ಅಫಜಲಪುರ: ಕಳೆದ ನಾಲ್ಕೈದು ವರ್ಷಗಳಲ್ಲಿ ತಾಲೂಕಿನ ರೈತರು ಹೆಚ್ಚು ಹತ್ತಿ ಬಿತ್ತನೆ ಮಾಡಿ ಇಳುವರಿ ಸಿಗದೇ ಕೈ ಸುಟ್ಟುಕೊಂಡಿದ್ದರು. ಈ ಬಾರಿಯೂ ಇಳುವರಿ ಸಮಸ್ಯೆಯಿಂದಾಗಿ ಹತ್ತಿ ಬಿತ್ತನೆಗೆ ಸ್ವಲ್ಪ ಹಿಂದೇಟು ಹಾಕುತ್ತಿದ್ದು, ತೊಗರಿ ಬೆಳೆಯತ್ತ ಹೆಚ್ಚು ಒಲವು ತೋರಿಸುತ್ತಿದ್ದಾರೆ. ಹೀಗಾಗಿ ಈ ಬಾರಿ ಹತ್ತಿಗಿಂತ ಹೆಚ್ಚು ತೊಗರಿ ಬಿತ್ತನೆಯಾಗುತ್ತಿದೆ.
ಸಾಗುವಳಿ ಕ್ಷೇತ್ರದಲ್ಲಿ 99850 ಹೆಕ್ಟೇರ್ ಬಿತ್ತನೆ ಗುರಿ: ಸದ್ಯ ತಾಲೂಕಿನ ಒಟ್ಟು ಭೌಗೋಳಿಕ ಕ್ಷೇತ್ರ 130479 ಹೆಕ್ಟೇರ್ ಇದ್ದು, ಇದರಲ್ಲಿ ಸಾಗುವಳಿ ಕ್ಷೇತ್ರ 11590 ಹೆಕ್ಟೇರ್ ಪ್ರದೇಶವಿದೆ. ಈ ಪೈಕಿ 99850 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದೆ. ಇಷ್ಟೊಂದು ಪ್ರಮಾಣದ ಬಿತ್ತನೆ ಕ್ಷೇತ್ರದಲ್ಲಿ ಬಹುಪಾಲು ರೈತರು ಈ ಬಾರಿ ತೊಗರಿ ಬಿತ್ತನೆಯನ್ನೇ ಮಾಡಿದ್ದಾರೆ. ಕೆಲ ವರ್ಷಗಳಿಂದ ತಾಲೂಕಿನ ರೈತರು ಹತ್ತಿ ಬೆಳೆಯನ್ನು ಹೆಚ್ಚಾಗಿ ಬಿತ್ತನೆ ಮಾಡುತ್ತಿದ್ದರು.
ಹತ್ತಿ ಬೆಳೆ ಬಹುತೇಕ ರೈತರಿಗೆ ಲಾಭ ತಂದುಕೊಡುವ ಬದಲಾಗಿ ನಷ್ಟವನ್ನೇ ತಂದೊಡ್ಡಿದೆ. ಯಾವ ಬೀಜ ಹಾಕಿದರೂ ನಿರೀಕ್ಷಿತ ಇಳುವರಿ ಸಿಗದೇ ಇದ್ದುದರಿಂದ ರೈತರು ಈ ಬಾರಿ ಹತ್ತಿ ಬಿತ್ತನೆ ಕೈಬಿಟ್ಟಿದ್ದಾರೆ. ಹತ್ತಿ ಬದಲಾಗಿ ಯಾವಾಗಲೂ ಬಿತ್ತನೆಯಾಗುವ ತೊಗರಿಯನ್ನು ಹೆಚ್ಚಿನ ಪ್ರಮಾಣದಲ್ಲಿ ಬಿತ್ತಲು ಮನಸ್ಸು ಮಾಡಿದ್ದಾರೆ.
ಹೀಗಾಗಿ ಈ ಬಾರಿ ಹತ್ತಿಗಿಂತ ಹೆಚ್ಚು ತೊಗರಿ ಬಿತ್ತನೆಯಾಗುತ್ತಿದೆ. ಬಿತ್ತನೆಯ ಗುರಿಯ ಬಹುಪಾಲು ಭಾಗ ತೊಗರಿಯಾಗುತ್ತಿರುವುದು ಈ ಬಾರಿಯ ವಿಶೇಷವಾಗಿದೆ ಎಂದರು. ರೈತರ ಮೊಗದಲ್ಲಿ ಮಂದಹಾಸ: ಪ್ರಸಕ್ತ ಮುಂಗಾರು ಹಂಗಾಮಿನ ಬಿತ್ತನೆಗೆ ಪೂರಕವಾಗುವುಷ್ಟು ಮಳೆ ಬಂದಿದೆ. ಅದರಲ್ಲೂ ಪ್ರಸಕ್ತ ಸಾಲಿನಲ್ಲಿ ಜೂನ್ ಅಂತ್ಯದ ವೇಳೆಗೆ ಬರಬೇಕಾಗಿದ್ದ ಮಳೆಗಿಂತ ವಾಡಿಕೆ ಮಳೆಗಿಂತಲೂ ಹೆಚ್ಚಿನ ಮಳೆ ಬಂದಿದ್ದರಿಂದ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ವರ್ಷದ ವಾಡಿಕೆ ಮಳೆ 667.3 ಎಂ.ಎಂ ಬರಬೇಕು.
ಜೂನ್ ಅಂತ್ಯದ ವರೆಗೆ ಬರಬೇಕಾದ ಮಳೆ 160.5 ಎಂ.ಎಂ ಬರಬೇಕಾಗಿತ್ತು. ಆದರೆ ಜೂನ್ ಅಂತ್ಯದ ವೇಳೆಗೆ 183.50 ಎಂ.ಎಂ ಮಳೆಯಾಗುವ ಮೂಲಕ 23 ಎಂ.ಎಂ ಮಳೆ ಹೆಚ್ಚಾಗಿ ಬಂದಿದೆ. ತಾಲೂಕಿನ ಕರ್ಜಗಿ ಭಾಗದಲ್ಲಿ 268 ಎಂ.ಎಂ ಮಳೆಯಾದರೆ, ಗೊಬ್ಬೂರ ವಲಯದಲ್ಲಿ ಅತಿ ಕಡಿಮೆ ಅಂದರೆ 113 ಎಂ.ಎಂ. ಮಳೆಯಾಗಿದೆ. ಅಫಜಲಪುರ ವಲಯದಲ್ಲಿ 204, ಅತನೂರ ವಲದಯ್ಲಲಿ 140.06 ಎಂ.ಎಂ ಮಳೆಯಾಗಿದೆ. ಹೀಗಾಗಿ ಬಿತ್ತನೆಗೆ ರೈತರು ಬಿತ್ತನೆಗೆ ಸಜ್ಜುಗೊಂಡಿದ್ದಾರೆ. ಬೆಳೆ ಮಾಹಿತಿ: ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನಲ್ಲಿ ಏಕ ದಳ ಧಾನ್ಯ ಬಿತ್ತನೆ ಗುರಿ 2315 ಹೆಕ್ಟೇರ್ ಇದೆ. ಬೆಳೆಕಾಳು 73.835 ಹೆಕ್ಟೇರ್ ಇದ್ದು, ಈ ಪೈಕಿ ತೊಗರಿ 23,557 ಹೆಕ್ಟೇರ್ ಬಿತ್ತನೆಯಾಗಿದೆ.
ಇನ್ನೂ ಬಿತ್ತನೆಯಾಗುತ್ತಿದೆ. ಎಣ್ಣೆ ಕಾಳು 2490 ಹೆಕ್ಟೇರ್ ಪ್ರದೇಶ ಗುರಿ ಇದೆ. ಈ ಪೈಕಿ 132 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ. ವಾಣಿಜ್ಯ ಬೆಳೆಗಳ ಗುರಿ 21210 ಹೆಕ್ಟೇರ್ ಇದೆ. ಕಬ್ಬಿನ ಗುರಿ 31250 ಹೆಕ್ಟೇರ್ ಇದೆ. ಈಗಾಗಲೇ 29.500 ಹೆಕ್ಟೇರ್ ನಾಟಿ ಮಾಡಲಾಗಿದೆ. ಹತ್ತಿ ಗುರಿ 6500 ಹೆಕ್ಟೇರ್ ಇದೆ. ಕಳೆದ ವರ್ಷವೂ ಇಷ್ಟೇ ಗುರಿ ಇದ್ದರೂ 28.860 ಹೆಕ್ಟೇರ್ ಪ್ರದೇಶದಲ್ಲಿ ಹತ್ತಿ ಬಿತ್ತನೆಯಾಗಿತ್ತು. ಆದರೆ ಈ ಬಾರಿ ಹತ್ತಿ ಬಿತ್ತನೆಯು 2865 ಹೆಕ್ಟೇರ್ ಮಾತ್ರ ಆಗಿದೆ. ಇನ್ನೂ ಸ್ವಲ್ಪ ಮಾತ್ರ ಬಿತ್ತನೆಯಾಗುವ ಸಂಭವವಿದೆ. ಕಳೆದ ವರ್ಷದ ಹತ್ತಿ ಬೆಳೆಯ ಕ್ಷೇತ್ರ ತೊಗರಿ ಬೆಳೆ ಕ್ಷೇತ್ರವಾಗಿ ಪರಿವರ್ತನೆಯಾಗಲಿದೆ.