ರಾಜೇಂದ್ರ ಶೆಟ್ಟಿಯು ನಗರದ ಗಣ್ಯ ವರ್ತಕನಾಗಿದ್ದನು. ಊರಲ್ಲಿ ಅವನಿಗೆ ದೊಡ್ಡ ಹತ್ತಿ ಮಂಡಿಯಿತ್ತು. ಪ್ರತೀ ವಾರ ನೂರಾರು ಟನ್ನುಗಳಷ್ಟು ಹತ್ತಿಯನ್ನು ರೈತರಿಂದ ಖರೀದಿಸಿ ಅದನ್ನು ದೂರದೇಶಗಳಿಗೆ ಮಾರಾಟ ಮಾಡಿ ಸಾಕಷ್ಟು ಲಾಭಗಳಿಸಿದ್ದ. ಅವನು ತನ್ನ ಹೆಂಡತಿ ಹಾಗೂ ಮಗನೊಂದಿಗೆ ಸುಖವಾಗಿದ್ದನು. ಹೀಗಿರುವಾಗ ಅವನ ಮಂಡಿಯಲ್ಲಿ ಇದ್ದಕ್ಕಿದ್ದಂತೆಯೇ ಹತ್ತಿ ಕಳ್ಳತನ ಶುರುವಾಯಿತು. ದಿನಕ್ಕೆ ಏನಿಲ್ಲವೆಂದರೂ ನೂರಾರು ಕೆ.ಜಿ ಗಳಷ್ಟು ಹತ್ತಿ ಕಳವಾಗತೊಡಗಿತ್ತು. ಎಷ್ಟೇ ನಿಗಾ ವಹಿಸಿದರೂ ಕಳ್ಳತನ ತಪ್ಪಲಿಲ್ಲ. ನಂಬಿಕಸ್ಥ ಆಳುಗಳನ್ನೇ ರಾತ್ರಿ ಕಾವಲಿಗೆ ನಿಯೋಜಿಸಿದರೂ ಕಳ್ಳತನ ಸಾಂಘವಾಗಿ ಮುಂದುವರಿದಿತ್ತು.
ರಾಜೇಂದ್ರ ಶೆಟ್ಟಿ ಚಿಂತೆಯಲ್ಲಿ ಮುಳುಗಿದ. ಹೇಗಾದರೂ ಮಾಡಿ ಕಳ್ಳನನ್ನು ಪತ್ತೆ ಹಚ್ಚಿ ತನಗಾಗುತ್ತಿದ್ದ ನಷ್ಟವನ್ನು ತುಂಬಿಕೊಳ್ಳಬೇಕೆಂದು ಅವನು ನಿರ್ಧರಿಸಿದ. ಅದೇ ಸಂದರ್ಭದಲ್ಲಿ ಶೆಟ್ಟಿಯ ಮಗನಿಗೆ ಉಪಾಯವೊಂದು ಹೊಳೆದಿತ್ತು.
ಒಂದು ದಿನ ಮಂಡಿಯಲ್ಲಿ ಕೆಲಸ ಮಾಡುತ್ತಿದ್ದ ಆಳುಗಳನ್ನೆಲ್ಲಾ ರಾಜೇಂದ್ರದ ಮನೆಗೆ ಬರಲು ಹೇಳಿಕಳುಹಿಸಲಾಯಿತು. ಆಳುಗಳು ಮನೆ ಮುಂದೆ ನಿಂತರು. ಏನೋ ಮುಖ್ಯವಾದ ವಿಷಯ ಇರಬೇಕೆಂದುಕೊಂಡವರಿಗೆ ಮಂತ್ರವಾದಿಯನ್ನು ನೋಡಿ ಆಶ್ಚರ್ಯವಾಯಿತು.
ಮಂತ್ರವಾದಿ, ಆಳುಗಳಿಗೆ ಹತ್ತಿ ತುಂಬಿದ ಚಿಕ್ಕ ಪೆಟ್ಟಿಗೆಗಳನ್ನು ಹಂಚಿದ. ಅದನ್ನು ಒಂದು ರಾತ್ರಿ ಮನೆಯಲ್ಲಿಟ್ಟುಕೊಂಡು ಮರು ದಿನ ವಾಪಸ್ ತಂದುಕೊಡಬೇಕೆಂದು ಆಗ್ರಹಿಸಿದ. ಆಳುಗಳಿಗೆ ಏನಾಗುತ್ತಿದೆ ಎಂದೇ ತಿಳಿಯಲಿಲ್ಲ. ಆ ರಾತ್ರಿ ಗಾಳಿ ಮಾತು ಹರಡಿತು. “ಪೆಟ್ಟಿಗೆ ತೆಗೆದುಕೊಂಡು ಹೋದವರು ಕಳ್ಳನಲ್ಲದಿದ್ದರೆ, ಅದರೊಳಗಿನ ಹತ್ತಿ ಹಸಿರು ಬಣ್ಣವಾಗಿ ಮಾರ್ಪಾಡಾಗುತ್ತದೆ, ಕಳ್ಳನಾಗಿದ್ದರೆ ಹತ್ತಿ ತನ್ನ ಬಣ್ಣ ಬದಲಿದಸೆ ಬಿಳಿಯಾಗಿಯೇ ಇರುತ್ತೆ’ ಎಂದು ಎಲ್ಲರೂ ಮಾತಾಡಿಕೊಂಡರು.
ನೋಡಲು ಭಯಂಕರನಾಗಿ ಕಾಣುತ್ತಿದ್ದ ಮಂತ್ರವಾದಿಯನ್ನು ನೋಡಿಯೇ ಎಲ್ಲರೂ ಹೆದರಿ ಹೋಗಿದ್ದರು. ನಿರಪರಾಧಿ ಆಳುಗಳು ಪೆಟ್ಟಿಗೆಯ ಬಗ್ಗೆ ಯಾವುದೇ ಚಿಂತೆ ಮಾಡದೆ ಎಂದಿನಂತೆ ತಮ್ಮಷ್ಟಕ್ಕೆ ಊಟ ಮಾಡಿ ಮಲಗಿ ನಿದ್ರೆ ಹೋದರು. ಆದರೆ ಅವರಲ್ಲೇ ಇದ್ದ ಕಳ್ಳನಿಗೆ ರಾತ್ರಿಯೆಲ್ಲಾ ಚಿಂತೆ ಕಾಡತೊಡಗಿತು. ತಾನು ಕದ್ದಿರುವುದು ನಿಜವಾದ್ದರಿಂದ ಆ ಮಂತ್ರವಾದಿಯ ಮಂತ್ರಕ್ಕೆ ನನ್ನ ಪೆಟ್ಟಿಗೆಯಲ್ಲಿರುವ ಹತ್ತಿಯು ಬಣ್ಣ ಬದಲಿಸುವುದಿಲ್ಲ. ಹಾಗಾಗಿ ತಾನು ಯಜಮಾನರ ಕೈಗೆ ಸಿಕ್ಕಿಬೀಳುವುದರಲ್ಲಿ ಅನುಮಾನವಿಲ್ಲ ಎಂದೆಲ್ಲಾ ಯೋಚಿಸಿ ಭಯದಿಂದ ತತ್ತರಿಸಿ ಹೋದ. ರಾತ್ರಿಯಿಡೀ ನಿದ್ದೆಯಿಂದ ಎದ್ದು ಆಗಿಂದಾಗ್ಗೆ ಪೆಟ್ಟಿಗೆಯನ್ನು ತೆರೆದು ನೋಡತೊಡಗಿದನು. ಅವನ ಹತ್ತಿ ಇದ್ದ ಹಾಗೇ ಇತ್ತು. ಸಿಕ್ಕುಬೀಳುವೆನೆಂಬ ಭಯಕ್ಕೆ ಉಪಾಯವೊಂದನ್ನು ಹೂಡಿದ. ಮನೆಯಲ್ಲಿದ್ದ ಹಸಿರು ರಂಗೋಲಿ ಪುಡಿಯನ್ನು ನೀರಿನಲ್ಲಿ ಕಲಸಿ ಅದನ್ನು ತನ್ನ ಪೆಟ್ಟಿಗೆಯಲ್ಲಿದ್ದ ಹತ್ತಿಗೆ ಲೇಪಿಸಿದ. ಈಗ ಹತ್ತಿ ಹಸಿರಾಯಿತು. ಇನ್ನು ತನ್ನನ್ನು ಯಾರೂ ಕಂಡುಹಿಡಿಯಲಾರರು ಎಂಬ ಭ್ರಮೆಯಲ್ಲಿ ಯಜಮಾನರ ಮನೆಯ ಬಳಿ ಬಂದನು.
ಅದಾಗಲೇ ಉಳಿದವರೆಲ್ಲರೂ ಬಂದಿದ್ದು ಅವರ ಪೆಟ್ಟಿಗೆಯಲ್ಲಿನ ಹತ್ತಿಯು ಬಿಳಿ ಬಣ್ಣದಲ್ಲೇ ಇರುವುದನ್ನು ಕಂಡು ಎಲ್ಲರೂ ಕಳ್ಳರು ತಾನೊಬ್ಬನೇ ನಿರಪರಾಧಿಯೆಂದೂ ವಾದಿಸಲು ಮುಂದಾದನು. ಆದರೆ ರಾಜೇಂದ್ರ ಶೆಟ್ಟಿ ಕಳ್ಳನನ್ನು ಹಿಡಿದು ರಾಜಭಟರಿಗೊಪ್ಪಿಸಿದರು. ಮಗನ ಉಪಾಯವನ್ನು ಸೆಟ್ಟಿ ಮನಸಾರೆ ಪ್ರಶಂಸಿಸಿದ.
ಪ.ನಾ.ಹಳ್ಳಿ. ಹರೀಶ್ ಕುಮಾರ್