Advertisement
ಶುಕ್ರವಾರ ವಿಧಾನ ಪರಿಷತ್ತಿನಲ್ಲಿ ವಿಪಕ್ಷ ನಾಯಕ ಎಸ್.ಆರ್.ಪಾಟೀಲ್ ಹಕ್ಕುಚ್ಯುತಿ ಪ್ರಸ್ತಾವ ಮಂಡಿಸಿ, ಸರಕಾರದ ಕಾರ್ಯವೈಖರಿಯನ್ನು ಪ್ರಶ್ನಿಸುವ ಮತ್ತು ಆ ಬಗ್ಗೆ ರಾಜ್ಯದ ಜನರ ಗಮನ ಸೆಳೆಯಲು ವಿಪಕ್ಷಗಳು ಕೆಲಸ ಮಾಡಬೇಕಾಗುತ್ತದೆ. ಗುರುವಾರ ಟ್ರ್ಯಾಕ್ಟರ್ ನೊಂದಿಗೆ ಬಂದ ನಮ್ಮನ್ನು ಸುವರ್ಣಸೌಧ ಒಳಬಿಡಲು ಇಬ್ಬರು ಹಿರಿಯ ಪೊಲೀಸ್ ಅಧಿಕಾರಿಗಳಾದ ತ್ಯಾಗರಾಜನ್ ಮತ್ತು ಸತೀಶ ಕುಮಾರ್ ಉದ್ಧಟತನ ಪ್ರದರ್ಶಿಸಿದರು. ಇದ ರಿಂದ 3 ಗಂಟೆ ವಿಳಂಬವಾಗಿ ನಾವು ಕಲಾಪಕ್ಕೆ ಬರಬೇಕಾಯಿತು ಎಂದು ಆಪಾದಿಸಿದರು.
Related Articles
ಹಕ್ಕುಚ್ಯುತಿ ಮಂಡನೆ ವೇಳೆ ವಿಪಕ್ಷ ನಾಯಕ ಎಸ್.ಆರ್.ಪಾಟೀಲ್ ಅವರು, ಟ್ರ್ಯಾಕ್ಟರ್ ಈ ದೇಶದ ರೈತರ ವಾಹನ. ಇದನ್ನು ಒಳಗೆ ಬಿಡುವುದಿಲ್ಲ ಎಂದರೆ ಹೇಗೆ ಎಂದು ಪ್ರಶ್ನಿಸಿದರು. ಇದಕ್ಕೆ ಸಚಿವ ನಾರಾಯಣ ಗೌಡ ನೀವು ದಿನಾಲೂ ಟ್ರ್ಯಾಕ್ಟರ್ ನಲ್ಲೇ ಬರಬೇಕಾಗಿತ್ತು ಎಂದು ವ್ಯಂಗ್ಯವಾಗಿ ಪ್ರಶ್ನಿಸಿದಾಗ ಕಾಂಗ್ರೆಸ್ ಸದಸ್ಯರು ಕೆಂಡಾಮಂಡಲರಾಗಿ ಸಚಿವರ ವಿರುದ್ಧ ಹರಿಹಾಯ್ದರು. ಹಕ್ಕುಚ್ಯುತಿ ಮಂಡಿಸುವಾಗ ಹುಚ್ಚರಂತೆ ಮಾತನಾಡಿದ ನೀವು ಸಚಿವರಾಗಲು ಯೋಗ್ಯರಲ್ಲ. ರಾಜೀನಾಮೆ ಕೊಟ್ಟು ಹೋಗಿ. ನೀವೊಬ್ಬ ಅಯೋಗ್ಯಮಂತ್ರಿ. ನಿಮಗೆ ಸೌಜನ್ಯವೇ ಇಲ್ಲ ಎಂದು ಕೂಗಾಡಿದರು. ಈ ವೇಳೆ ಆಡಳಿತ ಪಕ್ಷ ಮತ್ತು ವಿಪಕ್ಷ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು.
Advertisement
ಅಂತಿಮವಾಗಿ ಸಭಾಪತಿ ಮಧ್ಯಪ್ರವೇಶಿಸಿ ಸಚಿವ ನಾರಾಯಣ ಗೌಡ ಅವರಿಗೆ ಈ ರೀತಿ ಸೌಜನ್ಯ ರಹಿತ ವರ್ತನೆ ಕೊನೆಯಾಗಲಿ, ಇದು ಇನ್ನೊಮ್ಮೆ ಪುನರಾವರ್ತನೆಯಾಗದಂತೆ ನೋಡಿಕೊಳ್ಳಿ ಎಂದು ಎಚ್ಚರಿಸಿದರು.ಘಟನೆ ಬಗ್ಗೆ ನನಗೂ ಖೇದವಿದೆ. ನಾನು ಮೊಬೈಲ್ ಕರೆ ಮಾಡಿ ವಿಪಕ್ಷ ನಾಯಕರನ್ನು ಒಳಗೆ ಬಿಡಬೇಕು ಎಂದು ಹೇಳಿದ ಮೇಲೂ ಅವರು ಬಿಟ್ಟಿಲ್ಲ. ಹೀಗಾಗಿ ಈ ವಿಚಾರವನ್ನು ಹಕ್ಕುಚ್ಯುತಿ ಸಮಿತಿಗೆ ಮುಂದಿನ ಕ್ರಮಕ್ಕಾಗಿ ವಹಿಸಲಾಗುವುದು. ಮೊದಲ ಸಭೆಯಲ್ಲೇ ಈ ಕುರಿತು ನಿರ್ಣಯಿಸಿ ಎಂದು ಸಭಾಪತಿ ರೂಲಿಂಗ್ ನೀಡಿದರು.