Advertisement

ಸಿ, ಡಿ ಗ್ರೂಪ್‌ ನೌಕರರ ವರ್ಗಾವಣೆಗೆ ಕೌನ್ಸೆಲಿಂಗ್‌

11:35 AM Jun 08, 2019 | Sriram |

ಬೆಂಗಳೂರು: ರಾಜ್ಯ ಸರ್ಕಾರಿ ಗ್ರೂಪ್‌ “ಸಿ’ ಮತ್ತು “ಡಿ’ ದರ್ಜೆಯ ನೌಕರರ
ವರ್ಗಾವಣೆಯಲ್ಲಿ ಪಾರದರ್ಶಕತೆ ತರಲು ಕೌನ್ಸಿಲಿಂಗ್‌ ವ್ಯವಸ್ಥೆ ಜಾರಿಗೊಳಿಸಲು
ರಾಜ್ಯ ಸಚಿವ ಸಂಪುಟ ತೀರ್ಮಾನಿಸಿದೆ.

Advertisement

ಸಚಿವ ಸಂಪುಟ ಸಭೆ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಕೃಷ್ಣ ಬೈರೇಗೌಡ, ಸಿ ಮತ್ತು ಡಿ ಗ್ರೂಪ್‌ ನೌಕರರು ವರ್ಗಾವಣೆ ಸಮಯದಲ್ಲಿ ಅನೇಕ ಅನಾನುಕೂಲತೆ ಎದುರಿಸುತ್ತಿದ್ದಾರೆ. ಇದನ್ನು ನಿವಾರಿಸಲು ಕೌನ್ಸೆಲಿಂಗ್‌ ಮೂಲಕ ವರ್ಗಾವಣೆ ಪದಟಛಿತಿ ಜಾರಿಗೊಳಿಸಲು ತೀರ್ಮಾನಿಸಲಾಗಿದೆ.

ಆ ಸಂಬಂಧ ಕರಡು ಕಾನೂನಿಗೆ ಸಂಪುಟ ಒಪ್ಪಿಗೆ ನೀಡಿದ್ದು, ಮುಂದಿನ ದಿನಗಳಲ್ಲಿ
ವಿಧಾನಮಂಡಲ ಅಧಿವೇಶನದಲ್ಲಿ ವಿಧೇಯಕ ಮಂಡಿಸಿ ಒಪ್ಪಿಗೆ ಪಡೆದು ಕಾನೂನು ರೂಪಿಸಲಾಗುವುದು ಎಂದು ಹೇಳಿದರು.

ಇದರಿಂದಾಗಿ ರಾಜ್ಯದಲ್ಲಿ ಜಿಲ್ಲಾವಾರು ಹಾಲಿ ಖಾಲಿ ಇರುವ ಹುದ್ದೆಗಳ ಸಮಾನ
ಹಂಚಿಕೆಗೆ ಅನುಕೂಲವಾಗುತ್ತದೆ.ವರ್ಗಾವಣೆ ಸಮಯದಲ್ಲಿ ವೃಂದವಾರು ಹಂಚಿಕೆ, ಕನಿಷ್ಠ ಸೇವಾವಧಿ (ಸಿ ಗ್ರೂಪ್‌ಗೆ4 ವರ್ಷ, ಡಿ ಗ್ರೂಪ್‌ಗೆ 7 ವರ್ಷ) ಪರಿಗಣಿಸಲಾಗುವುದು ಎಂದು ತಿಳಿಸಿದರು.

ಸಚಿವಾಲಯದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಿ ಮತ್ತು ಡಿ ಗ್ರೂಪ್‌ ನೌಕರರಿಗೆ ಇದು ಅನ್ವಯವಾಗುವುದಿಲ್ಲ.ಅದಕ್ಕೆ ಪ್ರತ್ಯೇಕ ನಿಯಮಾವಳಿ ಇರುವುದರಿಂದ ಇಲಾಖೆಗಳಿಗೆ ಮಾತ್ರ ಸೀಮಿತ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.ಕೊಪ್ಪಳ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಆವರಣದಲ್ಲಿ ಹೊಸದಾಗಿ ನಿರ್ಮಿಸುತ್ತಿರುವ 450 ಹಾಸಿಗೆ
ಸಾಮರ್ಥ್ಯದ ಆಸ್ಪತ್ರೆ ಕಟ್ಟಡದ ಆವರಣದಲ್ಲಿ ಹೆಚ್ಚುವರಿ ಕಾಮಗಾರಿಗಳನ್ನು ಒಳಗೊಂಡಂತೆ 104 ಕೋಟಿ ರೂ.ಗಳ ಕಾಮಗಾರಿ ಕೈಗೊಳ್ಳಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ.

Advertisement

ಉನ್ನತ ಶಿಕ್ಷಣ ಇಲಾಖೆಯಲ್ಲಿ ಗುತ್ತಿಗೆ ಆಧಾರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ
ಉಪನ್ಯಾಸಕರನ್ನು ನ್ಯಾಯಾಲಯದ ಆದೇಶದ ಮೇರೆಗೆ ಖಾಯಂಗೊಳಿಸಲಾಗಿದ್ದು, ಇವರಿಗೆ ಸೇವಾ ನಿವೃತ್ತಿ ನಂತರ ಪಿಂಚಣಿ ನೀಡಲು ಸಂಪುಟ ಒಪ್ಪಿಗೆ ನೀಡಿದೆ. ಇದರಿಂದ ಸುಮಾರು 400 ಉಪನ್ಯಾಸಕರಿಗೆ ಸೌಲಭ್ಯ ಸಿಗಲಿದ್ದು, ಸರ್ಕಾರಕ್ಕೆ 45 ಕೋಟಿ ರೂ. ವರೆಗೆ ಹೊರೆಯಾಗಲಿದೆ ಎಂದು ಹೇಳಿದರು.

ಕೆರೆಗಳಿಗೆ ತ್ಯಾಜ್ಯ ನೀರು
ಕೋಲಾರ , ಚಿಕ್ಕಬಳ್ಳಾಪುರ ಜಿಲ್ಲೆಗಳ 126 ಕೆರೆಗಳಿಗೆ ಸಂಸ್ಕರಿಸಿದ ತ್ಯಾಜ್ಯನೀರು ಹರಿಸಿ ತುಂಬಿಸಲು ಈ ಹಿಂದೆ 1,280 ಕೋಟಿ ರೂ.ಗಳ ಯೋಜನೆಗೆ ಅನುಮೋದನೆ ನೀಡಿತ್ತು. ಇದೀಗ ಎರಡನೇ ಹಂತದಲ್ಲಿ ಇನ್ನೂ 200 ರಿಂದ 250 ಕೆರೆಗಳಿಗೆ ನೀರು ಹರಿಸಿ ತುಂಬಿಸಲು 455 ಕೋಟಿ ರೂ.ಗಳ ಮೊತ್ತದ ಕಾಮಗಾರಿಗಳಿಗೆ ಆಡಳಿತಾತ್ಮಕ ಅನುಮೋದನೆ ನೀಡಿದೆ ಎಂದು ಕೃಷ್ಣ ಬೈರೇಗೌಡ ತಿಳಿಸಿದರು.

ಕೆರೆಗಳಿಗೆ ಹರಿಸುತ್ತಿರುವ ಸಂಸ್ಕರಿತ ತ್ಯಾಜ್ಯ ನೀರು ಕೇವಲ ಅಂತರ್ಜಲ ವೃದ್ಧಿ ಉದ್ದೇಶವಷ್ಟೇ. ಕುಡಿಯುವ ಅಥವಾ ಕೃಷಿ ಉದ್ದೇಶಕ್ಕೆ ಬಳಕೆಯಾಗುತ್ತಿಲ್ಲ. ಈಗಾಗಲೇ ಕೆರೆಗಳಿಗೆ ತುಂಬಿಸಿರುವ ನೀರಿನಿಂದ ಬೇರೆ ರೀತಿಯ ಪರಿಣಾಮಗಳು ಆಗಲಿವೆಯಾ ಎಂಬ ಬಗ್ಗೆ ಅಧ್ಯಯನ ನಡೆಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.

ಅನ್ನಭಾಗ್ಯ ಅಕ್ಕಿ ವಿತರಣೆ: ಯಥಾಸ್ಥಿತಿ ಮುಂದುವರಿಕೆ
ಅನ್ನಭಾಗ್ಯ ಯೋಜನೆಯಡಿ ಪ್ರಸ್ತುತ ನೀಡುತ್ತಿರುವ ಅಕ್ಕಿ ಪ್ರಮಾಣ ತಲಾ ಹತ್ತು ಕೆಜಿಗೆ ಏರಿಕೆ ಮಾಡುವ ಬಗ್ಗೆ ಸಂಪುಟದಲ್ಲಿ ಚರ್ಚೆಯಾಯಿತಾದರೂ ಯಾವುದೇ ತೀರ್ಮಾನ ಕೈಗೊಂಡಿಲ್ಲ ಎಂದು ಹೇಳಲಾಗಿದೆ.

ಈ ಹಿಂದೆಯೇ ಸಮನ್ವಯ ಸಮಿತಿ ಸಭೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಅನ್ನಭಾಗ್ಯ ಯೋಜನೆಯಡಿ ನೀಡುತ್ತಿರುವ ತಲಾ 7 ಕೆಜಿ ಅಕ್ಕಿ ಪ್ರಮಾಣ 10 ಕೆಜಿಗೆ ಏರಿಸಬೇಕೆಂದು ಪ್ರಸ್ತಾಪ ಮಾಡಿದ್ದರು. ಆ ಬಗ್ಗೆ ಸಂಪುಟ ಸಭೆಯಲ್ಲಿ ಚರ್ಚೆಯಾಯಿತು. ಆದರೆ, ಈಗ ನೀಡುತ್ತಿರುವ ಅಕ್ಕಿಯ ಪ್ರಮಾಣ 5 ಕೆಜಿಗೆ ಇಳಿಸಬೇಕು ಎಂಬ ಅಭಿಪ್ರಾಯವೂ ವ್ಯಕ್ತವಾಯಿತು. ಆದರೆ, ಅಕ್ಕಿ ಪ್ರಮಾಣ ಇಳಿಸಲು ಸಚಿವ ಜಮೀರ್‌ ಅಹಮದ್‌ ವಿರೋಧ ವ್ಯಕ್ತಪಡಿಸಿ, ಯಥಾಸ್ಥಿತಿ ಮುಂದುವರಿಸಿ ಎಂದು ಹೇಳಿದರು.

ಹೀಗಾಗಿ, ಸದ್ಯಕ್ಕೆ ಯಥಾಸ್ಥಿತಿ ಮುಂದುವರಿಸಲುನಿರ್ಧರಿಸಲಾಯಿತು ಎಂದು ಹೇಳಲಾಗಿದೆ ಆದರೆ ಸಂಪುಟದಲ್ಲಿ ಚರ್ಚೆ ಆಗಲಿಲ್ಲ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.

ಒಪ್ಪಿಗೆ: ಈ ಮಧ್ಯೆ, ಮೈಸೂರು ವೈದ್ಯಕೀಯ ಕಾಲೇಜು ಆವರಣದಲ್ಲಿ ಗ್ರಂಥಾಲಯ , ಉಪನ್ಯಾಸಕರ ಕೊಠಡಿ ಹಾಗೂ ಹಾಸ್ಟೆಲ್‌ ನಿರ್ಮಾಣಕ್ಕೆ 120 ಕೋಟಿ ರೂ.
ಯೋಜನೆಗೆ ಸಂಪುಟ ಒಪ್ಪಿಗೆ ನೀಡಿದೆ.

ಜಿಂದಾಲ್‌: ಕನ್ನಡಿಗರಿಗೆ ಉದ್ಯೋಗ ಖಾತರಿಗೆ ಸಲಹೆ
ಬೆಂಗಳೂರು: ಜಿಂದಾಲ್‌ ಸಂಸ್ಥೆಗೆ 3,667 ಎಕರೆ ಜಮೀನು ಪರಭಾರೆ ವಿಚಾರ ಸಂಪುಟ ಸಭೆಯಲ್ಲೂ ಪ್ರಸ್ತಾಪವಾಗಿ, ಕನ್ನಡಿಗರು ಹಾಗೂ ಸ್ಥಳೀಯರಿಗೆ ಅಲ್ಲಿ ಉದ್ಯೋಗ ನೀಡುತ್ತಿರುವುದು ಖಾತರಿ ಪಡಿಸಿಕೊಳ್ಳುವ ಬಗ್ಗೆ ಚರ್ಚೆಯಾಗಿದೆ.

2006ರಲ್ಲೇ ಲೀಸ್‌ ಕಂ ಸೇಲ್‌ ಆಧಾರದಲ್ಲಿ ಒಪ್ಪಂದ ಆಗಿದ್ದರೂ ಎಚ್‌.ಕೆ.ಪಾಟೀಲ್‌ ಸೇರಿ ಕೆಲವು ಕಾಂಗ್ರೆಸ್‌ನ ನಾಯಕರೇ ಅಪಸ್ವರ ಎತ್ತಿರುವುದು ಸರ್ಕಾರಕ್ಕೂ ಮುಜುಗರ ಉಂಟು ಮಾಡಿದೆ. ಈ ಬಗ್ಗೆ ಸ್ಪಷ್ಟನೆ ಇರಬೇಕಿತ್ತು ಎಂದು ಕೆಲವು ಸಚಿವರು ಅಭಿಪ್ರಾಯ
ವ್ಯಕ್ತಪಡಿಸಿದರು ಎಂದು ಹೇಳಲಾಗಿದೆ.

ಆದರೆ, ಅಂತಿಮವಾಗಿ ಅಲ್ಲಿ ಕನ್ನಡಿಗರು ಹಾಗೂ ಸ್ಥಳೀಯರಿಗೆ ಉದ್ಯೋಗ ದೊರಕಿರುವುದು ಖಾತರಿಪಡಿಸಿಕೊಂಡು ಮುಂದುವರಿಯಬೇಕೆಂಬ ಅಭಿಪ್ರಾಯ
ಕೇಳಿಬಂತು. ಒಪ್ಪಂದದ ಪ್ರಕಾರ ನೀಡಲೇಬೇಕಾಗುತ್ತದೆ ಎಂದು ಕೆಲವು ಸಚಿವರು ತಿಳಿಸಿದರು ಎನ್ನಲಾಗಿದೆ.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಕೃಷ್ಣ ಬೈರೇಗೌಡ, ಜಿಂದಾಲ್‌ಗೆ ಜಮೀನು ಪರಭಾರೆ ವಿಚಾರದ ಬಗ್ಗೆ ಸಂಪುಟದಲ್ಲಿ ಹೆಚ್ಚು ಚರ್ಚೆಯಾಗಲಿಲ್ಲ. ಹಿಂದೆಯೇ ಆಗಿರುವ ತೀರ್ಮಾನ, ಒಪ್ಪಂದ ಹೀಗಾಗಿ, ಪಾಲಿಸ ಬೇಕಾಗುತ್ತದೆ ಎಂದು ಹೇಳಿದರು.

ಜಮೀನಿನಲ್ಲಿ ಕಬ್ಬಿಣದ ಅದಿರು ಇದೆ ಎಂಬ ಬಗ್ಗೆ ವರದಿ ಸಹ ನೀಡಲಾಗಿದೆ. ಅದನ್ನು ಮುಚ್ಚಿಡಲಾಗಿದೆ ಎಂಬ ಆರೋಪ ಗಳಿವೆ ಎಂಬ ಪ್ರಶ್ನೆಗೆ, ಜಿಂದಾಲ್‌ ಸಂಸ್ಥೆಗೆ ಕೇವಲ ಜಮೀನು ನೀಡುವುದು ಮಾತ್ರ ಒಪ್ಪಂದ. ಆದರೆ, ಅಲ್ಲಿ ನಿಕ್ಷೇಪ ಇದ್ದರೆ ಅದು ಸರ್ಕಾರಕ್ಕೆ ಸೇರುತ್ತದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next