಲಿ ಧರ್ಮಾಂಧತೆ ಇಲ್ಲ ಎಂಬುದನ್ನು ಸ್ಪಷ್ಟಪಡಿಸಿ, ವಿವಾದಗಳನ್ನು ಜೀವಂತವಿರಿಸುವಂಥ ಅರ್ಜಿಗಳು ಸಲ್ಲದು ಎಂದು ಹೇಳಿದೆ.
ಅರ್ಜಿಯಲ್ಲಿ ಏನಿತ್ತು?
ದೇಶದ ಮೇಲೆ ದಾಳಿ ನಡೆಸಿದ ಆಕ್ರಮಣಕಾರರ ಹೆಸರನ್ನೇ ಐತಿಹಾಸಿಕ, ಪೌರಾಣಿಕ, ಧಾರ್ಮಿಕ ಸ್ಥಳಗಳಿಗೆ ಇಟ್ಟಿರುವುದು ಸಂವಿಧಾನದ ಅನ್ವಯ ನೀಡಿರುವ ಸಾರ್ವಭೌಮತ್ವ ಹಾಗೂ ನಾಗರಿಕ ಹಕ್ಕಿನ ಉಲ್ಲಂಘನೆಯಾಗಿದೆ. ಈ ಬಗ್ಗೆ ಕ್ರಮ ಕೈಗೊಳ್ಳಲು ಮತ್ತೆ ಮೂಲ ಹೆಸರುಗಳನ್ನಿಡಲು ಆಯೋಗ ರಚಿಸಲು ಸರ್ಕಾರಕ್ಕೆ ನಿರ್ದೇಶನ ನೀಡಲು ಅರ್ಜಿಯಲ್ಲಿ ಕೋರಲಾಗಿತ್ತು.