ಚೆನ್ನೈ: ನಮ್ಮ ರಾಜ್ಯಗಳಲ್ಲಿ ಬೇರೆ ಬೇರೆ ರಾಜಕೀಯ ಪಕ್ಷಗಳು ಆಡಳಿತ ನಡೆಸುತ್ತಿವೆ. ನಾವೆಲ್ಲರೂ ಒಟ್ಟಾಗಿ ಜನರ ಹಿತಕ್ಕಾಗಿ ಕೆಲಸ ಮಾಡಬೇಕು. ರಾಜ್ಯ ಅಭಿವೃದ್ಧಿಯಾದರೆ ದೇಶ ಅಭಿವೃದ್ಧಿಯಾಗುತ್ತದೆ. ರಾಜ್ಯಗಳ ಅಭಿವೃದ್ಧಿ ಇಲ್ಲದೆ ದೇಶ ಎಂದಿಗೂ ಅಭಿವೃದ್ಧಿ ಹೊಂದಲು ಸಾಧ್ಯವಿಲ್ಲ ಎಂದು ಉಪರಾಷ್ಟ್ರಪತಿ ಎಂ ವೆಂಕಯ್ಯ ನಾಯ್ಡು ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.
ವೆಂಕಯ್ಯ ನಾಯ್ಡು ಅವರು ತಮಿಳುನಾಡು ಸಿಎಂ ಎಂಕೆ ಸ್ಟಾಲಿನ್ ಅವರೊಂದಿಗೆ ಚೆನ್ನೈನ ಟ್ರಿಪ್ಲಿಕೇನ್‌ನಲ್ಲಿರುವ ಒಮಂಡೂರರ್ ಸರ್ಕಾರಿ ಎಸ್ಟೇಟ್‌ನಲ್ಲಿ ತಮಿಳುನಾಡು ಮಾಜಿ ಸಿಎಂ ಎಂ ಕರುಣಾನಿಧಿ ಅವರ 16 ಅಡಿ ಎತ್ತರದ ಕಂಚಿನ ಪ್ರತಿಮೆಯನ್ನು ಅನಾವರಣಗೊಳಿಸಿದರು ಮತ್ತು ಪುಷ್ಪ ನಮನ ಸಲ್ಲಿಸಿದರು.
ಸಾರ್ವಜನಿಕ ಜೀವನದಲ್ಲಿ ರಾಜಕಾರಣಿಗಳು ಪರಸ್ಪರ ಗೌರವಿಸಬೇಕು. ನಾವು ಶತ್ರುಗಳಲ್ಲ ಆದರೆ ನಾವು ಕೇವಲ ರಾಜಕೀಯ ಪ್ರತಿಸ್ಪರ್ಧಿಗಳು. ಆಧುನಿಕ ರಾಜಕಾರಣಿಗಳಿಗೆ ಇದು ನನ್ನ ಸಲಹೆ, ನೀವು ಈ ಭಾಗದವರಾಗಿರಬಹುದು ಅಥವಾ ಆ ಪಕ್ಷದವರಾಗಿರಬಹುದು ಆದರೆ ನಾವೆಲ್ಲರೂ ಈ ಮಹಾನ್ ದೇಶಕ್ಕೆ ಸೇರಿದವರು ಎಂದರು.
ಪ್ರತಿಯೊಂದು ಭಾರತೀಯ ಭಾಷೆಯು ಅತ್ಯಂತ ಶ್ರೀಮಂತವಾಗಿದೆ. ನಾವು ನಮ್ಮ ಮಾತೃಭಾಷೆ, ಮಾತೃಭೂಮಿಯನ್ನು ಉತ್ತೇಜಿಸಬೇಕು. ನಾವು ಯಾವುದೇ ಭಾಷೆಯನ್ನು ವಿರೋಧಿಸಬಾರದು ಆದರೆ ನಮ್ಮ ಭಾಷೆಯನ್ನು ಬೆಂಬಲಿಸಬೇಕು. ಯಾವುದೇ ಭಾಷೆಯ ಹೇರಿಕೆ ಇಲ್ಲ ಮತ್ತು ಯಾವುದೇ ಭಾಷೆಗೆ ವಿರೋಧವಿಲ್ಲ ಎಂದರು.