ಮಹಾನಗರ: ವ್ಯಕ್ತಿತ್ವ ನಿರ್ಮಾಣದಿಂದಲೇ ರಾಷ್ಟ್ರ ಪುನಃ ನಿರ್ಮಾಣ ಸಾಧ್ಯ ಎಂಬ ಉಕ್ತಿಯನ್ನೇ ಧ್ಯೇಯವಾಗಿರಿಸಿಕೊಂಡು ಸತತ 7 ದಶಕಗಳಿಂದ ರಾಷ್ಟ್ರಪರ ನಿಲುವಿಗೆ ಬದ್ಧರಾಗಿ ಕಾರ್ಯನಿರ್ವಹಿಸುತ್ತಿರುವ ಸಂಘಟನೆ ಅಖೀಲ ಭಾರತೀಯ ವಿದ್ಯಾರ್ಥಿ ಪರಿಷತ್ ಎಂದು ವಿದ್ಯಾರ್ಥಿ ಪರಿಷತ್‌ನ ರಾಜ್ಯ ಉಪಾಧ್ಯಕ್ಷ ಡಾ| ರೋಹಿಣಾಕ್ಷ ಶಿರ್ಲಾಲು ಅಭಿಪ್ರಾಯ ಪಟ್ಟರು.
ಶ್ರೀ ರಾಮ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿದ್ಯಾರ್ಥಿ ಪರಿಷತ್ ರಜಾ ಕಾಲದ ಚಟುವಟಿಕೆಯ ಅಂಗವಾಗಿ ಮೂರು ದಿನಗಳ ಉಚಿತ ವ್ಯಕ್ತಿತ್ವ ವಿಕಸನ ಶಿಬಿರದಲ್ಲಿ ಅವರು ಮಾತನಾಡಿದರು.ವಿದ್ಯಾರ್ಥಿಗಳಲ್ಲಿ ಸಮಾಜಮುಖೀ ಚಿಂತನೆಯನ್ನು ಉದ್ದೀಪನಗೊಳಿ ಸುವುದು ವಿದ್ಯಾರ್ಥಿ ಪರಿಷತ್‌ನ ಅತಿ ಮುಖ್ಯ ಕಾರ್ಯವಾಗಿದೆ ಎಂದರು.
ಶಿಬಿರದಲ್ಲಿ ವಿದ್ಯಾರ್ಥಿಗಳಿಗೆ ಅವಶ್ಯ ವಿರುವ ವಿದ್ಯಾರ್ಥಿ ನಾಯಕತ್ವ, ರಾಷ್ಟ್ರೀಯ ಬದ್ಧತೆ, ಕೌಶಲ, ಪರಸ್ಪರ ಸಂಬಂಧಗಳು, ಯೋಗ ಮುಂತಾದ ವಿಷಯಗಳ ಕುರಿತು ಮಾಹಿತಿಗಳನ್ನು ನೀಡಲಾಯಿತು.
ಜಿಲ್ಲಾ ಸಂಚಾಲಕ ಆಶೀಶ್ ಅಜ್ಜಿಬೆಟ್ಟು, ಜಿಲ್ಲಾ ವಿದ್ಯಾರ್ಥಿನಿ ಪ್ರಮುಖರಾದ ಮನೀಷಾ ಶೆಟ್ಟಿ , ಶ್ರೀರಾಮ ವಿದ್ಯಾಕೇಂದ್ರ ಸಹ ಸಂಚಾಲಕ ರಮೇಶ್ ಕೆ. ಉಪಸ್ಥಿತರಿದ್ದರು.
ಶಿಬಿರದ ಸಂಪನ್ಮೂಲ ವ್ಯಕ್ತಿಗಳಾಗಿ ವಿವೇಕಾನಂದ ಕಾಲೇಜಿನ ಪ್ರಾಂಶುಪಾಲ ಡಾ| ಸಿ.ಕೆ. ಮಂಜುನಾಥ, ಮಣಿಪಾಲದ ಸಹಾಯಕ ಪ್ರೊ| ಸತೀಶ್ ಕುಮಾರ್, ಸಾಮಾಜಿಕ ಕಾರ್ಯಕರ್ತ ಸುರೇಶ್ ಪರ್ಕಳ, ಪ್ರವೀಣ್ ಸರಳಾಯ, ವೆಂಕಟೇಶ್ ಭಾಗವಹಿಸಿದ್ದರು. ಶಿಬಿರದಲ್ಲಿ ಒಟ್ಟು 56 ವಿದ್ಯಾರ್ಥಿಗಳು ಭಾಗವಹಿಸಿದ್ದರು.