Advertisement

ಪರಿಷತ್‌ ಸದಸ್ಯ ಸ್ಥಾನಕ್ಕೆ ಇಂದು ಮತದಾನ

11:15 PM Feb 16, 2020 | Team Udayavani |

ಬೆಂಗಳೂರು: ವಿಧಾನಸಭೆ ಸದಸ್ಯರಿಂದ ವಿಧಾನ ಪರಿಷತ್‌ಗೆ ಆಯ್ಕೆಯಾಗುವ ಒಂದು ಸ್ಥಾನದ ಉಪಚುನಾವಣೆಗೆ ಸೋಮವಾರ ಮತದಾನ ನಡೆಯಲಿದ್ದು, ವಿಧಾನ ಪರಿಷತ್‌ ಸಚಿವಾಲಯ ಅಗತ್ಯ ಸಿದ್ಧತೆ ಮಾಡಿಕೊಂಡಿದೆ. ಬಿಜೆಪಿಯಿಂದ ಸ್ಪರ್ಧಿಸಿರುವ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರ ಗೆಲುವು ಬಹುತೇಕ ಖಚಿತ ಎನ್ನಲಾಗಿದೆ. ಪಕ್ಷೇತರ ಅಭ್ಯರ್ಥಿಯಾಗಿ ಕಣದಲ್ಲಿರುವ ಅನಿಲ್‌ ಕುಮಾರ್‌ ಸ್ಪರ್ಧೆಯಿಂದ ಹಿಂದೆ ಸರಿಯುತ್ತಿರುವುದಾಗಿ ಹೇಳಿದ್ದರು.

Advertisement

ಅಲ್ಲದೇ ದೂರವಾಣಿ ಮೂಲಕ ಮಾತನಾಡಿದ ಅನಿಲ್‌ ಕುಮಾರ್‌ ಸ್ಪರ್ಧೆಯಿಂದ ಹಿಂದೆ ಸರಿದಿದ್ದು, ಶುಭವಾಗಲಿ ಎಂಬುದಾಗಿ ಹಾರೈಸಿದ್ದರು ಎಂದು ಲಕ್ಷ್ಮಣ ಸವದಿ ಶನಿವಾರ ಹೇಳಿಕೆ ನೀಡಿದ್ದರು. ಹಾಗಾಗಿ, ಲಕ್ಷ್ಮಣ ಸವದಿ ಅವರ ಗೆಲುವಿನ ಹಾದಿ ಸುಗಮವಾದಂತಾಗಿದೆ.ಸೋಮವಾರ ಬೆಳಗ್ಗೆ 9ರಿಂದ ಸಂಜೆ 4ರವರೆಗೆ ಮತದಾನ ಪ್ರಕ್ರಿಯೆ ನಡೆಯಲಿದೆ. ವಿಧಾನಸೌಧದ ಕೊಠಡಿ ಸಂಖ್ಯೆ 106ರ ಸಮಿತಿ ಕೊಠಡಿಯಲ್ಲಿ ಮತದಾನ ನಡೆಯಲಿದೆ.

ಗೌಪ್ಯ ಮತದಾನವಾಗಿದ್ದು, ಶಾಸಕರಷ್ಟೇ ಮತದಾನ ಮಾಡಲಿದ್ದಾರೆ. ಮತಪತ್ರಗಳು, ಗೌಪ್ಯ ಮತದಾನಕ್ಕೆ ಸೂಕ್ತ ವ್ಯವಸ್ಥೆ ಸೇರಿ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಚುನಾವಣಾ ಕಾರ್ಯಕ್ಕೆ 25ಕ್ಕೂ ಹೆಚ್ಚು ಸಿಬ್ಬಂದಿ ನಿಯೋಜನೆಗೊಂಡಿದ್ದಾರೆ. ಮತದಾನ ನಡೆಯುವ ಕೊಠಡಿಯಲ್ಲಿ 15 ಸಿಬ್ಬಂದಿ ಕಾರ್ಯ ನಿರ್ವಹಿಸಲಿದ್ದಾರೆ. ಸಂಜೆ 5 ಗಂಟೆಗೆ ಮತ ಎಣಿಕೆ ಪ್ರಕ್ರಿಯೆ ನಡೆಯಲಿದೆ ಎಂದು ವಿಧಾನಸಭೆ ಸಚಿವಾಲಯದ ಮೂಲಗಳು ತಿಳಿಸಿವೆ.

ಪಕ್ಷಗಳ ಬಲಾಬಲ: ಬಿಜೆಪಿ- 116. ಕಾಂಗ್ರೆಸ್‌- 68. ಜೆಡಿಎಸ್‌- 34. ಬಿಎಸ್‌ಪಿ- 1. ಪಕ್ಷೇತರ- 2. ಸ್ಪೀಕರ್‌- 1. ನಾಮ ನಿರ್ದೇಶಿತ ಸದಸ್ಯರು- 1. ಖಾಲಿ ಇರುವ ಸ್ಥಾನ- 2.

Advertisement

Udayavani is now on Telegram. Click here to join our channel and stay updated with the latest news.

Next