Advertisement

ಎಣಿಕೆ ನಿಧಾನ-ಫ‌ಲಿತಾಂಶ ವಿಳಂಬ

03:07 AM May 14, 2019 | Sriram |

ಬೆಂಗಳೂರು: ಈ ಬಾರಿ ಲೋಕಸಭಾ ಚುನಾವಣೆ ಮತ ಎಣಿಕೆ ಸಂದರ್ಭ ಇವಿಎಂ-ವಿವಿಪ್ಯಾಟ್ ಮತಗಳ ತಾಳೆ ಹಾಕುವಲ್ಲಿ ಸುಪ್ರೀಂ ಕೋರ್ಟ್‌ ಆದೇಶ ಪಾಲಿಸಬೇಕಾಗಿರುವುದರಿಂದ ಮತ ಎಣಿಕೆ ನಿಧಾನವಾಗಲಿದ್ದು, ಫ‌ಲಿತಾಂಶವೂ ವಿಳಂಬವಾಗಲಿದೆ.

Advertisement

ಸುಪ್ರೀಂಕೋರ್ಟ್‌ ನಿರ್ದೇಶನದಂತೆ ಇವಿಎಂ- ವಿವಿಪ್ಯಾಟ್ ಮತಗಳನ್ನು ತಾಳೆ ಮಾಡಬೇಕಾಗಿದ್ದು, ಇದಕ್ಕೆ ಸಾಕಷ್ಟು ಸಮಯ ಹಿಡಿಯಲಿದೆ. ಪ್ರತಿ ವಿಧಾನ ಸಭಾ ಕ್ಷೇತ್ರದ 5 ಮತಗಟ್ಟೆಗಳ ವಿವಿಪ್ಯಾಟ್ ಚೀಟಿಗಳನ್ನು ಎಣಿಕೆ ಮಾಡಬೇಕು. ಒಂದು ವಿವಿಪ್ಯಾಟ್‌ನ ಚೀಟಿ ಎಣಿಕೆಗೆ ಕನಿಷ್ಠ 45 ನಿಮಿಷ ಬೇಕು.

ಎಲ್ಲ 5 ವಿವಿಪ್ಯಾಟ್ ಎಣಿಕೆಗೆ ಕನಿಷ್ಠ 3ರಿಂದ 4 ತಾಸು ಬೇಕು. ಇದು ಅಂತಿಮ ಫ‌ಲಿತಾಂಶ ವಿಳಂಬವಾಗಲು ಪ್ರಮುಖ ಕಾರಣ. ಇದರಿಂದ ಎಲ್ಲ 28 ಲೋಕಸಭಾ ಕ್ಷೇತ್ರಗಳ ಸ್ಪಷ್ಟ ಚಿತ್ರಣ ಹೊರಬೀಳುವಾಗ ಸಂಜೆ ಆಗಬಹುದು.

ಈ ಬಾರಿ ಇವಿಎಂ-ವಿವಿಪ್ಯಾಟ್ ಮತಗಳ ತಾಳೆ ಹಾಕಬೇಕಾಗಿರುವುದರಿಂದ ಮತ ಎಣಿಕೆಯ ಕೊನೆಯಲ್ಲಿ ಕೇಂದ್ರದಲ್ಲಿರುವ 14 ಟೇಬಲ್ಗಳ ಪೈಕಿ ಕೊನೆಯ ಟೇಬಲ್ನ ವಿವಿಪ್ಯಾಟ್‌ನಲ್ಲಿನ ಮುದ್ರಿತ ಚೀಟಿಗಳನ್ನು ತಾಳೆ ಮಾಡಲಾಗುತ್ತದೆ. ಇದು ಮುಗಿದ ಬಳಿಕವಷ್ಟೇ ಅಂತಿಮ ಫ‌ಲಿತಾಂಶ ಘೋಷಿಸಲಾಗುತ್ತದೆ. ಹೀಗಾಗಿ ಅಂತಿಮ ಫ‌ಲಿತಾಂಶ ಪ್ರಕಟ ರಾತ್ರಿ 8 ಗಂಟೆ ಆಗಬಹುದು ಎಂದು ಆಯೋಗದ ಅಧಿಕಾರಿಗಳು ಹೇಳುತ್ತಾರೆ.

ಈ ಹಿಂದೆ ಒಂದು ವಿಧಾನಸಭಾ ಕ್ಷೇತ್ರದ ಯಾವುದಾದರೂ ಒಂದು ಮತಗಟ್ಟೆಯ ಇವಿಎಂ-ವಿವಿಪ್ಯಾಟ್ ಮತಗಳನ್ನು ತಾಳೆ ಹಾಕಲಾಗುತ್ತಿತ್ತು. ಈಗ ಪ್ರತಿ ವಿಧಾನಸಭಾ ಕ್ಷೇತ್ರದ5 ಮತಗಟ್ಟೆಗಳಲ್ಲಿ ಇವಿಎಂ-ವಿವಿಪ್ಯಾಟ್ ಮತಗಳನ್ನು ತಾಳೆ ಹಾಕುವಂತೆ ಸುಪ್ರೀಂಕೋರ್ಟ್‌ ನಿರ್ದೇಶನ ನೀಡಿದೆ. ಜತೆಗೆ ಎಣಿಕೆ ಆರಂಭವಾದ ಬಳಿಕ ಕೆಲವು ತಾಂತ್ರಿಕ ಕಾರಣಗಳು ಎದುರಾಗುತ್ತವೆ. ಕೆಲವು ಕಡೆ ಅಭ್ಯರ್ಥಿಗಳು ಹೆಚ್ಚಿರುತ್ತಾರೆ. ಈ ಎಲ್ಲ ಅಂಶಗಳಿಂದಾಗಿ ಫ‌ಲಿತಾಂಶ ವಿಳಂಬವಾಗಲಿದೆ. ಈ ಹಿನ್ನೆಲೆಯಲ್ಲಿ ಸಿಬಂದಿಗೆಬೇಕಾದ ಅಗತ್ಯ ತರಬೇತಿ ಕೊಡಲಾಗಿದ್ದು, ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಚುನಾವಣ ಆಯೋಗದ ಅಧಿಕಾರಿಗಳು ಹೇಳುತ್ತಾರೆ.

Advertisement

1,120 ಮತಗಟ್ಟೆಗಳಲ್ಲಿ ‘ಮತ ತಾಳೆ’
ರಾಜ್ಯದ 28 ಲೋಕಸಭಾ ಕ್ಷೇತ್ರಗಳವ್ಯಾಪ್ತಿಯಲ್ಲಿ 224 ವಿಧಾನಸಭಾ ಕ್ಷೇತ್ರಗಳಿದ್ದು, 58,186 ಮತಗಟ್ಟೆಗಳಲ್ಲಿ ಮತದಾನ ನಡೆದಿದೆ. ಈಗ ಸುಪ್ರೀಂ ಆದೇಶದಂತೆ 224 ವಿಧಾನಸಭಾ ಕ್ಷೇತ್ರಗಳಲ್ಲಿ ತಲಾ 5ರಂತೆ;28 ಲೋಕಸಭಾ ಕ್ಷೇತ್ರಗಳಲ್ಲಿ ತಲಾ 40ರಂತೆ ಒಟ್ಟು 1,120 ಮತಗಟ್ಟೆಗಳಲ್ಲಿ ಇವಿಎಂ-ವಿವಿಪ್ಯಾಟ್ ಮತ ತಾಳೆ ಮಾಡಬೇಕಾಗಿದೆ. ಇದಕ್ಕಾಗಿ ಹೆಚ್ಚುವರಿ 5 ಸಾವಿರ ಸಿಬಂದಿ ಮತ್ತು 3 ತಾಸು ಹೆಚ್ಚುವರಿ ಸಮಯ ಬೇಕಾಗುತ್ತದೆ.

ಸುಪ್ರೀಂಕೋರ್ಟ್‌ ಆದೇಶದ ಅನುಸಾರ ಮತ ಎಣಿಕೆಗೆ ಸಾಕಷ್ಟು ಸಮಯ ಹಿಡಿಯಲಿದೆ. ಒಂದು ವಿವಿಪ್ಯಾಟ್‌ನ ಚೀಟಿಗಳ ಎಣಿಕೆಗೆ ಕನಿಷ್ಠ 45 ನಿಮಿಷ ಬೇಕು. ಹೀಗಾಗಿ ಈ ಬಾರಿ ಒಟ್ಟಾರೆ ಅಂತಿಮ ಫ‌ಲಿತಾಂಶ ಹೊರಬರಲು ರಾತ್ರಿ 8 ಗಂಟೆ ಆಗಬಹುದು.
-ಸಂಜೀವ್‌ ಕುಮಾರ್‌, ರಾಜ್ಯ ಮುಖ್ಯ ಚುನಾವಣಾಧಿಕಾರಿ

-ರಫೀಕ್‌ ಅಹ್ಮದ್‌

Advertisement

Udayavani is now on Telegram. Click here to join our channel and stay updated with the latest news.

Next