ಧಾರವಾಡ: ವಿಧಾನ ಪರಿಷತ್ ಪಶ್ಚಿಮ ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಜೂ.13ರಂದು ಮತದಾನ ಜರುಗಲಿದ್ದು, ಬೆಳಗ್ಗೆ 8ರಿಂದ ಗಂಟೆಯಿಂದ ಸಂಜೆ 5 ಗಂಟೆವರೆಗೆ ಮತದಾನ ನಡೆಯಲಿದೆ.
ಸೋಮವಾರ ಮತದಾನಕ್ಕೆ ಸಕಲ ಸಿದ್ಧತೆ ಪೂರ್ಣಗೊಂಡಿದ್ದು, ಮತದಾನ ಪ್ರಕ್ರಿಯೆ ಹಿನ್ನೆಲೆಯಲ್ಲಿ ಜಿಲ್ಲೆಯ ಆಯಾ ತಹಶೀಲ್ದಾರ್ ಕಚೇರಿಯಲ್ಲಿ ರವಿವಾರ ಮಸ್ಟರಿಂಗ್ ಕಾರ್ಯ ನಡೆಯಿತು.
ಚುನಾವಣೆ ಕಾರ್ಯಕ್ಕೆ ನೇಮಕಗೊಂಡ ಅಧಿಕಾರಿಗಳು ಮತಪೆಟ್ಟಿಗೆ, ಅಗತ್ಯ ದಾಖಲಾತಿಗಳನ್ನು ಪಡೆದು ನೇಮಿಸಿದ ಮತಗಟ್ಟೆಗಳಿಗೆ ತೆರಳಿದರು. ಮತದಾನಕ್ಕೆ ಕ್ಷಣಗಣನೆ ಆರಂಭಗೊಂಡಿದ್ದು, ಅಭ್ಯರ್ಥಿಗಳ ರಾಜಕೀಯ ಹಣೆಬರಹ ನಿರ್ಧಾರವಾಗಲಿದೆ.
ಕಾಂಗ್ರೆಸ್‌ನಿಂದ ಬಸವರಾಜ ಗುರಿಕಾರ, ಬಿಜೆಪಿಯಿಂದ ಬಸವರಾಜ ಹೊರಟ್ಟಿ, ಜೆಡಿಎಸ್‌ನಿಂದ ಶ್ರೀಶೈಲ ಗಡದಿನ್ನಿ, ನಾಲ್ವರು ಪಕ್ಷೇತರ ಅಭ್ಯರ್ಥಿಗಳು ಸೇರಿದಂತೆ ಒಟ್ಟು 7 ಜನ ಅಭ್ಯರ್ಥಿಗಳು ಅಂತಿಮ ಕಣದಲ್ಲಿ ಉಳಿದಿದ್ದಾರೆ.
ಮತದಾನ ಪ್ರಕ್ರಿಯೆಗೆ ಸಕಲ ಸಿದ್ಧತೆ ಮಾಡಿಕೊಂಡಿರುವ ಜಿಲ್ಲಾಡಳಿತವು ಜಿಲ್ಲೆಯಲ್ಲಿ ಒಟ್ಟು 21 ಮತಗಟ್ಟೆಗಳನ್ನು ಸ್ಥಾಪಿಸಿದ್ದು, 3450 ಪುರುಷ ಹಾಗೂ 2995 ಮಹಿಳೆಯರು ಸೇರಿ ಒಟ್ಟು 6445 ಮತದಾರರು ಮತ ಚಲಾಯಿಸಲಿದ್ದಾರೆ. ಜೂ.15ರಂದು ಬೆಳಗಾವಿಯಲ್ಲಿ ಮತ ಎಣಿಕೆ ನಡೆಯಲಿದೆ.
ಜಿಲ್ಲೆಯ ಮತಗಟ್ಟೆಗಳ ಮಾಹಿತಿ: ಅಳ್ನಾವರ ಪಪಂ ಕಚೇರಿ, ಗರಗದ ಶಾಸಕರ ಮಾದರಿ ಕನ್ನಡ ಪ್ರಾಥಮಿಕ ಶಾಲೆ, ಧಾರವಾಡ ಶಹರದಲ್ಲಿ ತಹಶೀಲ್ದಾರ್ ಕಚೇರಿ, ಕರ್ನಾಟಕ ಕಾಲೇಜು ಬಿಬಿಎ ಕಟ್ಟಡ, ಸಪ್ತಾಪುರದ ಶಾರದಾ ಹೆಣ್ಣು ಮಕ್ಕಳ ಶಾಲೆ, ಆಝಾದ್ ಪಾರ್ಕ್ ಬಳಿಯ ಟಿಸಿಡಬ್ಲೂé ಆವರಣದ ಸರ್ಕಾರಿ ಪ್ರಾಥಮಿಕ ಶಾಲೆ, ವಿದ್ಯಾಗಿರಿಯ ಜೆಎಸ್ಸೆಸ್ ಮಂಜುನಾಥೇಶ್ವರ ಸೆಂಟ್ರಲ… ಸ್ಕೂಲ್, ಹುಬ್ಬಳ್ಳಿಯ ಭೈರಿದೇವರಕೊಪ್ಪದ ಸನಾ ಶಾಹೀನ ಪಿಯು ಕಾಲೇಜು, ದೇಶಪಾಂಡೆ ನಗರದ ಎನ್. ಆರ್. ದೇಸಾಯಿ ರೋಟರಿ ಕನ್ನಡ ಮಾಧ್ಯಮ ಶಾಲೆ, ಗೋಕುಲ ರಸ್ತೆ, ಬಸವೇಶ್ವರ ನಗರದ ಚನ್ನಬಸಮ್ಮ ಲಿಂಗನಗೌಡ ಪಾಟೀಲ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಬಾಸೆಲ್ ಮಿಷನ್ ಗಂಡು ಮಕ್ಕಳ ಹೈಸ್ಕೂಲ್, ತಹಶೀಲ್ದಾರ್ ಕಚೇರಿಯ ಕೋರ್ಟ್ ಹಾಲ್, ಹೆಬಸೂರು ಕನ್ನಡ ಪ್ರಾಥಮಿಕ ಗಂಡು ಮಕ್ಕಳ ಶಾಲೆ, ವರೂರು ಕನ್ನಡ ಹಿರಿಯ ಪ್ರಾಥಮಿಕ ಶಾಲೆ, ಕುಂದಗೋಳ ತಾಪಂ, ಗುಡಗೇರಿ ಎಫ್.ಸಿ. ಮುತ್ತೂರ ಹೈಸ್ಕೂಲ್, ಯಲಿವಾಳ ಸರ್ಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆ, ಕಲಘಟಗಿ ತಹಶೀಲ್ದಾರ್ ಕಚೇರಿ, ಗಳಗಿ ಹುಲಕೊಪ್ಪ ಮಾಡೆಲ್ ಸೆಂಟ್ರಲ್ ಸ್ಕೂಲ್, ನವಲಗುಂದ ತಹಶೀಲ್ದಾರ್ ಕಚೇರಿ, ಅಣ್ಣಿಗೇರಿ ತಾಲೂಕು ಶಾಸಕರ ಸರ್ಕಾರಿ ಮಾದರಿ ಶಾಲೆ ಸೇರಿದಂತೆ ಒಟ್ಟು 21 ಮತಗಟ್ಟೆಗಳಲ್ಲಿ ಮತದಾನ ನಡೆಯಲಿದೆ.