ಹೊಸದಿಲ್ಲಿ: 2021ರ ನೀಟ್ ಪ್ರವೇಶ ಪರೀಕ್ಷೆ ಆಧಾರದಲ್ಲಿ ಒಂಬತ್ತು ಸುತ್ತುಗಳ ಕೌನ್ಸೆಲಿಂಗ್‌ನ ಅನಂತರವೂ ಮಿಕ್ಕಿರುವ 1,456 ವೈದ್ಯಕೀಯ ಸ್ನಾತಕೋತ್ತರ ಸೀಟುಗಳನ್ನು ಸ್ಟ್ರೇ ಸುತ್ತಿನ ಆಧಾರದಲ್ಲಿ ತುಂಬುವುದು ಔಚಿತ್ಯವೆನಿಸಿದರೂ ಅದಕ್ಕೊಂದು ಇತಿಮಿತಿಗಳನ್ನು ವಿಧಿಸಬೇಕು ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ.
“ಉಳಿಕೆ ಸೀಟುಗಳನ್ನು ತುಂಬಲು ಒಂದು ಸ್ಟ್ರೇ ಸುತ್ತು ನಡೆಸುವುದು, ಅದರಲ್ಲೂ ಮಿಕ್ಕಿದ ಸೀಟುಗಳನ್ನು ತುಂಬಲು ಮತ್ತೂಂದು ಸ್ಟ್ರೇ ಸುತ್ತು ನಡೆಸುವುದು ಹೀಗೆ ಎಷ್ಟು ಸುತ್ತುಗಳನ್ನು ನಡೆಸಲು ಸಾಧ್ಯ ಎಂದು ಪ್ರಶ್ನಿಸಿದ ನ್ಯಾ| ಎಂ.ಆರ್. ಶಾ ಹಾಗೂ ನ್ಯಾ| ಅನಿರುದ್ಧ ಬೋಸ್ ಅವರುಳ್ಳ ನ್ಯಾಯಪೀಠ, ಮಿಕ್ಕ ಸೀಟುಗಳನ್ನು ತುಂಬಲು ಒಂದು ನಿಶ್ಚಿತ ಮಾರ್ಗಸೂಚಿಯಿರಬೇಕು’ ಎಂದು ಹೇಳಿತು.
“ಯಾವ ಸೀಟೂ ಉಳಿಯದಂತೆ ಹಂಚಿಕೆ ಮಾಡಬೇಕು ಎಂಬ ಧಾವಂತದಡಿ ಅನರ್ಹರಿಗೆ ಸೀಟು ನೀಡಬಾರದು. ಎಂದಿಗೂ ಅಭ್ಯರ್ಥಿಗಳ ಶಿಕ್ಷಣ ಹಾಗೂ ಜನರ ಆರೋಗ್ಯದ ಜತೆಗೆ ರಾಜಿಯಾಗಬಾರದು’ ಎಂದು ನ್ಯಾಯಪೀಠ ತಿಳಿಸಿದೆ. “ಈಗ ಉಳಿದಿರುವುದು ವೈದ್ಯಕೀಯ ಸ್ನಾತಕೋತ್ತರ ಕೋರ್ಸ್‌ನ ಸೀಟುಗಳು. ಇದು ಮೂರು ವರ್ಷದ ಕೋರ್ಸ್. ಈಗ ಉಳಿಕೆಯಿರುವ ಸೀಟುಗಳನ್ನು ಹಂಚಲು ಸಾಫ್ಟ್ವೇರ್ ಲಾಕ್ ಆಗಿದೆ ಎಂದು ಹೇಳುತ್ತಿ ರುವ ಸರಕಾರ ಆ ಸೀಟುಗಳನ್ನು ಮುಂದಿನ ವರ್ಷ ಹಂಚುತ್ತೇವೆ ಎಂದು ವಿದ್ಯಾರ್ಥಿಗಳಿಗೆ ಹೇಳಲಾಗುತ್ತ ದೆಯೇ? ಆಗುವುದಿಲ್ಲ ಅಲ್ಲವೇ? ವಿದ್ಯಾರ್ಥಿಗಳ ಶಿಕ್ಷಣಕ್ಕೆ ಸೂಕ್ತ ಕೋರ್ಸ್‌ಗೆ ಪ್ರವೇಶ ನೀಡುವುದು, ಜನರ ಆರೋಗ್ಯವನ್ನು ಕಾಪಾಡುವ ವಿಚಾರದಲ್ಲಿ ರಾಜಿಯಾಗ ಬಾರದು’ ಎಂದು ನ್ಯಾಯಪೀಠ ತಿಳಿಸಿತು.