Advertisement

ಪರಿಷತ್‌ ಚುನಾವಣೆ: ಮುಹೂರ್ತ ನಿಗದಿ: ಅಖಾಡಕ್ಕಿಳಿದ ಅಕಾಂಕ್ಷಿಗಳು

01:09 AM Nov 10, 2021 | Team Udayavani |

ಮಂಗಳೂರು: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳನ್ನು ಒಳಗೊಂಡ ಸ್ಥಳೀಯಾಡಳಿತ ಸಂಸ್ಥೆ ಚುನಾವಣಾ ಕ್ಷೇತ್ರದಿಂದ ವಿಧಾನಪರಿಷತ್‌ನಎರಡು ಸ್ಥಾನಗಳಿಗೆ ಡಿಸೆಂಬರ್‌ 10ರಂದು ಚುನಾವಣೆ ನಿಗದಿಯಾಗಿರುವ ಹಿನ್ನಲೆಯಲ್ಲಿ ಉಭಯ ಜಿಲ್ಲೆಗಳಲ್ಲಿ ರಾಜಕೀಯ ಚಟುವಟಿಕೆ ಗರಿಗೆದರಿವೆ.

Advertisement

ಕಾಂಗ್ರೆಸ್‌ ಆಕಾಂಕ್ಷಿಗಳಿಂದ ಅರ್ಜಿಗಳನ್ನು ಈಗಾಗಲೇ ಸ್ವೀಕರಿಸಿದೆ. ಬಿಜೆಪಿಯು ಅಭ್ಯರ್ಥಿ ನಿರ್ಧಾರದ ಬಗ್ಗೆ ಪಕ್ಷದ ಕಾರ್ಯಕರ್ತರು ಹಾಗೂ ವಿವಿಧ ಘಟಕಗಳ ಮುಖಂಡರಿಂದ ಅಭಿಪ್ರಾಯ ಸಂಗ್ರಹ ಆರಂಭಿಸಿದ್ದು ಈಗಾಗಲೇ ರಾಜ್ಯ ಬಿಜೆಪಿಯಿಂದ ಇಬ್ಬರು ವೀಕ್ಷಕರು ಆಗಮಿಸಿ ಮಂಗಳೂರಿನಲ್ಲಿ ಉಭಯ ಜಿಲ್ಲೆಗಳ ಪಕ್ಷದ ಪ್ರಮುಖರ ಜತೆ ಸಭೆ ನಡೆಸಿದ್ದಾರೆ.

ಪರಿಷತ್‌ನ 25 ಸ್ಥಾನಗಳು ಜ. 5ಕ್ಕೆ ತೆರವಾಗ ಲಿವೆ. ಸಚಿವ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಪ್ರತಾಪಚಂದ್ರ ಶೆಟ್ಟಿ ಅವರು 2016ರ ಜನವರಿ 6ರಂದು ನಡೆದಿದ್ದ ಚುನಾವಣೆಯಲ್ಲಿ ಆಯ್ಕೆಯಾಗಿದ್ದರು.

ಕಾಂಗ್ರೆಸ್‌ನಲ್ಲಿ 11 ಆಕಾಂಕ್ಷಿಗಳು
ಕಾಂಗ್ರೆಸ್‌ನಲ್ಲಿ ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಟ್ಟು 11 ಸ್ಪರ್ಧಾಕಾಂಕ್ಷಿಗಳಿದ್ದಾರೆ. ದ.ಕ.ದಿಂದ ಕೆಪಿಸಿಸಿ ಮಾಜಿ ಉಪಾಧ್ಯಕ್ಷ ಮಂಜುನಾಥ ಭಂಡಾರಿ, ಮಾಜಿ ಮೇಯರ್‌ ಶಶಿಧರ್‌ ಹೆಗ್ಡೆ, ಎಐಸಿಸಿ ಕಾರ್ಯದರ್ಶಿಗಳಾದ ಪಿ.ವಿ. ಮೋಹನ್‌, ಐವನ್‌ ಡಿ’ಸೋಜಾ, ಕಾವು ಹೇಮನಾಥ ಶೆಟ್ಟಿ, ವಿವೇಕರಾಜ್‌ ಪೂಜಾರಿ ಸೇರಿದಂತೆ 8 ಮಂದಿ ಹಾಗೂ ಉಡುಪಿಯಿಂದ ಜಿ.ಪಂ. ಮಾಜಿ ಸದಸ್ಯ ಮಂಜುನಾಥ ಪೂಜಾರಿ, ಮಹಿಳಾ ಕಾಂಗ್ರೆಸ್‌ ಮಾಜಿ ಜಿಲ್ಲಾಧ್ಯಕ್ಷೆ ಶ್ಯಾಮಲಾ ಭಂಡಾರಿ, ಯೋಗೀಶ್‌ ಶೆಟ್ಟಿ ಅರ್ಜಿ ಸಲ್ಲಿಸಿದ್ದಾರೆ.

ಇದನ್ನೂ ಓದಿ:ರೈಲ್ವೆ ನಿಲ್ದಾಣದಲ್ಲಿ ಚಹಾ ಸವಿದ ರೈಲ್ವೆ ಸಚಿವ ವೈಷ್ಣವ್‌

Advertisement

ಕೋಟ ಹೆಸರು ಮುಂಚೂಣಿಯಲ್ಲಿ
ಬಿಜೆಪಿಯಿಂದ ಪ್ರಸ್ತುತ ವಿಧಾನಪರಿಷತ್‌ ಸದಸ್ಯರಾಗಿರುವ ಸಚಿವ ಹಾಗೂ ವಿಧಾನ ಪರಿಷತ್‌ ಸಭಾನಾಯಕ ಕೋಟ ಶ್ರೀನಿವಾಸ ಪೂಜಾರಿ ಅವರ ಹೆಸರು ಮುಂಚೂಣಿಯಲಿದೆ.

ತಲಾ ಒಂದು ಅಭ್ಯರ್ಥಿಯ ಸಾಧ್ಯತೆ
ದ.ಕ.-ಉಡುಪಿ ಸ್ಥಳೀಯಾಡಳಿತ ಕ್ಷೇತ್ರ ಎರಡು ಸ್ಥಾನಗಳನ್ನು ಹೊಂದಿದೆ. ಪ್ರಾಶಸ್ತ್ಯ ಮತಗಳ ಆಧಾರದಲ್ಲಿ ಜಯ ನಿರ್ಧಾರವಾಗಲಿದೆ. 6,500ಕ್ಕೂ ಅಧಿಕ ಮತದಾರರನ್ನು ಹೊಂದಿದೆ. ಆದರೆ ಜಿ. ಪಂ., ತಾ.ಪಂ.ಗಳಿಗೆ ಚುನಾವಣೆ ನಡೆಯದಿರುವ ಹಿನ್ನೆಲೆಯಲ್ಲಿ ಸುಮಾರು 300 ಮತ ಕಡಿಮಯಾಗಲಿವೆ. ಪ್ರಸ್ತುತ ಲೆಕ್ಕಾಚಾರಗಳ ಪ್ರಕಾರ ಬಿಜೆಪಿ,ಕಾಂಗ್ರೆಸ್‌ಗೆ ತಲಾ ಒಂದೊಂದು ಸ್ಥಾನಗಳನ್ನು ಗೆಲ್ಲುವ ಅವಕಾಶವಿದೆ.

ವಿಧಾನಪರಿಷತ್‌ ಚುನಾವಣೆಗೆ ಸಿದ್ಧತೆ ಕುರಿತಂತೆ ಪಕ್ಷದಲ್ಲಿ ಸಮಾಲೋಚನೆ ನಡೆಯುತ್ತಿದೆ. ಪಕ್ಷದ ಪ್ರಮುಖರ, ಕಾರ್ಯಕರ್ತರಿಂದ ಅಭಿಪ್ರಾಯ ಸಂಗ್ರಹ ಅರಂಭಗೊಂಡಿದ್ದು ಅಭ್ಯರ್ಥಿ ಕುರಿತಂತೆ ವರಿಷ್ಠರು ನಿರ್ಧಾರ ಕೈಗೊಳ್ಳಲಿದ್ದಾರೆ.
-ಸುದರ್ಶನ್‌ ಎಂ.,
ದ.ಕ. ಜಿಲ್ಲಾ ಬಿಜೆಪಿ ಅಧ್ಯಕ್ಷ

ಎರಡು ಜಿಲ್ಲೆಗಳನ್ನು ಒಳ ಗೊಂಡಂತೆ ಒಂದು ಸಭೆ ಆಗಿದೆ. ವಿಧಾನಸಭಾ ಉಪಚುನಾವಣೆ ಬಳಿಕ ಪ್ರಕ್ರಿಯೆಗಳು ವೇಗ ಪಡೆದುಕೊಳ್ಳುವ ನಿರೀಕ್ಷೆ ಇದೆ. -ಸುರೇಶ್‌ ನಾಯಕ್‌,

ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷ
ವಿಧಾನಪರಿಷತ್‌ ಚುನಾವಣೆಗೆ ಕಾಂಗ್ರೆಸ್‌ ಅಭ್ಯರ್ಥಿಗಳ ಆಯ್ಕೆಗೆ ಸಂಬಂಧಪಟ್ಟಂತೆ ಪ್ರಕ್ರಿಯೆಗಳಿಗೆ ಚಾಲನೆ ನೀಡಲಾಗಿದೆ. ಈಗಾಗಲೇ ದ.ಕನ್ನಡ ಜಿಲ್ಲೆಯಲ್ಲಿ ಪಕ್ಷದ ಸ್ಪರ್ಧಾಂಕಾಕ್ಷಿಗಳಿಂದ ಅರ್ಜಿಗಳನ್ನು ಸ್ವೀಕರಿಸಲಾಗಿದೆ.
ಕೆ. ಹರೀಶ್‌ ಕುಮಾರ್‌,
ದ.ಕ. ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ

ಉಡುಪಿ ಜಿಲ್ಲೆಯಿಂದ ಸ್ಪರ್ಧಿಸಲು ಆಸಕ್ತರಾಗಿ ರುವರು ಈಗಾಗಲೇ ಅರ್ಜಿ ಸಲ್ಲಿಸಿದ್ದಾರೆ. ಕೆಪಿಸಿಸಿ ತೀರ್ಮಾನ ಕೈಗೊಳ್ಳಲಿದೆ.
-ಅಶೋಕ್‌ ಕುಮಾರ್‌ ಕೊಡವೂರು,ಉಡುಪಿ ಜಿಲ್ಲಾ ಕಾಂ.ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next