ಬೆಂಗಳೂರು: ಇನ್‌ಸ್ಟ್ರಾಗ್ರಾಂನಲ್ಲಿ ನಕಲಿ ಖಾತೆಗಳನ್ನು ತೆರೆದು ಗ್ರಾಹಕರನ್ನು ಸಂಪರ್ಕಿಸಿ ನಕಲಿ ನೋಟುಗಳನ್ನು ನಗರದಲ್ಲಿ ಮಾರಾಟ ಮಾಡುತ್ತಿದ್ದ ಕೇರಳ ಮತ್ತು ತಮಿಳುನಾಡಿನ ಮೂವರು ಆರೋಪಿಗಳನ್ನು ಕಾಟನ್‌ಪೇಟೆ ಪೊಲೀಸರು ಬಂಧಿಸಿದ್ದಾರೆ.
ತಮಿಳುನಾಡಿನ ಶರಣವ (32), ಕೇರಳದ ದೇವನ್(28) ಮತ್ತು ನಿತಿನ್(34) ಬಂಧಿತರು. ಆರೋಪಿಗಳಿಂದ 500 ರೂ. ಮುಖ ಬೆಲೆಯ 1,307 ನಕಲಿ ನೋಟುಗಳನ್ನು ವಶಕ್ಕೆ ಪಡೆಯಲಾಗಿದೆ.
ಆರೋಪಿಗಳ ಇತ್ತೀಚೆಗೆ ಠಾಣಾ ವ್ಯಾಪ್ತಿಯ ಸಿಟಿ ರೈಲ್ವೆ ನಿಲ್ದಾಣದ ಮುಂಭಾಗದ ಸ್ಕೈವಾಕ್ ಬಳಿ ನಕಲಿ ನೋಟುಗಳ ಮಾರಾಟಕ್ಕೆ ಯತ್ನಿಸಿದಾಗ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು. ಬಿಹಾರದ ಪಾಟ್ನಾ ಮೂಲದ ವ್ಯಕ್ತಿಯಿಂದ ತಮಿಳುನಾಡಿನ ಶರವಣ 25 ಸಾವಿರ ರೂ. ಅಸಲಿ ನೋಟಿಗೆ 1 ಲಕ್ಷ ರೂ. ನಕಲಿ ನೋಟುಗಳನ್ನು ತರುತ್ತಿದ್ದ. ಅವುಗಳನ್ನು ಧವನ್ ಮತ್ತು ನಿತಿನ್ ಮೂಲಕ ನಗರದ ಮೆಜೆಸ್ಟಿಕ್, ಸಿಟಿ ರೈಲ್ವೆ ನಿಲ್ದಾಣ, ಮಾರ್ಕೆಟ್‌ನಲ್ಲಿ ನಕಲಿ ನೋಟುಗಳ ಚಲಾವಣೆ ಮಾಡುತ್ತಿದ್ದರು. ಅಲ್ಲದೆ, ಶರವಣ ಇದುವರೆಗೂ 10 ಲಕ್ಷ ರೂ.ವರೆಗೆ ನಕಲಿ ನೋಟುಗಳನ್ನು ಪಡೆದುಕೊಂಡು ಕೇರಳ, ಕರ್ನಾಟಕ ಮತ್ತು ಆಂಧ್ರಪ್ರದೇಶದ ಕೆಲವರಿಗೆ ಈ ಮೊದಲು 3-4 ಲಕ್ಷ ರೂ. ವರೆಗೆ ನಕಲಿ ನೋಟುಗಳ ಚಲಾವಣೆ ಮಾಡಿದ್ದಾನೆ. ಬಿಹಾರ ಮೂಲದ ವ್ಯಕ್ತಿಗಾಗಿ ಶೋಧ ಕಾರ್ಯ ನಡೆಯುತ್ತಿದೆ ಎಂದು ಪೊಲೀಸರು ಹೇಳಿದರು.
ಆನ್‌ಲೈನ್‌ನಲ್ಲಿ ವ್ಯವಹಾರ: ಆರೋಪಿಗಳು ಇನ್ ಸ್ಟ್ರಾಗ್ರಾಂನಲ್ಲಿ ಫೇಕ್ ಕರೆನ್ಸಿ ತಮಿಳುನಾಡು ಹಾಗೂ ಮೋಟೋಹ್ಯಾಕರ್.93 ಎಂಬ ಖಾತೆಗಳನ್ನು ತೆರೆದು ನಕಲಿ ನೋಟುಗಳ ವ್ಯವಹಾರ ನಡೆಸುತ್ತಿದ್ದರು ಎಂದು ಪೊಲೀಸರು ಹೇಳಿದರು.