Advertisement

ನಿರಂತರವಾಗಿದೆ ಮಹಿಳೆ ಶೋಷಣೆ

06:07 AM Jan 19, 2019 | Team Udayavani |

ದಾವಣಗೆರೆ: ಇತಿಹಾಸದುದ್ದಕ್ಕೂ ಆರ್ಥಿಕ ಮತ್ತು ರಾಜಕೀಯವಾಗಿ ಮಹಿಳೆಯರನ್ನು ದುರ್ಬಲಗೊಳಿಸುತ್ತಾ ಬರಲಾಗಿದೆ ಎಂದು ರಾಜ್ಯ ಉಚ್ಚ ನ್ಯಾಯಾಲಯದ ವಿಶ್ರಾಂತ ನ್ಯಾಯಾಧೀಶರಾದ ಎಚ್.ಎನ್‌. ನಾಗಮೋಹನ್‌ದಾಸ್‌ ವಿಷಾದ ವ್ಯಕ್ತಪಡಿಸಿದರು.

Advertisement

ನಗರದ ಜಿಲ್ಲಾ ವಕೀಲರ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಮಹಿಳಾ ಆಸ್ತಿ ಹಕ್ಕು ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಅರ್ಧದಷ್ಟು ಮಹಿಳೆಯರೇ ಇದ್ದರೂ ಅವರನ್ನು ಎರಡನೇ ದರ್ಜೆಯವರಾಗಿ ಕಾಣಲಾಗುತ್ತಿದೆ. ಜಗತ್ತಿನಾದ್ಯಂತ ಮಹಿಳೆಯರನ್ನು ಒಂದಲ್ಲ ಒಂದು ರೀತಿ ಗುಲಾಮರಂತೆ ಕಾಣುತ್ತಾ ಬರಲಾಗಿದೆ. ರಾಜಕೀಯ ಮತ್ತು ಆರ್ಥಿಕ ಅಸಮಾನತೆಗೆ ಧಾರ್ಮಿಕತೆಯ ಲೇಪನ ಮಾಡಲಾಗಿದೆ ಎಂದರು.

ಕಿತ್ತೂರು ರಾಣಿ ಚೆನ್ನಮ್ಮ, ಝಾನ್ಸಿರಾಣಿ ಲಕ್ಷ್ಮೀಬಾಯಿ ಮೊದಲಾದವರು ಯುದ್ಧದಲ್ಲಿ ತ್ಯಾಗ, ಬಲಿದಾನ ಮಾಡಿದರೂ ಕೂಡ ಅವರನ್ನು ಎಲ್ಲಿಯೂ ಕೂಡ ಆಡಳಿತಗಾರರನ್ನಾಗಿ ಕಂಡಿಲ್ಲ. ಬದಲಾಗಿ ಚರಿತ್ರೆಯಲ್ಲಿ ಮಾತ್ರ ಸ್ಥಾನ ಉಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ಇತಿಹಾಸದುದ್ದಕ್ಕೂ ಒಂದಲ್ಲ ಒಂದು ರೀತಿ ಮಹಿಳೆಯರ ಶೋಷಣೆ ಮಾಡುತ್ತಲೇ ಬರಲಾಗಿದೆ ಎಂದು ಹೇಳಿದರು.

ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ, ಪಟ್ಟಣ ಪಂಚಾಯಿತಿ, ಪುರಸಭೆ, ಮಹಾನಗರಪಾಲಿಕೆಯಲ್ಲಿ ಇಂದು ಮಹಿಳೆಗೆ ಅವಕಾಶ ನೀಡಲಾಗಿದೆಯೇ ವಿನಃ, ಕಳೆದ 22 ವರ್ಷಗಳಿಂದ ಹೋರಾಟ ಮಾಡುತ್ತಾ ಬಂದಿದ್ದರೂ ವಿಧಾನಸಭೆ, ಪಾರ್ಲಿಮೆಂಟ್‌ನಲ್ಲಿ ಅವಕಾಶ ನೀಡಿಲ್ಲ. ಇದು ನಿಜಕ್ಕೂ ಭಾರತದ ರಾಜಕೀಯ ವ್ಯವಸ್ಥೆಯ ದುರಂತ ಎಂದು ಕಳವಳ ವ್ಯಕ್ತಪಡಿಸಿದರು.

ಜಗತ್ತಿನ ಉತ್ಪಾದನೆಯ ಶ್ರಮಶಕ್ತಿಯಲ್ಲಿ ಮೂರನೆಯ ಎರಡಂಶ ಮಹಿಳೆಯರದ್ದಾಗಿದೆ. ಒಂದು ಭಾಗ ಮಾತ್ರ ಪುರುಷರ ಶ್ರಮವಾಗಿದೆ. ಆದರೆ, ಮಹಿಳೆಯರ ಶ್ರಮದ ಪ್ರತಿಫಲದ ಸಂಪತ್ತಿನ ಶೇ.100ರಲ್ಲಿ 98ರಷ್ಟು ಭಾಗ ಪುರುಷರ ಕೈಲಿದೆ. ಹಣ, ಆಸ್ತಿ, ಸೈಟ್, ಜಮೀನು, ಸಂಪತ್ತು ಎಲ್ಲಾ ಪುರುಷರ ಕೈಲಿದೆ. ಕಡಿಮೆ ಆಹಾರ ಸೇವಿಸುವ ಮಹಿಳೆಯರು ಹೆಚ್ಚು ಶ್ರಮಪಡುತ್ತಿದ್ದಾರೆ. ಆದರೆ, ಹೆಚ್ಚು ಆಹಾರ ಸೇವಿಸುವ ಪುರುಷರೇ ಕಡಿಮೆ ಶ್ರಮ ಪಡುತ್ತಿದ್ದಾರೆ ಎಂದರು.

Advertisement

12ನೇ ಶತಮಾನದಲ್ಲಿ ಬಸವಾದಿ ಶರಣರು ಜಾತಿ-ಭೇದ, ವರ್ಗ ಭೇದವಿಲ್ಲದ ಸಮಾಜ ನಿರ್ಮಾಣ ಮಾಡಲು ಹೋರಾಡಿದ್ದಾರೆ. ಬುದ್ಧ, ಬಸವಣ್ಣ, ಅಂಬೇಡ್ಕರ್‌, ಮಹಾತ್ಮ ಗಾಂಧೀಜಿ ಮೊದಲಾದವರು ಮಹಿಳಾ ಅಸಮಾನತೆ ನಿವಾರಣೆಗೆ ಸಾಕಷ್ಟು ಹೋರಾಡಿದ್ದಾರೆ. ಆದರೂ ಮಹಿಳೆಗೆ ಸಂಪೂರ್ಣ ಸ್ವಾತಂತ್ರ್ಯ ದೊರೆತಿಲ್ಲ. ಒಂದಲ್ಲ ಒಂದು ರೀತಿ ಅಸಮಾನತೆಗೆ ತುತ್ತಾಗುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಸರ್ಕಾರ ಮಹಿಳೆಯರ ಸಬಲೀಕರಣಕ್ಕಾಗಿ ಸಾಕಷ್ಟು ಕಾರ್ಯಕ್ರಮಗಳನ್ನು ರೂಪಿಸುತ್ತಿದೆ. ಇಂದು ಐಎಎಸ್‌, ಕೆಎಎಸ್‌, ಜಡ್ಜ್, ಸಾಹಿತ್ಯ, ಕ್ರೀಡೆ, ವಿಜ್ಞಾನ, ಕಲೆ ಹೀಗೆ ಎಲ್ಲಾ ಕ್ಷೇತ್ರದಲ್ಲಿ ಮಹಿಳೆಯರಿದ್ದಾರೆ. ಇಷ್ಟಾದರೂ ಸಮಾಜದಲ್ಲಿ ಬಾಲ್ಯವಿವಾಹ, ಅತ್ಯಾಚಾರ, ವರದಕ್ಷಿಣೆ ಕಿರುಕುಳ, ಅನಿಷ್ಟ ಪದ್ಧತಿಗಳ ನಿವಾರಣೆ ಆಗಿಲ್ಲ. ಬದಲಾಗಿ ಭ್ರೂಣ ಹತ್ಯೆ, ವಿವಾಹ ವಿಚ್ಛೇದನ, ಬಾಡಿಗೆ ತಾಯಿ ಹೀಗೆ ಹೊಸ ಹೊಸ ಸಮಸ್ಯೆಗಳು ಎದುರಾಗುತ್ತಿದ್ದು, ಇಂತಹ ಸಮಸ್ಯೆಗಳ ನಿವಾರಣೆಗೆ ಪ್ರತಿಯೊಬ್ಬರೂ ಕೈಜೋಡಿಸಬೇಕಿದೆ ಎಂದರು.

ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಅಂಬಾದಾಸ್‌ ಕುಲಕರ್ಣಿ ಜಿ., ವಕೀಲರ ಸಂಘದ ಜಿಲ್ಲಾಧ್ಯಕ್ಷ ಎನ್‌.ಟಿ. ಮಂಜುನಾಥ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next