Advertisement

ರೈತರ ಜಾತ್ರೆಗೆ ಕ್ಷಣಗಣನೆ ಆರಂಭ

07:57 AM Oct 23, 2019 | Suhan S |

ಬೆಂಗಳೂರು: ರೈತರ ಜಾತ್ರೆ “ಕೃಷಿ ಮೇಳ’ಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಗಾಂಧಿ ಕೃಷಿ ವಿಜ್ಞಾನ ಕೇಂದ್ರ (ಜಿಕೆವಿಕೆ)ದಲ್ಲಿ ಸಕಲ ಸಿದ್ಧತೆ ಪೂರ್ಣಗೊಂಡಿವೆ. “ನಿಖರ ಕೃಷಿ ಸುಸ್ಥಿರ ಅಭಿವೃದ್ಧಿ’ ಎಂಬ ಘೋಷವಾಕ್ಯದಡಿ ಈ ಬಾರಿ ಮೇಳ ಮೈದಳೆಯಲಿದೆ. ಇದೇ ಮೊದಲ ಬಾರಿಗೆ ಖಾಸಗಿ ಸಂಸ್ಥೆಗಳಿಗೂ ವೇದಿಕೆ ಕಲ್ಪಿಸಲಾಗಿದೆ.

Advertisement

ಅ. 24ರಿಂದ 27ರವರೆಗೆ ನಡೆಯ ಲಿರುವ ಮೇಳದಲ್ಲಿ ನೀರಿನ ಸದ್ಬಳಕೆ, ಶೇಖರಣೆ, ಕಡಿಮೆ ಪರಿಕರಗಳನ್ನು ಬಳಸಿಕೊಂಡು ಹೆಚ್ಚು ಉತ್ಪಾದನೆ ಮಾಡುವುದು, ಸೆನ್ಸರ್‌ ಆಧಾರಿತ ನೀರಾವರಿ ಪದ್ಧತಿ, ಖುಷ್ಕಿ ಜಮೀನಿನಲ್ಲಿ ಅನುಸರಿಸ ಬಹುದಾದ ತಂತ್ರಜ್ಞಾನಗಳು, ಸಿರಿಧಾನ್ಯಗಳ ಉತ್ಪನ್ನ ಮತ್ತು ಮಹತ್ವ ಸೇರಿದಂತೆ ಹತ್ತುಹಲವು ಮಾಹಿತಿ ಇಲ್ಲಿ ರೈತರಿಗೆ ಸಿಗಲಿದೆ ಎಂದು ಬೆಂಗಳೂರು ಕೃಷಿ ವಿವಿ ಕುಲಪತಿ ಡಾ.ಎಸ್‌. ರಾಜೇಂದ್ರ ಪ್ರಸಾದ್‌ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

18 ಹೊಸ ತಂತ್ರಜ್ಞಾನಗಳ ಬಿಡುಗಡೆ ಕೂಡ ಆಗಲಿದೆ. ಒಟ್ಟು 700ಕ್ಕೂ ಹೆಚ್ಚು ಮಳಿಗೆಗಳು ತಲೆಯೆತ್ತಲಿವೆ. ಸುಮಾರು 10ರಿಂದ 12 ಲಕ್ಷ ಜನ ಇದಕ್ಕೆ ಸಾಕ್ಷಿಯಾಗಲಿದ್ದಾರೆ ಎಂದ ಅವರು, 24ರಂದು ಬೆಳಗ್ಗೆ 11.30ಕ್ಕೆ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಮೇಳಕ್ಕೆ ಚಾಲನೆ ನೀಡಲಿದ್ದಾರೆ. ಉಪ ಮುಖ್ಯಮಂತ್ರಿ ಹಾಗೂ ಕೃಷಿ ಸಚಿವ ಲಕ್ಷ್ಮಣ ಸವದಿ, ಮಾಜಿ ಸಚಿವ ಕೃಷ್ಣ ಬೈರೇಗೌಡ ಉಪಸ್ಥಿತರಿರುವರು ಎಂದರು.

ಪ್ರಶಸ್ತಿ ಪ್ರದಾನ: ಮೇಳದಲ್ಲಿ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ರಾಜ್ಯಮಟ್ಟದ ಅತ್ಯುತ್ತಮ ರೈತರ ಮತ್ತು ರೈತ ಮಹಿಳೆ ಪ್ರಶಸ್ತಿ, ದಿವಂಗತ ಸಿ. ಬೈರೇಗೌಡ ರಾಜ್ಯಮಟ್ಟದ ಅತ್ಯುತ್ತಮ ರೈತ ಪ್ರಶಸ್ತಿ, ಡಾ.ಎಂ.ಎಚ್‌. ಮರೀಗೌಡ ರಾಜ್ಯಮಟ್ಟದ ಅತ್ಯುತ್ತಮ ತೋಟಗಾರಿಕಾ ರೈತ ಪ್ರಶಸ್ತಿ ಕ್ಯಾನ್‌ ಬ್ಯಾಂಕ್‌ ರಾಜ್ಯಮಟ್ಟದ ಅತ್ಯುತ್ತಮ ರೈತ ಮತ್ತು ರೈತ ಮಹಿಳೆ ಪ್ರಶಸ್ತಿ, ಡಾ.ಆರ್‌.ದ್ವಾರಕಿನಾಥ್‌ ಪ್ರತಿಷ್ಠಾಪಿಸಿದ ಅತ್ಯುತ್ತಮ ರೈತ ಮತ್ತು ಅತ್ಯುತ್ತಮ ವಿಸ್ತರಣಾ ಕಾರ್ಯಕರ್ತ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಜತೆಗೆ ತಾಲೂಕು ಮಟ್ಟದಲ್ಲಿ ಯುವ ರೈತ ಮತ್ತು ರೈತ ಮಹಿಳೆ ಪ್ರಶಸ್ತಿ ನೀಡಲಾಗುತ್ತಿದೆ ಎಂದು ಹೇಳಿದರು.

ಹೊಸ ತಳಿಗಳ ಬಿಡುಗಡೆ: ಗಂಗಾವತಿ ಸೋನಾ, ಅಲಸಂದೆ ಪಿಜಿಸಿಪಿ-6, ಉದ್ದು ಎಲ್‌ಬಿಜಿ 791, ಸೂರ್ಯಕಾಂತಿ ಕೆಬಿಎಸ್‌ಎಚ್‌-78, ಕಬ್ಬು ಸಿಒವಿಸಿ-16061, ಕಬ್ಬು ಸಿಒವಿಸಿ-16062 ಮತ್ತು ಹಲಸು ಲಾಲ್‌ಬಾಗ್‌ ಮಧುರ ಎಂಬ ತಳಿಗಳನ್ನು ಮೇಳದಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಕುಲಪತಿಗಳು ಮಾಹಿತಿ ನೀಡಿದರು.

Advertisement

 

ಉಚಿತ ಆರೋಗ್ಯ ತಪಾಸಣೆ :  ರೈತರ ಆತ್ಮಹತ್ಯೆಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವುದರಿಂದ ಮೇಳದಲ್ಲಿ ಮನೋವೈದ್ಯರಿಂದ ಉಚಿತ ಆಪ್ತ ಸಮಾಲೋಚನೆ ಏರ್ಪಡಿಸಲಾಗಿದೆ. ಜತೆಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಲಿದ್ದು, ಇಲ್ಲಿ ಜಮೀನುಗಳಲ್ಲಿ ಹಾವು, ಚೇಳು, ಜೇನು ಕಡಿತದ ಸಂದರ್ಭಗಳಲ್ಲಿ ತಕ್ಷಣ ರೈತರು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ತಿಳಿಸಿಕೊಡಲಾಗುವುದು.

 

ಮೇಳದ ಮಾಹಿತಿಗೊಂದು ಪ್ರತ್ಯೇಕ “ಆ್ಯಪ್‌’ಅಭಿವೃದ್ಧಿ :  ಕೃಷಿ ಮೇಳಕ್ಕೆ ಬರುವವರ ಅನುಕೂಲಕ್ಕಾಗಿಯೇ ವಿಶ್ವವಿದ್ಯಾಲಯವು ಪ್ರತ್ಯೇಕ ಆ್ಯಪ್‌ ಅಭಿವೃದ್ಧಿಪಡಿಸಿದ್ದು, ಬೇಕಾದವರು ಇದನ್ನು ಡೌನ್‌ಲೋಡ್‌ ಮಾಡಿಕೊಂಡು ನೆರವು ಪಡೆಯಬಹುದು. ಪ್ಲೇ ಸ್ಟೋರ್‌ನಲ್ಲಿ “ಕೃಷಿ ಮೇಳ-2019 ಬೆಂಗಳೂರು’ ಎಂದು ಟೈಪ್‌ ಮಾಡಿದರೆ, ವಿವಿಯ ಚಿಹ್ನೆ ಇರುವ ಆ್ಯಪ್‌ ಬರುತ್ತದೆ. ಅದನ್ನು ಡೌನ್‌ ಲೋಡ್‌ ಮಾಡಿಕೊಂಡರೆ, ಅದರಲ್ಲಿ ಬಸ್‌, ಮಾರ್ಗನಕ್ಷೆ, ವಿಶೇಷ ಬಸ್‌ ಸೌಲಭ್ಯ, ತಾಕುಗಳು, ಪ್ರದರ್ಶನ ಮಳಿಗೆಗಳು, ವಾಹನ ನಿಲುಗಡೆ ಪ್ರದೇಶ ಸೇರಿದಂತೆ ಪ್ರತಿಯೊಂದು ಇದರಲ್ಲಿ ಲಭ್ಯ. ಬಳಕೆದಾರರು ಇಲ್ಲಿ ಸಲಹೆಗಳನ್ನು ಕೂಡ ನೀಡಬಹುದು.

2 ವಾರ ಮುಂಚೆ ಮೇಳ :  ಸಾಮಾನ್ಯವಾಗಿ ನವೆಂಬರ್‌ ಮಧ್ಯೆ ಕೃಷಿ ಮೇಳ ಏರ್ಪಡಿಸಲಾಗುತ್ತದೆ. ಆದರೆ, ಈ ಬಾರಿ ಎರಡು ವಾರ ಮುಂಚಿತವಾಗಿ ಹಮ್ಮಿಕೊಳ್ಳಲಾಗಿದೆ. ವಾರಾಂತ್ಯದಲ್ಲಿ ಮಳೆ ಮುನ್ಸೂಚನೆ ಮತ್ತೂಂದೆಡೆ ದೀಪಾವಳಿ ಇದೆ. ಈ ನಡುವೆ ಮೇಳ ಇರುವುದರಿಂದ ನಿರೀಕ್ಷಿತ ಮಟ್ಟದಲ್ಲಿ ರೈತರ ಭಾಗವಹಿಸುವಿಕೆ ಕಡಿಮೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next