Advertisement

ನಕಲಿ ದಾಖಲೆ: ಬಾಂಗ್ಲಾದೇಶ ಪ್ರಜೆಗೆ ಹುಡುಕಾಟ

01:02 AM Jul 22, 2019 | Team Udayavani |

ಬೆಂಗಳೂರು: ಬಾಂಗ್ಲಾದೇಶ ಮೂಲದ ಯುವಕನೊಬ್ಬ ತಾನು ಅಸ್ಸಾಂ ರಾಜ್ಯದ ನಿವಾಸಿ ಎಂದು ನಕಲಿ ದಾಖಲೆಗಳನ್ನು ಸೃಷ್ಟಿಸಿ ಪಾಸ್‌ಪೋರ್ಟ್‌ ಪಡೆಯಲು ಅರ್ಜಿ ಸಲ್ಲಿಸಿರುವ ವಿಚಾರ ಬೆಳಕಿಗೆ ಬಂದಿದೆ.

Advertisement

ಈ ಸಂಬಂಧ ಬಾಂಗ್ಲಾದೇಶದ ಸಮೀರ್‌ ಉದೀನ್‌ ರೋಫಿ (26) ಹಾಗೂ ಆತನಿಗೆ ಪಾಸ್‌ಪೋರ್ಟ್‌ ಪಡೆಯಲು ಸಹಾಯ ಮಾಡಿದ ಬೌರಿಂಗ್‌ ಇನ್‌ಸ್ಟಿಟ್ಯೂಟ್‌ನ ಸಹರಾ ಫ‌ುಡ್‌ ಸಲ್ಯೂಷನ್‌ ಕ್ಯಾಂಟಿನ್‌ ಮಾಲೀಕ ರಾಮಕೃಷ್ಣಶೆಟ್ಟಿ (40) ಎಂಬವರ ವಿರುದ್ಧ ವಿದೇಶಿಗರ ಕಾಯ್ದೆ ಮತ್ತು ಪಾಸ್‌ಪೋರ್ಟ್‌ ಕಾಯ್ದೆ ಹಾಗೂ ವಂಚನೆ ಆರೋಪದಡಿ ಪ್ರಕರಣ ದಾಖಲಿಸಿ, ರಾಮಕೃಷ್ಣ ಶೆಟ್ಟಿಯನ್ನು ಬಂಧಿಸಲಾಗಿದೆ.

ಹಾಗೇ ತಲೆಮರೆಸಿಕೊಂಡಿರುವ ಸಮೀರ್‌ಗಾಗಿ ಹುಡುಕಾಟ ನಡೆಯುತ್ತಿದೆ ಎಂದು ಕಬ್ಬನ್‌ಪಾರ್ಕ್‌ ಪೊಲೀಸರು ಹೇಳಿದರು. ಕೆಲ ವರ್ಷಗಳ ಹಿಂದೆ ಬೆಂಗಳೂರಿಗೆ ಬಂದಿದ್ದ ಸಮೀರ್‌ ಉದೀನ್‌ ರೋಫಿ, ನಗರದಲ್ಲಿ ಉದ್ಯೋಗ ಕೊಡಿಸುವ ಮಧ್ಯವರ್ತಿಗಳ ಮೂಲಕ 2018ರಲ್ಲಿ ಬೌರಿಂಗ್‌ ಇನ್‌ಸ್ಟಿಟ್ಯೂಟ್‌ನಲ್ಲಿರುವ ಸಹರಾ ಫ‌ುಡ್‌ ಸಲ್ಯೂಷನ್‌ ಕ್ಯಾಂಟಿನ್‌ನಲ್ಲಿ ಕೆಲಸ ಕೊಡುವಂತೆ ಮಾಲೀಕರಿಗೆ ಮನವಿ ಮಾಡಿಕೊಂಡಿದ್ದ.

ಅಸ್ಸಾಂ ರಾಜ್ಯದ ಆಧಾರ್‌ ಕಾರ್ಡ್‌, ಗುರುತಿನ ಚೀಟಿ ಹಾಗೂ ಇತರೆ ದಾಖಲೆಗಳನ್ನು ತೋರಿಸಿದ್ದರಿಂದ ಕ್ಯಾಂಟೀನ್‌ ಮಾಲೀಕರು ಆತನ ಪೂರ್ವಾಪರ ಪರಿಶೀಲಿಸದೆ ಕೆಲಸಕ್ಕೆ ಸೇರಿಸಿಕೊಂಡಿದ್ದರು. ಜನವರಿ 2019ರಲ್ಲಿ ಸಮೀರ್‌ ಪಾಸ್‌ಪೋರ್ಟ್‌ಗಾಗಿ ಅರ್ಜಿ ಸಲ್ಲಿಸಿದ್ದು, ರಾಮಕೃಷ್ಣ ಶೆಟ್ಟಿ ಸಹ ತಮ್ಮ ಕ್ಯಾಂಟಿನಲ್ಲೇ ಕಳೆದ 3-4 ವರ್ಷಗಳಿಂದ ಕೆಲಸ ಮಾಡಿಕೊಂಡಿದ್ದಾನೆ ಎಂದು ಶಿಫಾರಸು ಪತ್ರ ನೀಡಿದ್ದರು.

ನಂತರ ಪಾಸ್‌ಪೋರ್ಟ್‌ ಕಚೇರಿಯಿಂದ ಅರ್ಜಿದಾರರ ಅಪರಾಧ ಹಿನ್ನೆಲೆ ಪರಿಶೀಲಿಸುವಂತೆ ಫೆಬ್ರವರಿಯಲ್ಲಿ ಕಬ್ಬನ್‌ಪಾರ್ಕ್‌ ಪೊಲೀಸ್‌ ಠಾಣೆಗೆ ಆರೋಪಿಯ ಅರ್ಜಿ ಬಂದಿತ್ತು. ಅನಂತರ ಠಾಣೆಯ ಸಿಬ್ಬಂದಿ ಸಹಾರ ಫ‌ುಡ್‌ ಸಲ್ಯೂಷನ್‌ನಲ್ಲಿ ವಿಚಾರಿಸಿದಾಗ ಸಮೀರ್‌ ಅಸ್ಸಾಂ ರಾಜ್ಯದವನು ಎಂದು ತಿಳಿದು ಬಂದಿದೆ. ಆದರೆ, ಅನುಮಾನಗೊಂಡ ಸಿಬ್ಬಂದಿ ನೇರವಾಗಿ ಬೌರಿಂಗ್‌ ಇನ್‌ಸ್ಟಿಟ್ಯೂಟ್‌ನ ಕಾರ್ಯದರ್ಶಿ ಶ್ರೀಕಾಂತ್‌ ಅವರನ್ನು ವಿಚಾರಿಸಿದಾಗ ಆತನ ಬಗ್ಗೆ ಮಾಹಿತಿ ಇಲ್ಲ ಎಂದಿದ್ದರು. ಹೀಗಾಗಿ ಆರೋಪಿಯ ಅರ್ಜಿ ತಿರಸ್ಕರಿಸಲಾಗಿತ್ತು ಎಂದು ಪೊಲೀಸರು ಹೇಳಿದರು.

Advertisement

ಮತ್ತೂಂದೆಡೆ ನಗರ ಪೊಲೀಸ್‌ ಆಯುಕ್ತರ ಕಚೇರಿಯಲ್ಲಿರುವ ನಗರ ವಿಶೇಷ ಶಾಖೆ ವಿಭಾಗದ ಅಧಿಕಾರಿಗಳು, ಸಮೀರ್‌ ಅರ್ಜಿಯ ಸಂಬಂಧ ಆತನ ದಾಖಲೆಗಳಲ್ಲಿ ಉಲ್ಲೇಖೀಸಿದ ಅಸ್ಸಾಂ ರಾಜ್ಯದ ವಿಳಾಸದ ವ್ಯಾಪ್ತಿಗೆ ಬರುವ ಸ್ಥಳೀಯ ಪೊಲೀಸ್‌ ಠಾಣೆಗೆ ಮಾಹಿತಿ ನೀಡಿ ದೃಢಿಕರಿಸುವಂತೆ ಕೋರಿದ್ದರು. ಆದರೆ, ಆತನ ಬಗ್ಗೆ ವಿಚಾರಣೆ ನಡೆಸಿದ ಪೊಲೀಸರು, ಸಮೀರ್‌ ಅಸ್ಸಾಂ ರಾಜ್ಯದವನಲ್ಲ. ಬಾಂಗ್ಲಾದೇಶ ಮೂಲದವನು ಎಂದು ವಿಶೇಷ ಶಾಖೆಗೆ ಮಾಹಿತಿ ನೀಡಿದ್ದರು.

ಈ ಸಂಬಂಧ ವಿಶೇಷ ಶಾಖೆ ಅಧಿಕಾರಿಗಳು ಜುಲೈ 17ರಂದು ಕಬ್ಬನ್‌ಪಾರ್ಕ್‌ ಪೊಲೀಸರಿಗೆ ಮಾಹಿತಿ ನೀಡಿ ಕ್ರಮಕೈಗೊಳ್ಳುವಂತೆ ಸೂಚಿಸಿದ್ದರು. ಈ ಸಂಬಂಧ ಸಮೀರ್‌ ಹಾಗೂ ಆತನಿಗೆ ಸಹಕಾರ ನೀಡಿದ ಆರೋಪದ ಮೇಲೆ ರಾಮಕೃಷ್ಣ ಶೆಟ್ಟಿ ವಿರುದ್ಧವೂ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದರು.

ಆರೋಪಿ ನಾಪತ್ತೆ: ಪಾಸ್‌ಪೋರ್ಟ್‌ ಪರಿಶೀಲನಾ ಅರ್ಜಿಯನ್ನು ಪೊಲೀಸರು ತಿರಸ್ಕರಿಸಿರುವ ಮಾಹಿತಿ ತಿಳಿಯುತ್ತಿದ್ದಂತೆ ಸಮೀರ್‌ ತನ್ನ ವಸ್ತುಗಳೊಂದಿಗೆ ಪರಾರಿಯಾಗಿದ್ದಾನೆ. ಎಲ್ಲಿಗೆ ಹೋಗಿದ್ದಾನೆ ಎಂಬ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ. ಆತನಿಗಾಗಿ ಹುಡುಕಾಟ ನಡೆಯುತ್ತಿದೆ. ಜತೆಗೆ ಅಸ್ಸಾಂ ರಾಜ್ಯದ ಪೊಲೀಸರಿಗೂ ಮಾಹಿತಿ ನೀಡಲಾಗಿದೆ ಎಂದು ಕಬ್ಬನ್‌ಪಾರ್ಕ್‌ ಪೊಲೀಸರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next