ರಷ್ಯಾದ ರಾಜಧಾನಿ ಮಾಸ್ಕೋದಲ್ಲಿ ಶುಕ್ರವಾರ ರಾತ್ರಿ ಐಸಿಸ್ ಉಗ್ರರು ನಡೆಸಿದ ದಾಳಿಗೆ ಇಡೀ ವಿಶ್ವವೇ ಬೆಚ್ಚಿ ಬಿದ್ದಿದೆ. ಕಳೆದೆರಡು ದಶಕಗಳ ಅವಧಿಯಲ್ಲಿ ರಷ್ಯಾದಲ್ಲಿ ನಡೆದ ಎರಡನೇ ಅತ್ಯಂತ ದೊಡ್ಡ ಪೈಶಾಚಿಕ ಭಯೋತ್ಪಾದಕ ದಾಳಿಗೆ ಅಧ್ಯಕ್ಷ ವ್ಲಾದಿಮಿರ್ ಪುತಿನ್ ನೇತೃತ್ವದ ಸರಕಾರ ಅಕ್ಷರಶಃ ನಲುಗಿ ಹೋಗಿದೆ. ಈ ದಾಳಿಯ ಹೊಣೆಯನ್ನು ಭಯೋತ್ಪಾದಕ ಸಂಘಟನೆಯಾಗಿರುವ ಐಸಿಸ್-ಖೊರಾಸಾನ್ ಸ್ವತಃ ಹೊತ್ತುಕೊಂಡಿದೆ. ಈ ಬರ್ಬರ ದಾಳಿಯ ಕೆಲವು ವೀಡಿಯೋ ತುಣುಕುಗಳು, ಫೋಟೋಗಳನ್ನು ಐಸಿಸ್ ಬಿಡುಗಡೆ ಮಾಡಿರುವುದೇ ಅಲ್ಲದೆ ಇಸ್ಲಾಮಿಕ್ ಸ್ಟೇಟ್ ಮತ್ತು ಇಸ್ಲಾಂ ವಿರೋಧಿಗಳ ವಿರುದ್ಧದ ಹೋರಾಟ ಮುಂದುವರಿಯಲಿದೆ ಎಂದು ಘೋಷಿಸಿದೆ.
ಐಸಿಸ್ ಉಗ್ರರು ಮಾಸ್ಕೋದಲ್ಲಿ ನಡೆಸಿದ ದಾಳಿಯಲ್ಲಿ 150ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದರೆ, ನೂರಾರು ಮಂದಿ ಸಂತ್ರಸ್ತರಾಗಿದ್ದಾರೆ. ಈ ದಾಳಿಯನ್ನು ಇಡೀ ಜಾಗತಿಕ ಸಮುದಾಯ ಖಂಡಿಸಿರುವ ಜತೆಯಲ್ಲಿ ಈ ಸಂಕಷ್ಟದ ಕಾಲದಲ್ಲಿ ರಷ್ಯಾದ ಜನತೆಯೊಂದಿಗಿರುವುದಾಗಿ ಅಭಯ ನೀಡಿವೆ. ಇವೆಲ್ಲವೂ ಈ ಕ್ಷಣದ ಪ್ರತಿಕ್ರಿಯೆ, ಭರವಸೆ, ಸಹಕಾರಗಳೇ ಹೊರತು ಇಡೀ ವಿಶ್ವವನ್ನೇ ಕಾಡುತ್ತಿರುವ ಭಯೋತ್ಪಾದನೆ ಎಂಬ ಪೆಡಂಭೂತದ ಮೂಲೋತ್ಪಾಟನೆಗೆ ಇವ್ಯಾವೂ ಪರ್ಯಾಪ್ತವಾಗಲಾರವು.
ಸಿರಿಯಾದಲ್ಲಿನ ತಮ್ಮ ಹಿಡಿತವನ್ನು ಕಳೆದುಕೊಂಡ ಐಸಿಸ್ ಉಗ್ರರು ಅಫ್ಘಾನಿಸ್ಥಾನ, ಇರಾನ್, ಇರಾಕ್, ಪಾಕಿಸ್ಥಾನ ಸಹಿತ ಹಲವು ಇಸ್ಲಾಮಿಕ್ ರಾಷ್ಟ್ರಗಳಲ್ಲಿ ಚದುರಿ ಹೋಗಿ ಅಲ್ಲಿ ತಮ್ಮದೇ ಆದ ಪ್ರತ್ಯೇಕ ಭಯೋತ್ಪಾದಕ ಸಂಘಟನೆಗಳನ್ನು ಕಟ್ಟಿ ಬೆಳೆಸಲಾರಂಭಿಸಿದರು. ಉಗ್ರರ ಈ ಜಾಲಕ್ಕೆ ಆಯಾಯ ರಾಷ್ಟ್ರಗಳು ಪರೋಕ್ಷ ನೆರವು ನೀಡುವ ಮೂಲಕ ಈ ಸಂಘಟನೆಗಳು ಪ್ರಾಬಲ್ಯ ಮೆರೆಯಲು ಕಾರಣವಾದುದು ರಹಸ್ಯವಾದುದೇನಲ್ಲ. ಇಂತಹುದೇ ಒಂದು ಭಯೋತ್ಪಾದಕ ಸಂಘಟನೆ ಐಸಿಸ್ -ಖೊರಾಸಾನ್. ಇದರ ಮೂಲ ಅಫ್ಘಾನಿಸ್ಥಾನವಾದರೂ ಈ ಸಂಘಟನೆ ಬೆಳೆಯಲು ಹಣಕಾಸು, ಶಸ್ತ್ರಾಸ್ತ್ರ ನೆರವು ನೀಡುತ್ತ ಬಂದಿರುವುದು ನಮ್ಮ ನೆರೆಯ ಪಾಕಿಸ್ಥಾನ. ತನ್ನ ಹುಟ್ಟಿನಿಂದಲೂ ಭಯೋತ್ಪಾದಕರು, ಪ್ರತ್ಯೇಕತಾವಾದಿಗಳು, ಜನಾಂಗೀಯವಾದಿ ಸಂಘಟನೆಗಳನ್ನು ಪೋಷಿಸಿಕೊಂಡೇ ಬಂದಿರುವ ಪಾಕಿಸ್ಥಾನ, ಇವುಗಳನ್ನು ಭಾರತ ಸಹಿತ ತನ್ನ ಶತ್ರು ರಾಷ್ಟ್ರಗಳ ಮೇಲೆ ಛೂ ಬಿಡುವ ಕಾರ್ಯ ಮಾಡುತ್ತಲೇ ಬಂದಿದೆ. ವಿಶ್ವ ರಾಷ್ಟ್ರಗಳು ಭಯೋತ್ಪಾದನೆಯ ದಮನದ ನಿಟ್ಟಿನಲ್ಲಿ ಪರಿಣಾಮಕಾರಿ ಕ್ರಮ ಕೈಗೊಳ್ಳದಿರುವುದರಿಂದ ಪದೇಪದೆ ಇಂತಹ ದುಷ್ಕೃತ್ಯಗಳನ್ನು ಉಗ್ರರು ಎಸಗುತ್ತಿದ್ದಾರೆ.
ಇತ್ತೀಚಿನ ವರ್ಷಗಳಲ್ಲಿ ಇಡೀ ವಿಶ್ವದಲ್ಲಿ ಭಯೋತ್ಪಾದಕ ಕೃತ್ಯಗಳು ಈ ಹಿಂದಿನ ದಶಕಗಳಿಗೆ ಹೋಲಿಸಿದರೆ ಒಂದಿಷ್ಟು ಕಡಿಮೆಯಾದಂತೆ ಕಂಡುಬಂದರೂ ಐಸಿಸ್, ಅಲ್ ಕಾಯಿದಾ, ಲಷ್ಕರೆ ತಯ್ಯಬಾ ಮತ್ತಿತರ ಭಯೋತ್ಪಾದಕ ಸಂಘಟನೆಗಳು ವಿಶ್ವದ ಒಂದಲ್ಲ ಒಂದು ರಾಷ್ಟ್ರದಲ್ಲಿ ಭೀತಿವಾದಿ ಕೃತ್ಯಗಳನ್ನು ಎಸಗುತ್ತಲೇ ಬಂದಿವೆ. ವಿಶ್ವ ಸಮುದಾಯ ಭಯೋತ್ಪಾದನೆ ವಿಷಯದಲ್ಲಿ ದೃಢ ನಿಲುವು ತಾಳದಿರುವುದರಿಂದಾಗಿಯೇ ಭಯೋತ್ಪಾದಕರು ಇಂದಿಗೂ ಜಾಗತಿಕವಾಗಿ ಬಲುದೊಡ್ಡ ತಲೆನೋವಾಗಿ ಪರಿಣಮಿಸಿದ್ದಾರೆ. ವಿಶ್ವದ ಕೆಲವು ರಾಷ್ಟ್ರಗಳು ಭಯೋತ್ಪಾದಕರ ಬಗೆಗೆ ಮೃದು ಧೋರಣೆ ಅನುಸರಿಸುತ್ತಿರುವ ಪರಿಣಾಮವನ್ನು ಇಡೀ ವಿಶ್ವ ಸಮುದಾಯ ಎದುರಿಸುವಂತಾಗಿದೆ. ಭಯೋತ್ಪಾದಕರ ಮೂಲೋತ್ಪಾಟನೆಯ ವಿನಾ ಜಾಗತಿಕ ಸೌಹಾರ್ದ, ಶಾಂತಿ, ಏಕತೆ ಎಲ್ಲವೂ ಕನಸೇ ಸರಿ. ಧರ್ಮ, ಜನಾಂಗದ ಎಲ್ಲೆಯನ್ನು ಮೀರಿ, ಭಯೋತ್ಪಾದನೆಯ ವಿರುದ್ಧ ಇಡೀ ವಿಶ್ವ ಸಮುದಾಯ ಸಂಘಟಿತ ಮತ್ತು ಬದ್ಧತೆಯಿಂದ ಹೋರಾಟ ನಡೆಸಿದಲ್ಲಿ ಮಾತ್ರವೇ ಭಯೋತ್ಪಾದಕರನ್ನು ಬೇರು ಸಹಿತ ಕಿತ್ತೂಗೆಯಲು ಸಾಧ್ಯ.