Advertisement

ಬಿಜೆಪಿ ತಂತ್ರಕ್ಕೆ ಪ್ರತಿತಂತ್ರ ರೂಪಿಸಿ

09:24 PM Aug 03, 2019 | Lakshmi GovindaRaj |

ಮೈಸೂರು: ರಾಜ್ಯದ ಇತಿಹಾಸದಲ್ಲೇ ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಹೆಚ್ಚಿನ ಹಿನ್ನಡೆಯಾಗಿದೆ. ಆದರೆ ಕಾರ್ಯಕರ್ತರು ಸೋಲಿಗೆ ಎದೆಗುಂದದೆ ದೃಢನಿಶ್ಚಯದಿಂದ ಪಕ್ಷವನ್ನು ಬೇರು ಮಟ್ಟದಿಂದ ಬಲಪಡಿಸಬೇಕು. ಮುಂದಿನ ಚುನಾವಣೆಗಳಲ್ಲಿ ಬಿಜೆಪಿಯ ತಂತ್ರಕ್ಕೆ ಪ್ರತಿತಂತ್ರ ರೂಪಿಸಿ ಜಯಸಾಧಿಸಬೇಕು ಎಂದು ಮಾಜಿ ಸಂಸದ ಆರ್‌.ಧ್ರುವನಾರಾಯಣ ಮನವಿ ಮಾಡಿದರು.

Advertisement

ಮೈಸೂರು ಗ್ರಾಮಾಂತರ ಜಿಲ್ಲಾ ಕಾಂಗ್ರೆಸ್‌ ಸಮಿತಿಯು ಜಯಮ್ಮ ಗೋವಿಂದೇಗೌಡ ಕಲ್ಯಾಣ ಮಂಟಪದಲ್ಲಿ ಶನಿವಾರ ಆಯೋಜಿಸಿದ್ದ ವರುಣಾ ವಿಧಾನಸಭಾ ಕ್ಷೇತ್ರದ ಮತದಾರರಿಗೆ ಕೃತಜ್ಞತೆ ಹಾಗೂ ಆತ್ಮಾವಲೋಕನ ಸಭೆಯಲ್ಲಿ ಮಾತನಾಡಿದರು.

ನಾವು ಅಭಿವೃದ್ಧಿ ವಿಷಯದೊಂದಿಗೆ ಚುನಾವಣೆ ಎದುರಿಸಿದೆವು. ಕೇಂದ್ರದಲ್ಲಿ ಕಾಂಗ್ರೆಸ್‌ ಅಧಿಕಾರದಲ್ಲಿದ್ದಾಗಿನ ಸಾಧನೆ ಹಾಗೂ ಸಿದ್ದರಾಮಯ್ಯ ಅವರ ಅಭಿವೃದ್ಧಿ ಕೆಲಸಗಳನ್ನು ನೋಡಿ ಮತ ಹಾಕುವಂತೆ ಮತದಾರರಲ್ಲಿ ತಿಳಿಸಿದ್ದೇವು. ಆದರೆ, ಬಿಜೆಪಿ ಮಾತ್ರ ಜಾತಿ, ಧರ್ಮ ಆಧಾರದ ಮೇಲೆ ಚುನಾವಣೆ ಎದುರಿಸಿತು. ಜಾತಿ ಹೆಸರಿನಲ್ಲಿ ಪ್ರಚೋದನೆ ಮಾಡಿ ಮತದಾರರನ್ನು ದಿಕ್ಕು ತಪ್ಪಿಸಿತು. ಹೀಗಾಗಿ, ಜಾತಿ, ಧರ್ಮದ ಆಧಾರದಲ್ಲಿ ಮತ ಸೆಳೆಯುವುದು ಸುಲಭವಾಯಿತು.

ಆದರೆ, ಅಭಿವೃದ್ಧಿ ಹೆಸರಿನಲ್ಲಿ ಮತ ಪಡೆಯುವುದು ಕಷ್ಟವಾಯಿತು. ಪುಲ್ವಾಮಾ ದಾಳಿಯನ್ನು ಮೋದಿಯೇ ಮಾಡಿದರು ಎಂದು ಬಿಜೆಪಿ ನಾಯಕರು ಪ್ರಚಾರ ಮಾಡಿದರು ಎಂದು ಆರೋಪಿಸಿದರು. ಮುಂದಿನ ಚುನಾವಣೆಗಳಲ್ಲಿ ಜನ ಅಭಿವೃದ್ಧಿಗೆ ಮನ್ನಣೆ ನೀಡುವ ನಂಬಿಕೆ ಇದೆ. ಆದ್ದರಿಂದ, ಕಾರ್ಯಕರ್ತರು ತಮ್ಮ ಬೂತ್‌ಗಳಲ್ಲಿ ಪಕ್ಷದ ಅಭ್ಯರ್ಥಿಗೆ ಹೆಚ್ಚಿನ ಮನ ಕೊಡಿಸುವ ಕೆಲಸ ಮಾಡಬೇಕು. ಕಳೆದ ಚುನಾವಣೆ ಬಗ್ಗೆ ಪ್ರತಿಯೊಬ್ಬ ಮುಖಂಡ ಆತ್ಮಾವಕೋಕನ ಮಾಡಿಕೊಳ್ಳಬೇಕು ಎಂದು ತಿಳಿಸಿದರು.

ಕಾಂಗ್ರೆಸ್‌ಗೆ ಸಂಕಷ್ಟ: ಇಡೀ ದೇಶದಲ್ಲಿ ಕಾಂಗ್ರೆಸ್‌ ಪಕ್ಷ ಸಂಕಷ್ಟಕ್ಕೆ ಸಿಲುಕಿದೆ. ರಾಹುಲ್‌ ಗಾಂಧಿ ಸೋಲಿನಿಂದ ಮನನೊಂದು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇಂತಹ ಸಂದರ್ಭದಲ್ಲಿ ಪಕ್ಷ ಸಂಘಟಿಸುವುದು ಪ್ರತಿಯೊಬ್ಬ ಕಾರ್ಯಕರ್ತರ ಜವಾಬ್ದಾರಿಯಾಗಿದೆ. ಅತೃಪ್ತ ಶಾಸಕರನ್ನು ಅನರ್ಹ ಮಾಡಿದ ಮಾಜಿ ಸ್ವೀಕರ್‌ ರಮೇಶ್‌ ಕುಮಾರ್‌ ತೀರ್ಮಾನವನ್ನು ಸ್ವಾಗತಿಸುತ್ತೇನೆ. ಇದು ಬೇರೆ ಶಾಸಕರಿಗೆ ಪಾಠವಾಗುತ್ತದೆ ಎಂದರು.

Advertisement

ಮೋದಿ ಜಪ: ಶಾಸಕ ಆರ್‌.ಧರ್ಮಸೇನ ಮಾತನಾಡಿ, ಕ್ಷೇತ್ರದಲ್ಲಿ ಯತೀಂದ್ರ ಸಿದ್ದರಾಮಯ್ಯ ಪಡೆದ ಮುನ್ನಡೆಗಿಂತಲೂ ಧ್ರುವನಾರಾಯಣ ಅವರಿಗೆ ಹೆಚ್ಚಿನ ಲೀಡ್‌ ಬರುತ್ತದೆ ಎಂದು ತಿಳಿದಿದ್ದೆ. ಆದರೆ, ನನ್ನ ನಿರೀಕ್ಷೆ ಹುಸಿಯಾಗಿದೆ. ಎಲ್ಲಾ ಯುವಕರು ಮೋದಿ ಮೋದಿ ಎಂದು ಜಪ ಮಾಡುತ್ತಿದ್ದಾರೆ. ಅದು ಏಕೆ ಎಂದು ಗೊತ್ತಾಗುತ್ತಿಲ್ಲ. ದೇಶದ ಅಭಿವೃದ್ಧಿಗೆ ಕಾಂಗ್ರೆಸ್‌ ಏನೆಲ್ಲಾ ಮಾಡಿದೆ ಎನ್ನುವುದನ್ನು ಯುವಕರಿಗೆ ತಿಳಿಸಬೇಕಿದೆ. ಆ ಮೂಲಕ ದೇಶ ಸಂಕಷ್ಟಕ್ಕೆ ಸಿಲುಕುವುದನ್ನು ತಪ್ಪಿಸಬೇಕಾಗಿದೆ ಎಂದರು. ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದ ದಲಿತರ ಮೇಲಿನ ದೌರ್ಜನ್ಯ ಹೆಚ್ಚಾಗಿದೆ ಎಂದರು.

ಮೈತ್ರಿಯಿಂದ ಸೋಲು: ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಡಾ.ಬಿ.ಜೆ.ವಿಜಯ್‌ಕುಮಾರ್‌ ಮಾತನಾಡಿ, ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸೋಲಿಗೆ ಜೆಡಿಎಸ್‌ ಜತೆಯ ಮೈತ್ರಿಯೇ ಕಾರಣ. ಇತಿಹಾಸದಲ್ಲಿ ಯಾವತ್ತು ನಮ್ಮ ಪಕ್ಷ ಯಾವುದೇ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದರು. ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ಮುಖಂಡರಾದ ಬಸವರಾಜು, ಬಲರಾಮು, ಮಾಲೇಗೌಡ, ಯೋಗೇಶ್‌, ಕುಮಾರಸ್ವಾಮಿ, ಮಂಜುನಾಥ್‌ ಇತರರಿದ್ದರು.

ಪ್ರಸಾದ್‌ಗೆ ಯತೀಂದ್ರ ಪರೋಕ್ಷ ತಿರುಗೇಟು: ಶಾಸಕ ಡಾ.ಯತೀಂದ್ರ ಮಾತನಾಡಿ, ಆರ್‌.ಧ್ರುವನಾರಾಯಣ ಎರಡು ಬಾರಿ ಸಂಸದರಾಗಿ ಅತ್ಯುತ್ತಮವಾಗಿ ಕೆಲಸ ನಿರ್ವಹಿಸಿದ್ದರು. ಅವರ ಕೆಲಸ ನೋಡಿರುವ ಎಲ್ಲರೂ ಅವರ ಸೋಲನ್ನು ನಿರೀಕ್ಷೆ ಮಾಡಿರಲಿಲ್ಲ. ಹೀಗಾಗಿ ಅವರ ಸೋಲು ನಮ್ಮ ಕಾಂಗ್ರೆಸ್‌ ಪಕ್ಷಕ್ಕೆ ಮತ್ತು ಕ್ಷೇತ್ರದ ಜನರಿಗೆ ಹಿನ್ನಡೆ ಉಂಟು ಮಾಡಿದೆ ಎಂದರು. ಧ್ರುವನಾರಾಯಣ ಸೋತರೂ ಮನೆಯಲ್ಲಿ ಕುಳಿತ್ತಿಲ್ಲ. ಕ್ಷೇತ್ರದ ಪ್ರತಿ ಗ್ರಾಮ ಪಂಚಾಯತಿ ಮಟ್ಟದಲ್ಲಿ ಕೆಲಸ ಮಾಡುತ್ತಿದ್ದಾರೆ. ಜತೆಗೆ ಪಕ್ಷ ಕಟ್ಟುತ್ತಿದ್ದಾರೆ. ಆದರೆ, ಕೆಲವರು ಚುನಾವಣೆಯ ಸಮಯದಲ್ಲಿ ಮಾತ್ರ ಬಂದು ಹೋಗುತ್ತಾರೆ. ಗೆದ್ದ ಮೇಲೆ ಜನರನ್ನು ಮರೆಯುತ್ತಾರೆ ಎಂದು ಹೇಳುವ ಮೂಲಕ ಸಂಸದ ವಿ.ಶ್ರೀನಿವಾಸ್‌ಪ್ರಸಾದ್‌ ಅವರನ್ನು ಪರೋಕ್ಷವಾಗಿ ಟೀಕಿಸಿದರು.

ವರುಣಾದಲ್ಲಿ ನಿರೀಕ್ಷಿತ ಲೀಡ್‌ ಸಿಗಲಿಲ್ಲ: ವರುಣಾ ವಿಧಾನಸಭಾ ಕ್ಷೇತ್ರದಿಂದ ಪ್ರತಿ ಬಾರಿಯೂ ನನಗೆ ಹೆಚ್ಚಿನ ಲೀಡ್‌ ಸಿಕ್ಕಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕ್ಷೇತ್ರದ ಪ್ರತಿ ಗ್ರಾಮವನ್ನು ಅಭಿವೃದ್ಧಿ ಪಡಿಸಿದ್ದಾರೆ. ಶಾಸಕ ಡಾ.ಯತೀಂದ್ರ ಕೂಡ ಕ್ಷೇತ್ರದಲ್ಲಿ ನಿರಂತರವಾಗಿ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ, ಕ್ಷೇತ್ರದಲ್ಲಿ ಈ ಬಾರಿ ಹೆಚ್ಚಿನ ಮುನ್ನಡೆಗಳಿಸುವ ಆತ್ಮವಿಶ್ವಾಸವಿತ್ತು. ಆದರೆ, ನಾನು ನಿರೀಕ್ಷೆ ಮಾಡಿದಷ್ಟು ಲೀಡ್‌ ಬಂದಿಲ್ಲ ಎಂದು ಮಾಜಿ ಸಂಸದ ಆರ್‌. ಧ್ರುವನಾರಾಯಣ ಬೇಸರ ವ್ಯಕ್ತ ಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next