Advertisement

12ನೇ ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ದಿನಗಣನೆ

05:39 PM Feb 25, 2020 | Lakshmi GovindaRaj |

ಬೆಂಗಳೂರು: 12ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವಕ್ಕೆ ದಿನಗಣನೆ ಶುರುವಾಗಿದೆ. ಫೆ.26ರಂದು ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಸಂಜೆ 6 ಗಂಟೆಗೆ ನಡೆಯುವ ಸಮಾರಂಭಕ್ಕೆ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಚಾಲನೆ ನೀಡಲಿದ್ದಾರೆ. ಬಾಲಿವುಡ್‌ನ‌ ಖ್ಯಾತ ನಟಿ ಜಯಪ್ರದಾ, ಹಿನ್ನೆಲೆ ಗಾಯಕ ಸೋನು ನಿಗಮ್‌, ನಿರ್ಮಾಪಕ ಬೋನಿ ಕಪೂರ್‌ ಹಾಗೂ ಕನ್ನಡದ ನಟ ಯಶ್‌ ಅವರು ಅತಿಥಿಗಳಾಗಿ ಆಗಮಿಸುತ್ತಿದ್ದಾರೆ.

Advertisement

ಚಿತ್ರೋತ್ಸವದ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸುನೀಲ್‌ ಪುರಾಣಿಕ್‌, “ಅಂದು ಇರಾನಿ ಚಿತ್ರ ನಿರ್ದೇಶಕ ಶಾಹಿದ್‌ ಅಹಮಡೇಲು ನಿರ್ದೇಶಿಸಿರುವ “ಸಿನಿಮಾ ಖಾರ್‌’ (ಸಿನಿಮಾ ಡಾಂಕಿ) ಚಿತ್ರವನ್ನು ಉದ್ಘಾಟನಾ ಚಿತ್ರವಾಗಿ ಪ್ರದರ್ಶಿಸಲಾಗುವುದು.

ಮಾ.4ರಂದು ವಿಧಾನಸೌಧದ ಬ್ಯಾಂಕ್ವೆಟ್‌ ಹಾಲ್‌ನಲ್ಲಿ ಮುಕ್ತಾಯ ಸಮಾರಂಭ ನಡೆಯಲಿದ್ದು, ಏಷ್ಯಾ ಭಾರತೀಯ ಹಾಗೂ ಕನ್ನಡದ ಅತ್ಯುತ್ತಮ ಚಿತ್ರಗಳಿಗೆ ರಾಜ್ಯಪಾಲರಾದ ವಜುಭಾಯ್‌ವಾಲಾ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಮುಕ್ತಾಯ ಚಿತ್ರವಾಗಿ ಇಸ್ರೇಲ್‌ನ ಇವೆಗಿನಿ ರುಮಾನ್‌ ನಿರ್ದೇಶನದ “ಗೋಲ್ಡನ್‌ ವಾಯ್ಸಸ್‌’ ಚಿತ್ರವನ್ನು ಪ್ರದರ್ಶಿಸಲಾಗುವುದು ಎಂದರು.

60 ದೇಶಗಳ 225 ಚಿತ್ರಗಳ ಪ್ರದರ್ಶನ: ಫೆ.27 ರಿಂದ ಒರಾಯನ್‌ ಮಾಲ್‌ನ ಪಿ.ವಿ.ಆರ್‌. ಸಿನಿಮಾಸ್‌ನ 11 ಪರದೆಗಳು, ರಾಜಾಜಿನಗರದ ನವರಂಗ್‌ ಚಿತ್ರಮಂದಿರ, ಚಾಮರಾಜಪೇಟೆಯಲ್ಲಿ ರುವ ಕಲಾವಿದರ ಸಂಘದ ಡಾ.ರಾಜ್‌ ಭವನ ಹಾಗೂ ಬನಶಂಕರಿಯಲ್ಲಿರುವ ಸುಚಿತ್ರಾ ಫಿಲಂ ಸೊಸೈಟಿಯ ಪರದೆಗಳಲ್ಲಿ ಪ್ರಪಂಚದ ಅದ್ಭುತ ಸಿನಿಮಾಗಳು ಪ್ರದರ್ಶನವಾಗಲಿವೆ. ಚಿತ್ರೋತ್ಸವದಲ್ಲಿ ಒಟ್ಟು 60 ದೇಶಗಳ 225 ಚಿತ್ರಗಳು ವಿವಿಧ ವಿಭಾಗಗಳಲ್ಲಿ ಪ್ರದರ್ಶನಗೊಳ್ಳಲಿವೆ ಎಂದು ಮಾಹಿತಿ ನೀಡಿದರು.

ಈ ಬಾರಿಯೂ ಏಷ್ಯನ್‌ ಸ್ಪರ್ಧಾ ವಿಭಾಗ, ಭಾರತೀಯ ಚಿತ್ರಗಳ ವಿಭಾಗ, ಕನ್ನಡ ಚಿತ್ರಗಳ ಸ್ಪರ್ಧಾ ವಿಭಾಗ ಹಾಗೂ ಕನ್ನಡ ಜನಪ್ರಿಯ ಮನರಂಜನಾ ಚಿತ್ರಗಳ ವಿಭಾಗಗಳಿವೆ. ಸಮಕಾಲೀನ ವಿಶ್ವ ಸಿನಿಮಾ, ದೇಶ ಕೇಂದ್ರಿತವಾಗಿರುವ ಜರ್ಮನಿ, ಪಿಲಿಫೈನ್ಸ್‌, ಆಸ್ಟ್ರೇಲಿಯಾ ರಾಷ್ಟ್ರಗಳ ಚಿತ್ರಗಳಿವೆ.

Advertisement

ಪುನರಾವಲೋಕನ ವಿಭಾಗದಲ್ಲಿ ರಷ್ಯಾದ ನಿರ್ದೇಶಕ ಆಂದ್ರೆ ತಾರ್ಕೋವ್‌ಸ್ಕಿ ಹಾಗೂ ಬಹುಭಾಷಾ ನಟ ಅನಂತ್‌ನಾಗ್‌ ಅವರ ಚಿತ್ರಗಳು ಪ್ರದರ್ಶನವಾಗಲಿವೆ. ಉಳಿದಂತೆ ಬರ್ಲಿನ್‌, ಕಾನ್‌, ವೆನಿಸ್‌, ಟೊರೆಂಟೊ, ಗೋವಾ, ಮುಂಬೈ ಹಾಗೂ ಕೇರಳ ಅಂತಾರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಪಾಲ್ಗೊಂಡ ವಿಶ್ವ ಸಿನಿಮಾಗಳು ಈ ಬಾರಿಯ ಬೆಂಗಳೂರು ಚಿತ್ರೋತ್ಸವದಲ್ಲಿವೆ.

ಇವುಗಳೊಂದಿಗೆ, “ಭಾರತೀಯ ಸಾಂಪ್ರದಾಯಿಕ ಸಂಗೀತ ಪರಂಪರೆ ಮತ್ತು ಸಿನಿಮಾ’ ಇದು ಚಿತ್ರೋತ್ಸವದ ಮುಖ್ಯ ಅಂಶವಾಗಿದ್ದು, ಇಲ್ಲಿ ಸಂಗೀತಗಾರರ ಆತ್ಮಕಥೆ ಆಧಾರಿತ ಚಿತ್ರಗಳು, ಸಂಗೀತ ಪ್ರಧಾನ ಸಿನಿಮಾಗಳು ಪ್ರದರ್ಶನವಾಗಲಿವೆ. ಪಿವಿಆರ್‌ನ ಒಂದು ಪರದೆಯಲ್ಲಿ ಚಲನಚಿತ್ರ ಕಾರ್ಯಾಗಾರ, ವಿಚಾರ ಸಂಕಿರಣ ಮತ್ತು ಮಾಸ್ಟರ್‌ ಕ್ಲಾಸ್‌ಗಳು ನಡೆಯಲಿವೆ.

ಉಳಿದ ಹೆಚ್ಚಿನ ಮಾಹಿತಿ ಅಕಾಡೆಮಿಯ ಅಧಿಕೃತ ವೆಬ್‌ಸೈಟ್‌ biffes.in ನಲ್ಲಿ ಕಾಣಬಹುದು ಎಂದು ಮಾಹಿತಿ ನೀಡಿದರು. ಪತ್ರಿಕಾಗೋಷ್ಠಿಯಲ್ಲಿ ವಾರ್ತಾ ಇಲಾಖೆ ಆಯುಕ್ತರಾದ ಎಸ್‌.ಎನ್‌.ಸಿದ್ಧರಾಮಪ್ಪ, ಜಂಟಿ ನಿರ್ದೇಶಕ ಎಚ್‌.ಬಿ.ದಿನೇಶ್‌, ಕಲಾತ್ಮಕ ನಿರ್ದೇಶಕ ಎನ್‌.ವಿದ್ಯಾಶಂಕರ್‌, ರಿಜಿಸ್ಟ್ರಾರ್‌ ಹಿಮಂತರಾಜು ಜಿ.ಉಪಸ್ಥಿತರಿದ್ದರು.

ಪ್ಲಾಸ್ಟಿಕ್‌ ಮುಕ್ತ ಚಿತ್ರೋತ್ಸವ: ಈ ಬಾರಿಯ ಚಿತ್ರೋತ್ಸವದಲ್ಲಿ ಹಲವು ವಿಶೇಷತೆಗಳಿವೆ. ಸುಮಾರು 30 ಮಹಿಳಾ ನಿರ್ದೇಶಕರ ಸಿನಿಮಾಗಳನ್ನೂ ಸಹ ಪಟ್ಟಿ ಮಾಡಿ, ಪ್ರದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಕಳೆದ ಹತ್ತು ವರ್ಷದಲ್ಲೇ ಈ ಬಾರಿಯ ಚಿತ್ರೋತ್ಸವ ಹಲವು ವೈಶಿಷ್ಟಗಳನ್ನು ಹೊಂದಿದೆ. ಪ್ರಪಂಚದ ಅತಿ ಅದ್ಭುತ ಸಿನಿಮಾಗಳು ಪ್ರದರ್ಶನ ಆಗುತ್ತಿರು ವುದೇ ಆ ವಿಶೇಷ.

ಇದರೊಂದಿಗೆ ಈ ವರ್ಷ ದಿಂದ ನಿರ್ದೇಶಕರ ಸಂಘದಿಂದ ಸಿನಿಮಾ ಬಜಾರ್‌ ವ್ಯವಸ್ಥೆಯನ್ನೂ ಮಾಡಲಾಗಿದೆ. ಇನ್ನು, ಈ ಸಲ ಚಿತ್ರೋತ್ಸವವನ್ನು ಪ್ಲಾಸ್ಟಿಕ್‌ ಮುಕ್ತಗೊ ಳಿಸಲು ನಿರ್ಧರಿಸಿದ್ದು, ಪರಿಸರ ಕಡೆ ಗಮನ ಹರಿಸಿ, “ಗ್ಲೋ ಗ್ರೀನ್‌ ಫೆಸ್ಟಿವಲ್‌’ ಮಾಡಲು ನಿರ್ಧರಿಸಲಾಗಿದೆ. ಸದ್ಯಕ್ಕೆ ಯಾವೆಲ್ಲಾ ಚಿತ್ರಗಳು ಪ್ರದರ್ಶನಕ್ಕೆ ಸಜ್ಜಾಗಿವೆ ಎಂಬುದರ ಬಗ್ಗೆ ವೆಬ್‌ಸೈಟ್‌ನಲ್ಲೇ ಮಾಹಿತಿ ಪಡೆಯಬಹುದಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next