ಬೈಲಹೊಂಗಲ: ಬ್ರಿಟಿಷರ ವಿರುದ್ಧ ಹೋರಾಡಿ ಪ್ರಾಣತ್ಯಾಗ ಮಾಡಿದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ನೆನಪಿಗಾಗಿ ತಾಲೂಕಿನ ಸಂಗೊಳ್ಳಿ ಗ್ರಾಮದಲ್ಲಿ ಜ.12 ಮತ್ತು 13ರಂದು ನಡೆಯುವ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಉತ್ಸವಕ್ಕೆ ಸಿದ್ಧತೆ ಪೂರ್ಣಗೊಂಡಿದ್ದು, ಉದ್ಘಾಟನೆಗೆ ಕ್ಷಣಗಣನೆ ಪ್ರಾರಂಭವಾಗಿದೆ.
ಈಗಾಗಲೇ ಗ್ರಾಮದ ಬೀದಿಗಳನ್ನು ತಳಿರು ತೋರಣಗಳಿಂದ ಸಿಂಗರಿಸಲಾಗಿದ್ದು, ರಾಯಣ್ಣ ಉದ್ಯಾನವನಕ್ಕೆ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿದೆ. ಇಲ್ಲಿನ ಸರಕಾರಿ ಪ್ರೌಢಶಾಲೆ ಮೈದಾನದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ವೇದಿಕೆ ನಿರ್ಮಿಸಲಾಗಿದೆ. ಉತ್ಸವದಲ್ಲಿ ಸುಮಾರು 20 ಸಾವಿರ ಜನರು ಪಾಲ್ಗೊಳ್ಳುವ ನಿರೀಕ್ಷೆ ಹೊಂದಲಾಗಿದೆ. 10 ಸಾವಿರ ಆಸನಗಳ ವ್ಯವಸ್ಥೆ ಮಾಡಲಾಗಿದೆ. ಗ್ರಾಮಕ್ಕೆ ಪ್ರವೇಶಿಸುವ ರಸ್ತೆಗಳಿಗೆ ಅಮಟೂರ ಬಾಳಪ್ಪ, ಸಂಗೊಳ್ಳಿ ರಾಯಣ್ಣ, ಬೆಳವಡಿ ಮಲ್ಲಮ್ಮ, ಕಿತ್ತೂರ ಚನ್ನಮ್ಮ ಹೆಸರಿನ ದ್ವಾರಗಳನ್ನು ನಿರ್ಮಿಸಲಾಗಿದೆ.
30ಕ್ಕೂ ಹೆಚ್ಚು ಕಲಾವಿದರು ಕಾರ್ಯಕ್ರಮ ನೀಡಲಿದ್ದು, ಪ್ರತಿದಿನ 15 ಕಲಾವಿದರು ತಮ್ಮಪ್ರತಿಭೆ ಮೂಲಕ ಜನತೆಯನ್ನು ರಂಜಿಸಲಿದ್ದಾರೆ. ಸಾರ್ವಜನಿಕರಿಗೆ ಮೊಬೈಲ್ ಶೌಚಾಲಯ ವ್ಯವಸ್ಥೆ ಮಾಡಲಾಗಿದೆ. ಗ್ರಾಮಸ್ಥರ ಮನೆ ಮುಂದಿನ ನಲ್ಲಿಗಳಿಗೆ 24/7 ಮಾದರಿಯಲ್ಲಿ ನೀರು ಸರಬರಾಜು ಮಾಡಲಾಗುತ್ತಿದ್ದು, ವೇದಿಕೆ ಸಮೀಪ ಅಲ್ಲಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ಇದಕ್ಕೆ 10ಕ್ಕೂ ಹೆಚ್ಚು ಟ್ಯಾಂಕರ್‌ಗಳನ್ನು ಬಳಸಲಾಗಿದೆ.
ಕಾರ್ಯಕ್ರಮ ಪಟ್ಟಿ: ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ಜ.12ರಂದು ಮುಂಜಾನೆ 6ಕ್ಕೆ ರಾಯಣ್ಣನ ಮೂರ್ತಿಗೆ ಪೂಜೆ, 9ಕ್ಕೆ ಕಿತ್ತೂರ ಸಂಸ್ಥಾನದ ಧ್ವಜಾರೋಹಣ, 10ಕ್ಕೆ ಸಂಗೊಳ್ಳಿ ರಾಯಣ್ಣ ಜ್ಯೋತಿಯನ್ನು ಸಚಿವ ಜಗದೀಶ ಶೆಟ್ಟರ ಬರಮಾಡಿಕೊಳ್ಳುವರು. 10:15ಕ್ಕೆ ಜಾನಪದ ಕಲಾವಾಹಿನಿಯನ್ನು ಕೇಂದ್ರ ರೈಲ್ವೆ ರಾಜ್ಯ ಸಚಿವ ಸುರೇಶ ಅಂಗಡಿ ಉದ್ಘಾಟಿಸಲಿದ್ದಾರೆ. 11ಕ್ಕೆ ಶಾಸಕ ಮಹಾಂತೇಶ ಕೌಜಲಗಿ ವಸ್ತು ಪ್ರದರ್ಶನ ಉದ್ಘಾಟಿಸಲಿದ್ದಾರೆ.
ಸಂಜೆ 7ರ ಉತ್ಸವದ ಕಾರ್ಯಕ್ರಮವನ್ನು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಉದ್ಘಾಟಿಸಲಿದ್ದಾರೆ. ಸಂಗೊಳ್ಳಿ ಹಿರೇಮಠದ ಗುರು ಸಿದ್ದಲಿಂಗೇಶ್ವರ ಸಂಸ್ಥಾನ ಮಠದ ಗುರುಲಿಂಗ ಶಿವಾಚಾರ್ಯ ಸ್ವಾಮೀಜಿ, ಚನ್ನಮ್ಮನ ಕಿತ್ತೂರ ರಾಜಗುರು ಸಂಸ್ಥಾನ ಮಠದ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ರಾಜ್ಯ ಮತ್ತು ಜಿಲ್ಲೆಯ ಜನಪ್ರತಿನಿಧಿಗಳು ಆಗಮಿಸುವರು.
6ಕ್ಕೆ ಭಜನೆ, ಶಹನಾಯಿ, ಶಾಸ್ತ್ರೀಯ ಸಂಗೀತ, ಕೊಳಲು ವಾದನ, ಸುಗಮ ಸಂಗೀತ, ಭರತನಾಟ್ಯ, ನೃತ್ಯ ವೈವಿದ್ಯ, ಹಿಂದೂಸ್ತಾನಿ, ಶಾಸ್ತ್ರೀಯ ಸಂಗೀತ, ನೃತ್ಯ ಪ್ರದರ್ಶನ, ಜಾನಪದ ಸಂಗೀತ, ರಸಮಂಜರಿ ಸಾಂಸ್ಕೃತಿ ಕಾರ್ಯಕ್ರಮ ಜರುಗಲಿವೆ. ರಾತ್ರಿ 9ಕ್ಕೆ ವೀರರ ಸ್ಮರಣೆಗಾಗಿ ದೀಪೋತ್ಸವವನ್ನು ಜಿಪಂ ಸದಸ್ಯ ಅನಿಲ ಮೇಕಲಮರ್ಡಿ ಉದ್ಘಾಟಿಸಲಿದ್ದಾರೆ. ನಂತರ ವಿವಿಧ
ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿವೆ. ಜ.13ರಂದು 12ಗಂಟೆಗೆ ತಾಪಂ ಸದಸ್ಯ ಗೌಸಸಾಬ ಬುಡ್ಡೆಮುಲ್ಲಾ ವಾಲಿಬಾಲ್ ಪಂದ್ಯಾವಳಿ ಉದ್ಘಾಟಿಸಲಿದ್ದಾರೆ. ಸಂಜೆ 3ಕ್ಕೆ ಕುಸ್ತಿ ಪಂದ್ಯಾವಳಿಗಳಿಗೆ ಕಿತ್ತೂರ ಶಾಸಕ ಮಹಾಂತೇಶ ದೊಡಗೌಡರ ಚಾಲನೆ ನೀಡಲಿದ್ದಾರೆ.
-ಸಿ.ವೈ. ಮೆಣಸಿನಕಾಯಿ