Advertisement

ಸಕಲ ಭದ್ರತೆಯೊಂದಿಗೆ ಮತ ಎಣಿಕೆ

02:12 PM May 21, 2019 | Team Udayavani |

ಬೆಂಗಳೂರು: ನಗರ ಜಿಲ್ಲೆ ವ್ಯಾಪ್ತಿಯ ಮೂರು ಲೋಕಸಭಾ ಕ್ಷೇತ್ರಗಳ ಮತ ಎಣಿಕೆ ಕಾರ್ಯಕ್ಕೆ ಬಿಬಿಎಂಪಿ, ಜಿಲ್ಲಾಡಳಿತ ಹಾಗೂ ನಗರ ಪೊಲೀಸರು ಸಕಲ ಸಿದ್ಧತೆ ಮಾಡಿಕೊಂಡಿದ್ದು, ಮೂರು ಕಡೆ ನಡೆಯಲಿರುವ ಮತ ಎಣಿಕೆ ಕಾರ್ಯಕ್ಕೆ 1,500 ಹಾಗೂ ಭದ್ರತೆಗೆ 2,300 ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

Advertisement

ಸೋಮವಾರ ಕರೆದಿದ್ದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಬಿಬಿಎಂಪಿ ಆಯುಕ್ತ ಮಂಜುನಾಥ್‌ ಪ್ರಸಾದ್‌ ಹಾಗೂ ನಗರ ಪೊಲೀಸ್‌ ಆಯುಕ್ತ ಟಿ.ಸುನೀಲ್ ಕುಮಾರ್‌ ಅವರು ಮತ ಎಣಿಕೆ ಕಾರ್ಯ ಹಾಗೂ ಭದ್ರತಾ ವ್ಯವಸ್ಥೆಯ ಸಿದ್ಧತೆಗಳ ಬಗ್ಗೆ ಮಾಹಿತಿ ನೀಡಿದರು.

ಮತ ಎಣಿಕೆ ಸಿದ್ಧತೆಗಳ ಬಗ್ಗೆ ಮಾಹಿತಿ ನೀಡಿದ ಬಿಬಿಎಂಪಿ ಆಯುಕ್ತ ಮಂಜುನಾಥ್‌ ಪ್ರಸಾದ್‌, 23ರಂದು ಎಲ್ಲ ಮೂರು ಕ್ಷೇತ್ರಗಳ ಮತ ಎಣಿಕೆ ಕಾರ್ಯ ಬೆಳಗ್ಗೆ 8 ಗಂಟೆಯಿಂದ ಏಕಕಾಲಕ್ಕೆ ಆರಂಭವಾಗಲಿದೆ. 8.30ರವರೆಗೆ ಪೇಪರ್‌ ಬ್ಯಾಲೆಟ್ ಮತ್ತು ಇಟಿಪಿಬಿಎಸ್‌ ಎಣಿಕೆ ನಡೆಯಲಿದೆ. ನಂತರ ಇವಿಎಂಗಳ ಎಣಿಕೆ ಆರಂಭಿಸಲಾಗುವುದು. ಮಧ್ಯಾಹ್ನ 12ರಿಂದ 1 ಗಂಟೆಯೊಳಗೆ ಇವಿಎಂಗಳಲ್ಲಿನ ಮತ ಎಣಿಕೆ ಪೂರ್ಣಗೊಳ್ಳಲಿದ್ದು, ಅದಾದ ಬಳಿಕ ವಿವಿ ಪ್ಯಾಟ್ ಮುದ್ರಿತ ಚೀಟಿಗಳ ಎಣಿಕೆ ಮತ್ತು ತಾಳೆ ನಡೆಯಲಿದೆ. ಅದರ ಬಳಿಕವಷ್ಟೇ ಅಂತಿಮ ಫ‌ಲಿತಾಂಶ ಪ್ರಕಟಿಸಲಾಗುವುದು. ಸಂಜೆ 6 ಗಂಟೆ ನಂತರ ಅಂತಿಮ ಫ‌ಲಿತಾಂಶ ಲಭ್ಯವಾಗಲಿದೆ ಎಂದು ತಿಳಿಸಿದರು.

ಕೊನೆಗೆ ವಿವಿಪ್ಯಾಟ್ ತಾಳೆ: ಮತ ಎಣಿಕೆಗೆ ಅನುಕೂಲವಾಗುವಂತೆ ಪ್ರತಿ ವಿಧಾನಸಭಾ ಕ್ಷೇತ್ರದ ಎಣಿಕೆ ಕೊಠಡಿಯಲ್ಲಿ ಒಟ್ಟು 14 ಮತ ಎಣಿಕೆ ಟೇಬಲ್ಗಳನ್ನು ವ್ಯವಸ್ಥೆ ಮಾಡಲಾಗಿದ್ದು, 300ಕ್ಕೂ ಹೆಚ್ಚು ಮತಗಟ್ಟೆಗಳಿರುವ ವಿಧಾನಸಭಾ ಕ್ಷೇತ್ರಗಳಲ್ಲಿ ಹೆಚ್ಚುವರಿ ಟೇಬಲ್ಗಳ ವ್ಯವಸ್ಥೆ ಮಾಡಲಾಗಿದೆ. ಸುಪ್ರೀಂಕೋರ್ಟ್‌ ಆದೇಶದಂತೆ ಇವಿಎಂ ಮತ ಎಣಿಕೆ ಮುಕ್ತಾಯದ ನಂತರ ಪ್ರತಿ ವಿಧಾನಸಭಾ ಕ್ಷೇತ್ರವಾರು ಲಾಟರಿ ಮೂಲಕ 5 ಮತಗಟ್ಟೆಗಳ ವಿವಿಪ್ಯಾಟ್‌ಗಳನ್ನು ಆರಿಸಿ ಅವುಗಳಲ್ಲಿನ ಮುದ್ರಿತ ಚೀಟಿಗಳನ್ನು ಎಣಿಕೆ ಮಾಡಿ ತಾಳೆ ಮಾಡಲಾಗುವುದು ಎಂದು ಮಂಜುನಾಥ್‌ ಪ್ರಸಾದ್‌ ತಿಳಿಸಿದರು.

ನಗರ ಜಿಲ್ಲೆ ವ್ಯಾಪ್ತಿಯ ಬೆಂಗಳೂರು ಕೇಂದ್ರ, ಬೆಂಗಳೂರು ಉತ್ತರ ಹಾಗೂ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರಗಳ 24 ವಿಧಾನಸಭಾ ಕ್ಷೇತ್ರಗಳಲ್ಲಿ ತಲಾ 14 ಎಣಿಕೆ ಟೇಬಲ್ಗಳ ವ್ಯವಸ್ಥೆ ಮಾಡಲಾಗಿರುತ್ತದೆ. ಆದರೆ, ಮತಗಟ್ಟೆಗಳು ಹೆಚ್ಚಿರುವ ಕೆ.ಆರ್‌.ಪುರ, ಬ್ಯಾಟರಾಯನಪುರ, ದಾಸರಹಳ್ಳಿಯಲ್ಲಿ ತಲಾ 26 ಟೇಬಲ್ಗಳು, ಯಶವಂತಪುರದಲ್ಲಿ 24, ಸರ್ವಜ್ಞನಗರದಲ್ಲಿ 21, ಮಹದೇವಪುರದಲ್ಲಿ 28 ಹಾಗೂ ಬೊಮ್ಮನಹಳ್ಳಿಯಲ್ಲಿ 24 ಟೇಬಲ್ಗಳ ವ್ಯವಸ್ಥೆ ಮಾಡಲಾಗುತ್ತಿದೆ.

Advertisement

ಮೊಬೈಲ್ ನಿಷೇಧ

ಮತ ಎಣಿಕೆ ಕೇಂದ್ರಗಳಲ್ಲಿ ಮೊಬೈಲ್ ಫೋನ್‌ ತೆಗೆದುಕೊಂಡು ಹೋಗುವುದನ್ನು ಸಂಪೂರ್ಣ ನಿಷೇಧಿಸಲಾಗಿದೆ. ಕೇವಲ ಮಾಧ್ಯಮದವರಿಗೆ ಮಾಧ್ಯಮ ಕೇಂದ್ರದಲ್ಲಿ ಮೊಬೈಲ್ ಫೋನ್‌ ಕೊಂಡೊಯ್ಯಲು ಅನುಮತಿ ನೀಡಲಾಗಿದೆ. ಉಳಿದಂತೆ ಯಾರಿಗೂ ಮೊಬೈಲ್ ಫೋನ್‌ ಜೊತೆಗೆ ತೆಗೆದುಕೊಂಡು ಹೋಗಲು ಅವಕಾಶ ನೀಡುವುದಿಲ್ಲ. ಅಲ್ಲದೇ ಮೊಬೈಲ್ ಫೋನ್‌ ಇಟ್ಟುಕೊಳ್ಳುವ ವ್ಯವಸ್ಥೆಯೂ ಸಹ ಮಾಡಿರುವುದಿಲ್ಲ. ಹಾಗಾಗಿ, ಯಾರೊಬ್ಬರೂ ತಮ್ಮ ಮೊಬೈಲ್ ಫೋನ್‌ ಎಣಿಕೆ ಕೇಂದ್ರಕ್ಕೆ ತೆಗೆದುಕೊಂಡು ಬರಕೂಡದು. ಮೊಬೈಲ್ ಇದ್ದವರಿಗೆ ಮತ ಎಣಿಕೆ ಕೇಂದ್ರದ 100 ಮೀಟರ್‌ ಆಚೆಯೇ ತಡೆಯಲಾಗುವುದು ಎಂದು ಆಯುಕ್ತರು ತಿಳಿಸಿದರು.

ಭದ್ರತೆಗೆ 2 ಸಾವಿರ ಸಿಬ್ಬಂದಿ ನಿಯೋಜನೆ

ಮತ ಎಣಿಕೆ ಕಾರ್ಯ ಸುಸೂತ್ರವಾಗಿ ಮತ್ತು ಶಾಂತಿಯುತವಾಗಿ ನಡೆಯಲು ಮೂರು ಲೋಕಸಭಾ ಕ್ಷೇತ್ರಗಳ ಮತ ಎಣಿಕೆ ಕೇಂದ್ರಗಳಲ್ಲಿ 7 ಡಿಸಿಪಿ, 24 ಎಸಿಪಿ, 76 ಇನ್ಸ್‌ಪೆಕ್ಟರ್‌ಗಳು, 180 ಸಬ್‌ ಇನ್ಸ್‌ಪೆಕ್ಟರ್‌ಗಳು 2 ಸಾವಿರಕ್ಕೂ ಹೆಚ್ಚು ಎಎಸ್‌ಐ, ಹೆಡ್‌ಕಾನ್ಸ್‌ಟೆಬಲ್, ಕಾನ್ಸ್‌ಟೆಬಲ್ಗಳು ಸೇರಿ 2,300 ಜನ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಇದಲ್ಲದೆ 2 ಅರೆಸೇನಾ ತುಕಡಿಗಳು, 23 ಕೆಎಸ್‌ಆರ್‌ಪಿ, 30 ನಗರ ಸಶಸ್ತ್ರ ಮೀಸಲು ಪಡೆಗಳನ್ನೂ ಸಹ ಭದ್ರತೆಗೆ ನಿಯೋಜಿಸಲಾಗಿದೆ. ಮತ ಎಣಿಕೆ ಕೇಂದ್ರಗಳ 100 ಮೀಟರ್‌ ನಿರ್ಬಂಧಿತ ಪ್ರದೇಶ ಇರುತ್ತದೆ. ಮೇ 23ರ ಬೆಳಿಗ್ಗೆ 6ರಿಂದ ಮಧ್ಯರಾತ್ರಿ 12 ಗಂಟೆವರೆಗೆ ನಗರಾದ್ಯಂತ ನಿಷೇಧಾಜ್ಞೆ ಜಾರಿಯಲ್ಲಿರಲಿದೆ. ಅದೇ ರೀತಿ ಮೇ 23ರ ಬೆಳಿಗ್ಗೆ 6ರಿಂದ ಮೇ 24ರ ಬೆಳಿಗ್ಗೆ 6 ಗಂಟೆ ತನಕ ಸಂಪೂರ್ಣ ಮಧ್ಯ ಮಾರಾಟ ನಿಷೇಧ ಇರಲಿದೆ. ಹೆಚ್ಚುವರಿ ಪೊಲೀಸ್‌ ಆಯುಕ್ತ ಸೀಮಂತ್‌ ಕುಮಾರ್‌ ಸಿಂಗ್‌ ಹಾಗೂ ಬಿ.ಕೆ. ಸಿಂಗ್‌ ಭದ್ರತೆಯ ಉಸ್ತುವಾರಿ ನೋಡಿಕೊಳ್ಳಲಿದ್ದಾರೆ ಎಂದು ನಗರ ಪೊಲೀಸ್‌ ಆಯುಕ್ತ ಟಿ. ಅನಿಲ್ ಕುಮಾರ್‌ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

1,500 ಚುನಾವಣಾ ಸಿಬ್ಬಂದಿ

ಮೂರು ಲೋಕಸಭಾ ಕ್ಷೇತ್ರಗಳ ಮತ ಎಣಿಕೆ ಕಾರ್ಯಕ್ಕೆ ತಲಾ 497 ಮತ ಎಣಿಕೆ ಮೇಲ್ವಿಚಾರಕರು, ಮತ ಎಣಿಕೆ ಸಹಾಯಕರು ಹಾಗೂ ಮೈಕ್ರೋ ಅಬ್ಸರ್ವರ್‌ಗಳು ಸೇರಿ ಒಟ್ಟು 1,500 ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗಿದ್ದು, ಈಗಾಗಲೇ ಅವರಿಗೆಲ್ಲ ಮೊದಲ ಹಂತದ ತರಬೇತಿ ನೀಡಲಾಗಿದೆ. ಇದಲ್ಲದೆ ಕೇಂದ್ರ ಚುನಾವಣಾ ಆಯೋಗವು ಪ್ರತಿ ಎರಡು ವಿಧಾನಸಭಾಕ್ಷೇತಗಳಿಗೆ ಒಬ್ಬರಂತೆ 12 ಜನ ವಿಶೇಷ ಮತ ಎಣಿಕೆ ವೀಕ್ಷಕರನ್ನು ನೇಮಕ ಮಾಡಿದೆ.
Advertisement

Udayavani is now on Telegram. Click here to join our channel and stay updated with the latest news.

Next