ಬೆಂಗಳೂರು: ಬಿಬಿಎಂಪಿ ದಕ್ಷಿಣ ವಲಯದ ವ್ಯಾಪ್ತಿಯಲ್ಲಿ ಬರುವ ಏಳು ವಿಧಾನಸಭಾ ಕ್ಷೇತ್ರಗಳ ಪೈಕಿ ಜಯನಗರದ ಎಸ್‌ಎಸ್‌ಎಂಆರ್‌ವಿ ಕಾಲೇಜಿನ ಆರು ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ ಕಾರ್ಯ ಮಂಗಳವಾರ ನಡೆಯಿತು.
ಆರು ಕ್ಷೇತ್ರಗಳಲ್ಲಿ ಬಿಟಿಎಂ ಲೇಔಟ್, ವಿಜಯನಗರ ಹೊರತುಪಡಿಸಿ ಬಸವನಗುಡಿ, ಪದ್ಮನಾಭನಗರ, ಗೋವಿಂದರಾಜನಗರ, ಬೊಮ್ಮನಹಳ್ಳಿ ಕ್ಷೇತ್ರಗಳಲ್ಲಿ ಬಿಜೆಪಿ ಜಯಭೇರಿ ಬಾರಿಸಿದೆ. ಇದರಿಂದಾಗಿ ಮತ ಎಣಿಕೆ ಕೇಂದ್ರದ ಹೊರಗಡೆ ಬಿಜೆಪಿ ಕಾರ್ಯಕರ್ತರೇ ಹೆಚ್ಚಿನ ಸಂಖ್ಯೆಯಲ್ಲಿ ನೆರೆದಿದ್ದರು.
ವಿಜಯನಗರ ಮತ್ತು ಗೋವಿಂದರಾಜನಗರ ಕ್ಷೇತ್ರದ ಮತ ಎಣಿಕೆ, ಬಿಜೆಪಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರನ್ನು ಕೊನೆವರೆಗೆ ತುದಿಗಾಲಲ್ಲಿ ನಿಲ್ಲುವಂತೆ ಮಾಡಿತು. ಈ ಎರಡೂ ಕ್ಷೇತ್ರಗಳ ಫಲಿತಾಂಶ ಕೊನೆಯ ಸುತ್ತಿನಲ್ಲಿ ಅಂತಿಮವಾಯಿತು. ಈ ವೇಳೆ ಸಂಭ್ರಮಾಚರಣೆ ನಡೆಸಿದ ಬಿಜೆಪಿ ಕಾರ್ಯಕರ್ತರು, ಆರ್.ಅಶೋಕ್, ವಿ.ಸೋಮಣ್ಣ, ಸತೀಶ್ ರೆಡ್ಡಿ, ರವಿ ಸುಬ್ರಹ್ಮಣ್ಯ ಪರ ಜೈಕಾರ ಹಾಕಿದರು.
ಮುಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಎಂದು ಘೋಷಣೆ ಕೂಗಿದರು. “ಒಂದು ರುಪಾಯ್ ಟೀಪುಡಿ, ಕಾಂಗ್ರೆಸ್ ಪುಡಿ ಪುಡಿ’, ಹರ ಹರ ಮೋದಿ, ಘರ್ ಘರ್ ಮೋದಿ ಎಂದ ಜಯಘೋಷ ಮೊಳಗಿಸಿದರು. ಆರ್.ಅಶೋಕ್, ರವಿಸುಬ್ರಹ್ಮಣ್ಯ, ಸತೀಶ್ ರೆಡ್ಡಿ, ರಾಮಲಿಂಗಾ ರೆಡ್ಡಿ ಮೊದಲ ಸುತ್ತಿನಿಂದಲೇ ಮುನ್ನಡೆ ಕಾಯ್ದುಕೊಂಡು ಬಂದರೆ,
ವಿಜಯನಗರ ಹಾಗೂ ಗೋವಿಂದರಾಜನಗರ ಕ್ಷೇತ್ರದ ಮತ ಎಣಿಕೆಯಲ್ಲಿ ಮತಗಳ ಮುನ್ನಡೆಯ ಏರಿಳಿತ ಇತ್ತು. ಆದರೆ, ಕೊನೆಗೆ ವಿಜಯನಗರದಲ್ಲಿ ಎಂ.ಕೃಷ್ಣಪ್ಪ ಗೆದ್ದರೆ, ಗೋವಿಂದರಾಜನಗರದಲ್ಲಿ ಅವರ ಪುತ್ರ ಪ್ರಿಯಕೃಷ್ಣ, ಮಾಜಿ ಸಚಿವ ವಿ.ಸೋಮಣ್ಣ ವಿರುದ್ಧ ಸೋಲು ಅನುಭವಿಸಿದರು.