ಕೋಲ್ಕತ್ತಾ: ವರ್ಣರಂಜಿತ ಕ್ರೀಡಾಕೂಟ ಇಂಡಿಯನ್ ಪ್ರೀಮಿಯರ್ ಲೀಗ್ ನ ಹರಾಜು ಪ್ರಕ್ರಿಯೆಗೆ ವೇದಿಕೆ ಸಿದ್ದವಾಗಿದೆ. ಕೋಲ್ಕತ್ತಾದ ಖಾಸಗಿ ಹೋಟೆಲ್ ನಲ್ಲಿ 2020ರ ಐಪಿಎಲ್ ಗೆ ಇಂದು ಮಧ್ಯಾಹ್ನ 3.30ರಿಂದ ಹರಾಜು ನಡೆಯಲಿದೆ.
ಎಂಟು ಫ್ರಾಂಚೈಸಿಗಳಿಗೆ ಒಟ್ಟು 72 ಆಟಗಾರರ ಅಗತ್ಯವಿದ್ದು,338 ಆಟಗಾರರು ಹರಾಜು ಪಟ್ಟಿಯಲ್ಲಿದ್ದಾರೆ. ಒಟ್ಟು 190 ಭಾರತೀಯ ಆಟಗಾರರು ಹರಾಜಿನಲ್ಲಿದ್ದರೆ 148 ವಿದೇಶಿ ಆಟಗಾರರಿದ್ದಾರೆ.
ಮೊದಲ ಪಟ್ಟಿಯಲ್ಲಿರದ ವಿನಯ್ ಕುಮಾರ್, ಅಶೋಕ್ ದಿಂಡಾ, ಮ್ಯಾಥ್ಯೂ ವೇಡ್, ರಾಬಿನ್ ಬಿಸ್ಟ್, ಸಂಜಯ್ ಯಾದವ್ ಮತ್ತು ಜೇಕ್ ವದರರಾಲ್ಡ್ ಹರಾಜು ಪಟ್ಟಿಗೆ ಸೇರ್ಪಡೆಯಾಗಿದ್ದಾರೆ.
14 ವರ್ಷದ ಬಾಲಕ ಹರಾಜಿನ ಆಕರ್ಷಣೆ
ಹರಾಜಿನಲ್ಲಿರುವ ಅತ್ಯಂತ ಕಿರಿಯ ವಯಸ್ಸಿನ ಕ್ರಿಕೆಟಿಗರೆಂದರೆ ಆಫ್ಘಾನಿಸ್ತಾನ ತಂಡದ ಬಾಲಕ ನೂರ್ ಅಹ್ಮದ್. ಅವರಿಗೆ 14 ವರ್ಷ 350 ದಿನ, ಸ್ಪಿನ್ ಬೌಲರ್ ನೂರ್ ಅಹ್ಮದ್ 30 ಲಕ್ಷ ರೂ. ಮೂಲ ಬೆಲೆ ಹೊಂದಿದ್ದಾರೆ. ನೂರ್ ಅಹ್ಮದ್ 19 ವಯೋಮಿತಿ ಕ್ರಿಕೆಟ್‌ನಲ್ಲಿ ಭಾರತ ವಿರುದ್ಧ 9 ವಿಕೆಟ್ ಕಬಳಿಸಿ ಸುದ್ದಿಯಾಗಿದ್ದರು.
ಫ್ರಾಂಚೈಸಿಗಳು ಒಟ್ಟಾರೆಯಾಗಿ ಆಟಗಾರರನ್ನು ಖರೀದಿಸುವಂತಿಲ್ಲ. ಜಾಸ್ತಿ ಹಣ ಇದೆ ಎಂಬ ಕಾರಣಕ್ಕೆ ಜಾಸ್ತಿ ಆಟಗಾರರನ್ನು ಕೊಂಡು ಕೊಳ್ಳುವ ಹಾಗಿಲ್ಲ. ಇದಕ್ಕೂ ಮಿತಿ ಇದೆ. ತಂಡ ಉಳಿಸಿಕೊಂಡ ಹಾಗೂ ಬಿಡುಗಡೆ ಮಾಡಿರುವ ಆಟಗಾರರಸಂಖ್ಯೆಯ ಲೆಕ್ಕಾಚಾರದಲ್ಲಿ ಇನ್ನು ಅಗತ್ಯವುಳ್ಳ ಆಟಗಾರರ ಸಂಖ್ಯೆಯನ್ನು ನಿಗದಿಗೊಳಿಸಲಾಗಿದೆ. ಅದರಲ್ಲೂ ಇಂತಿಷ್ಟೇ ಮಂದಿ ಭಾರತೀಯರು, ಇಂತಿಷ್ಟೇ ವಿದೇಶಿ ಕ್ರಿಕೆಟಿಗರು ಎಂಬ ನಿರ್ಬಂಧವೂ ಇದೆ. ಹೀಗಾಗಿ ಹರಾಜಿನ ವೇಳೆ ಫ್ರಾಂಚೈಸಿಗಳು ಭಾರೀ ತಲೆ ಖರ್ಚು ಮಾಡಬೇಕಿದೆ. ಇಲ್ಲಿ ಅತ್ಯಧಿಕ 42.70 ಕೋ.ರೂ. ಹೊಂದಿರುವ ಪಂಜಾಬ್‌ಗ ಸ್ಟಾರ್ ಆಟಗಾರರ ಖರೀದಿಗೆ ಉತ್ತಮ ಅವಕಾಶವಿದೆ. ಪಂಜಾಬ್‌ಗ 9 ಆಟಗಾರರ ಅಗತ್ಯವಿದ್ದು (5 ಭಾರತೀಯರು, 4 ವಿದೇಶಿಗರು), ಈ ಮೊತ್ತದಲ್ಲಿ ಟಿ20 ಸ್ಪೆಷಲಿಸ್ಟ್‌ಗಳಿಗೆ ಬಲೆ ಬೀಸಬಹುದು.
ಆರ್‌ಸಿಬಿಗೆ ಸ್ಟಾರ್ ಆಟಗಾರರ ಅಗತ್ಯವಿದೆ. ಹೊಂದಿರುವ ಮೊತ್ತ 27.90 ಕೋ.ರೂ. ಇದರಲ್ಲಿ12 ಆಟಗಾರರನ್ನು ಖರೀದಿಸಬೇಕು. 2-3 ಮಂದಿ ಸ್ಟಾರ್ ಆಟಗಾರರಿಗೆ ಬಲೆ ಬೀಸಿದರೆ ಆಗ ಉಳಿಯುವ ಮೊತ್ತ ಅತ್ಯಲ್ಪ. ಹೀಗಾಗಿ ಯುವ ಆಟಗಾರರನ್ನೇ ಆರ್‌ಸಿಬಿ ನೆಚ್ಚಿಕೊಳ್ಳಬೇಕಾಗುತ್ತದೆ.