Advertisement
ಕಣದಲ್ಲಿ 10 ಅಭ್ಯರ್ಥಿಗಳಿದ್ದು ಬಿಜೆಪಿ ಅಭ್ಯರ್ಥಿ ಶಿವಕುಮಾರ ಉದಾಸಿ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಡಿ.ಆರ್. ಪಾಟೀಲ ನಡುವೆ ನೇರ ಪೈಪೋಟಿ ಏರ್ಪಟ್ಟಿತ್ತು. ಈ ಪೈಪೋಟಿಯಲ್ಲಿ ಯಾರ ಕೈ ಮೇಲಾಗಲಿದೆ ಎಂಬುದು ಬಹಿರಂಗಗೊಳ್ಳುವ ಜತೆಗೆ ಇತರ ರಾಜಕೀಯ ಪಕ್ಷಗಳ ಬಲ, ಪಕ್ಷೇತರ ಅಭ್ಯರ್ಥಿಗಳ ಸಾಮರ್ಥ್ಯ ಪ್ರದರ್ಶನವೂ ಆಗಲಿದೆ.
Related Articles
Advertisement
ಶಾಸಕರ ಬಲ ಹೀಗಿತ್ತು: ಹಾವೇರಿ ಲೋಕಸಭೆ ಕ್ಷೇತ್ರ ಗದಗ ಹಾಗೂ ಹಾವೇರಿ ಜಿಲ್ಲೆಯ ಎಂಟು ವಿಧಾನಸಭೆ ಕ್ಷೇತ್ರಗಳನ್ನೊಳಗೊಂಡಿದೆ. ಹಾನಗಲ್ಲ, ಹಾವೇರಿ, ಬ್ಯಾಡಗಿ, ರೋಣ, ಶಿರಹಟ್ಟಿ ಹೀಗೆ ಐದು ಕಡೆ ಬಿಜೆಪಿ ಶಾಸಕರಿದ್ದು ಗದಗ ಹಾಗೂ ಹಿರೇಕೆರೂರ ಎರಡು ಕ್ಷೇತ್ರಗಳಲ್ಲಿ ಮಾತ್ರ ಕಾಂಗ್ರೆಸ್ ಶಾಸಕರಿದ್ದಾರೆ. ರಾಣಿಬೆನ್ನೂರಿನಲ್ಲಿ ಪಕ್ಷೇತರ ಶಾಸಕ ಆರ್. ಶಂಕರ್ ಇದ್ದಾರೆ. ಕಳೆದ ಬಾರಿ ಕ್ಷೇತ್ರದಲ್ಲಿ ಹಿರೇಕೆರೂರು ಹೊರತು ಪಡಿಸಿ (ಹಿರೇಕೆರೂರರಲ್ಲಿ ಬಿಜೆಪಿ ಶಾಸಕರಿದ್ದರು) ಕ್ಷೇತ್ರದ ಏಳು ವಿಧಾನಸಭೆ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರಿದ್ದರು. ಯಾವ ಕ್ಷೇತ್ರದಲ್ಲಿ ಯಾವ ಪಕ್ಷಕ್ಕೆ ಮುನ್ನಡೆಯಾಗಿದೆ ಎಂಬ ಕುತೂಹಲಕ್ಕೂ ಫಲಿತಾಂಶ ತೆರೆ ಎಳೆಯಲಿದೆ.
ಪ್ರಚಾರ ಪ್ರಭಾವ: ಕ್ಷೇತ್ರದಲ್ಲಿ ಎರಡೂ ರಾಷ್ಟ್ರೀಯ ಪಕ್ಷಗಳು ಈ ಬಾರಿ ಸ್ಥಳೀಯ ವಿಚಾರಗಳಿಗಿಂತ ರಾಷ್ಟ್ರೀಯ ವಿಚಾರಗಳನ್ನೇ ತಮ್ಮ ಪ್ರಚಾರದ ಪ್ರಮುಖ ಅಸ್ತ್ರಗಳನ್ನಾಗಿಸಿಕೊಂಡಿದ್ದವು. ಮೋದಿ ಹಾಗೂ ರಾಹುಲ್ ಕುರಿತು ಟೀಕೆ, ಕೇಂದ್ರದಲ್ಲಿ ಆಡಳಿತದಲ್ಲಿದ್ದಾಗ ತಮ್ಮ ಪಕ್ಷದ ಸರ್ಕಾರಗಳು ಮಾಡಿದ ಸಾಧನೆ, ರಾಜಕೀಯ ಪಕ್ಷಗಳ ಮೇಲಿರುವ ರಾಷ್ಟ್ರೀಯ ಆಪಾದನೆಗಳೇ ಈ ಬಾರಿ ಪ್ರಚಾರದಲ್ಲಿ ಅಗ್ರಸ್ಥಾನ ಪಡೆದಿದ್ದವು. ಸರ್ಜಿಕಲ್ ಸ್ಟ್ರೈಕ್ ಕೂಡ ಸದ್ದು ಮಾಡಿತ್ತು. ಈ ಪ್ರಚಾರಾಸ್ತ್ರಗಳು ಮತದಾರರ ಮೇಲೆ ಯಾವ ರೀತಿಯ ಪರಿಣಾಮ ಬೀರಿರಬಹುದು ಎಂಬುದು ಸಹ ಫಲಿತಾಂಶದೊಂದಿಗೇ ಬಹಿರಂಗಗೊಳ್ಳಲಿದೆ.
ಕಲಿಗಳ ಪ್ರಭಾವ: ಚುನಾವಣೆ ಕಣದಲ್ಲಿರುವ ಎಲ್ಲ 10 ಅಭ್ಯರ್ಥಿಗಳಲ್ಲಿ ಕೂಲಿಕಾರ್ಮಿಕರೂ ಇದ್ದರು. ಉದ್ಯಮಿಗಳೂ ಇದ್ದರು. ಪ್ರಾಥಮಿಕ ಶಿಕ್ಷಣ ಓದಿದವರೂ ಇದ್ದರು. ಪದವೀಧರರೂ ಇದ್ದರು. ಅಷ್ಟೇಅಲ್ಲ ಸಾವಿರಾರು ರೂ. ಆಸ್ತಿ ಹೊಂದಿದವರು, ಕೋಟ್ಯಂತರ ರೂ. ಆಸ್ತಿ ಒಡೆಯರೂ ಇದ್ದರು. ಮಧ್ಯ ವಯಸ್ಕರೂ ಇದ್ದರೂ 70ವರ್ಷ ಮೀರಿದ ಹಿರಿಯರೂ ಇದ್ದರು. ಮತದಾರ ಪ್ರಭು ಅಭ್ಯರ್ಥಿಗಳಲ್ಲಿನ ಯಾವ ಅಂಶ ಆಧರಿಸಿ ಮತ ಹಾಕಿದ್ದಾನೆ ಎಂಬ ಕೌತುಕವನ್ನೂ ಫಲಿತಾಂಶ ತಣಿಸಲಿದೆ.
ಒಟ್ಟಾರೆ ಕ್ಷೇತ್ರದಲ್ಲಿ ಕುತೂಹಲ ಕೆರಳಿಸಿದ ಯಾರು ಗೆದ್ದರು? ಯಾರಿಗೆ ಯಾವ ಅಂಶ ಸಹಕಾರಿಯಾಯಿತು? ಯಾವ ಕ್ಷೇತ್ರದ ಮತದಾರರು ಯಾರ ಬೆಂಬಲಕ್ಕೆ ನಿಂತರು ಎಂಬ ಪ್ರಶ್ನೆಗಳಿಗೆ ಇಂದು ಬಹಿರಂಗಗೊಳ್ಳುವ ಫಲಿತಾಂಶವೇ ಉತ್ತರ ನೀಡಲಿದೆ.
•ಎಚ್.ಕೆ. ನಟರಾಜ