ನವದೆಹಲಿ: “ಗಡಿಯಲ್ಲಿ ಚೀನಾ ತುಂಬ ಆಕ್ರಮಣಕಾರಿಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಭಾರತವು “ರಾಕೆಟ್ ಪಡೆ’ ಹೊಂದುವ ಯೋಜನೆಯಲ್ಲಿದೆ,’ ಎಂದು ಕೆಲ ವರ್ಷಗಳ ಹಿಂದೆ ಭಾರತದ ಮೊದಲ ರಕ್ಷಣಾ ಪಡೆಗಳ ಮುಖ್ಯಸ್ಥ ದಿ. ಜನರಲ್ ಬಿಪಿನ್ ರಾವತ್ ಹೇಳಿದ್ದರು. ಚೀನಾ ಸೇನೆ ಈಗಾಗಲೇ ದೇಶಕ್ಕೆ ಹೊಂದಿಕೊಂಡಿರುವ ಗಡಿಯಲ್ಲಿ ವಿಶೇಷ ರೀತಿಯ ರಾಕೆಟ್ ಪಡೆ ನಿಯೋಜನೆ ಮಾಡಿದೆ.
ಅದು ಅಣ್ವಸ್ತ್ರ ಸಿಡಿತಲೆಗಳನ್ನು ಹೊತ್ತೂಯ್ಯಬಲ್ಲ ಸಾಮರ್ಥ್ಯ ಹೊಂದಿರುವ ಕ್ಷಿಪಣಿಗಳೂ ಸೇರಿದಂತೆ ಖಂಡಾಂತರ ಕ್ಷಿಪಣಿ ವ್ಯವಸ್ಥೆಯನ್ನೂ ನಿಯಂತ್ರಿಸುತ್ತದೆ.
ಅದೇ ರೀತಿಯ “ರಾಕೆಟ್ ಪಡೆ’ಯನ್ನು ಹೊಂದಲು ಭಾರತೀಯ ಸೇನೆ ಹಗಲು-ರಾತ್ರಿ ಶ್ರಮಿಸುತ್ತಿದೆ. ದೇಶಿಯವಾಗಿ ನಿರ್ಮಿಸಿದ ಸಂಪ್ರದಾಯಿಕ ಮತ್ತು ಪರಮಾಣು ಚಾಲಿತ ಕ್ಷಿಪಣಿಗಳಾದ ಅಗ್ನಿ, ಪೃಥ್ವಿ, ಬ್ರಹ್ಮೋಸ್, ನಾಗ್, ಪ್ರಳಯ್ ಮತ್ತು ಪ್ರದ್ಯುಮ್ನ – ಈ ರಾಕೆಟ್ ಪಡೆಯ ಭಾಗವಾಗಲಿದೆ. ಅದೇ ಶ್ರೇಣಿಯ 200ಕ್ಕೂ ಹೆಚ್ಚು ಕ್ಷಿಪಣಿಗಳನ್ನು ರಾಕೆಟ್ ಹೊಂದಲು ರಕ್ಷಣಾ ಸಚಿವಾಲಯ ಕ್ರಮ ಕೈಗೊಂಡಿದೆ. ಇದು ದೇಶದ ಸಂಪರ್ಕರಹಿತ ಯುದ್ಧ ಸಾಮರ್ಥ್ಯವನ್ನು ಹೆಚ್ಚಿಸಲಿದೆ. ಜತೆಗೆ ಚೀನಾ ಸೇನೆಗೆ ತಕ್ಕ ಪ್ರತ್ಯುತ್ತರ ನೀಡಲಿದೆ.
ಕೆಲವು ತಿಂಗಳ ಹಿಂದೆ ಭಾರತವು “ಪ್ರಳಯ್’ ಕ್ಷಿಪಣಿಯ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿತು. ಖಂಡಾಂತರ ಕ್ಷಿಪಣಿಯಾದ ಇದು, 150ರಿಂದ 500 ಕಿ.ಮೀ. ವರೆಗಿನ ಗುರಿಯನ್ನು ತಲುಪುವ ಸಾಮರ್ಥಯ ಹೊಂದಿದೆ.
“ಚೀನಾ ಸೇನೆಯು ಬಲಿಷ್ಠ ಕೆಡಿ-63, ಕೆಡಿ-10, ಸಿಜೆ-20 ಕ್ರೂಸ್ ಕ್ಷಿಪಣಿಗಳು ಮತ್ತು ನೂತನ ಎಚ್-6ಕೆ ಬಾಂಬರ್ ಅನ್ನು ಹೊಂದಿದೆ. ಇದು ಗಡಿಯಲ್ಲಿ ಭಾರತಕ್ಕೆ ಸವಾಲಾಗಿದೆ. ಇದಕ್ಕೆ ಪ್ರತ್ಯುತ್ತರವಾಗಿ ಭಾರತವು ಕೂಡ ತನ್ನ ರಾಕೆಟ್ ಪಡೆಯನ್ನು ಸಿದ್ಧಪಡಿಸುತ್ತಿದೆ,’ ಎಂದು ಸ್ಟಿಮ್‌ಸನ್ ಕೇಂದ್ರದ ದಕ್ಷಿಣ ಏಷ್ಯಾ ಉಪ ನಿರ್ದೇಶಕ ಫ್ರಾಂಕ್ ಓ ಡೊನೆಲ್ ಹೇಳಿದ್ದಾರೆ.