Advertisement
ಶುದ್ಧ ಹತ್ತಿ ನಿಸರ್ಗದ ಕೊಡುಗೆ. ಹೆಚ್ಚು ತಾಪಮಾನ ಇರುವೆಡೆ ಇದೊಂದು ವರದಾನ. ಬಿಸಿಯನ್ನು ಹೀರಿಕೊಳ್ಳುವ ಶಕ್ತಿ ಇರುವುದರಿಂದ ಕಾಟನ್ ಬಟ್ಟೆ, ಹಾಸಿಗೆಗಳಿಗೆ ಬೇಡಿಕೆಯೂ ಹೆಚ್ಚುತ್ತಿದೆ. ಮಂಗಳೂರಿನಲ್ಲಿ ಕಳೆದ ಮೂರ್‍ನಾಲ್ಕು ವರ್ಷಗಳಲ್ಲಿ ಶುದ್ಧ ಕಾಟನ್ ಬಟ್ಟೆ, ಹಾಸಿಗೆಗಳಿಗೆ ಬೇಡಿಕೆ ಹೆಚ್ಚು
Related Articles
Advertisement
ಹಾಗೆ ನೋಡಿದರೆ, ಶುದ್ಧ ಹತ್ತಿಯ ಬಟ್ಟೆಗಳು ಯಾವತ್ತೂ ಬೇಡಿಕೆ ಕಳೆದುಕೊಂಡಿದ್ದೇ ಇಲ್ಲ. ಆದರೆ, ಹವಾಮಾನದಲ್ಲಿ ಬದಲಾವಣೆ ಜಾಸ್ತಿಯಾದಂತೆ ಏರಿಕೆಯ ತಾಪಮಾನವಿರುವ ಪ್ರದೇಶಗಳಲ್ಲಿ ಶುದ್ಧ ಹತ್ತಿಯ ಬಟ್ಟೆಗಳ ಧರಿಸುವಿಕೆಯೇ ಹೆಚ್ಚಾಗುತ್ತಿದೆ. ಮಂಗಳೂರು ನಗರ ಹೇಳೀಕೇಳಿ ಅತೀ ಹೆಚ್ಚು ತಾಪಮಾನವಿರುವ ಪ್ರದೇಶ. ಕಡಲತಡಿ ಮಂಗಳೂರಿನಲ್ಲಿ ಇಲ್ಲಿನ ಬಿಸಿಯಾದ ಹವಾಮಾನಕ್ಕೆ ಶುದ್ಧ ಹತ್ತಿಯ ಬಟ್ಟೆಗಳ ಬಳಕೆಯೇ ಬೆಸ್ಟ್.
ಶರ್ಟ್, ಸೀರೆಗೆ ಬೇಡಿಕೆ
ಎಲ್ಲಿ ಹೋದರೂ ಸೆಕೆ, ಫ್ಯಾನ್ ಅಡಿಯಲ್ಲಿ ಕುಳಿತರೂ ಸೆಕೆ, ಮಳೆಗಾಲದಲ್ಲಿ ಒಂದು ಗಂಟೆ ಕಾಲ ಮಳೆ ಬಾರದಿದ್ದರೂ ಸೆಕೆ ಎನ್ನುವ ಕಾಲಘಟ್ಟದಲ್ಲಿ ನಾವಿದ್ದೇವೆ. ಸೆಕೆಯಿಂದ ಸ್ವಲ್ಪವಾದರೂ ನೆಮ್ಮದಿ ಸಿಗಬೇಕೆಂದರೆ ಕಾಟನ್ ಬಟ್ಟೆಗಳ ಮೊರೆ ಹೋಗಬೇಕಾದುದು ಸದ್ಯದ ಅನಿವಾರ್ಯ ಹೌದು.
ಶುದ್ಧ ಹತ್ತಿಯ ಶರ್ಟ್, ಸೀರೆ ಸದ್ಯ ಟ್ರೆಂಡ್ ಆಗಿ ಚಾಲ್ತಿಯಲ್ಲಿದೆ. ಕಾಟನ್ ಸೀರೆಗೆ ವೈವಿಧ್ಯ ಕಲರ್‌ಫುಲ್ ಡಿಸೈನ್ ಹೊಂದಿರುವ ಬ್ಲೌಸ್ ಧರಿಸುವುದು ಹೊಸ ಸ್ಟೈಲ್. ಮದುವೆ ಸಮಾರಂಭಗಳಿಗೆ ರೇಷ್ಮೆ ಧರಿಸಿಯೋ, ಸಿಲ್ಕ್ ಸಾರಿ ಧರಿಸಿಯೋ ಹೋಗುವ ಕಾಲ ಮುಗಿಯಿತು. ಏಕೆಂದರೆ, ಮದುವೆ ಮನೆಗಳಲ್ಲಿಯೂ ಕಾಟನ್ ಸೀರೆಗಳದ್ದೇ ಕಮಾಲ್. ಪ್ಯೂರ್ ಕಾಟನ್ ಚೂಡಿದಾರ ಮೆಟೀರಿಯಲ್, ಜೀನ್ಸ್, ಕುರ್ತಾ, ಮಕ್ಕಳ ಉಡುಗೆಗೂ ಬೇಡಿಕೆ ಇದೆ.
ಪ್ಯೂರ್ ಕಾಟನ್ ಆಯ್ಕೆಗೆ ಸಲಹೆ
ನಗರವಾಸಿಗಳ ನೆಮ್ಮದಿಯ ನಿದ್ದೆಯನ್ನೂ ಕಸಿದುಕೊಂಡಿರುವ ಸೆಕೆ ಎಂಬ ರಾಕ್ಷಸನಿಂದ ಮುಕ್ತಿ ಪಡೆಯಲು ಕಾಟನ್ ಹಾಸಿಗೆಗಳ ಬಳಕೆಯೊಂದೇ ದಾರಿ. ಕಾಟನ್ ಹಾಸಿಗೆ, ಪಿಲ್ಲೋಗಳಿಗೂ ಬೇಡಿಕೆ ಜಾಸ್ತಿ ಇದೆ. ಮನೆಯಲ್ಲೇ ತಯಾರಿಸುವ ಹತ್ತಿಯ ಹಾಸಿಗೆ, ದಿಂಬುಗಳನ್ನು ನಗರದಲ್ಲಿ ಬಳಸುವವರ ಸಂಖ್ಯೆಯೂ ಜಾಸ್ತಿಯಾಗುತ್ತಿದೆ.
ಕಾಟನ್ ಡ್ರೆಸ್, ಹಾಸಿಗೆ ಮಾರಾಟ ಮಾಡುವ ಮಂಗಳೂರಿನ ಬಹುತೇಕ ಅಂಗಡಿಗಳ ಸಿಬಂದಿ ಪ್ಯೂರ್ ಕಾಟನ್ ಬಟ್ಟೆ, ಹಾಸಿಗೆ, ದಿಂಬುಗಳನ್ನೇ ಕೊಳ್ಳುವಂತೆ ಸಲಹೆ ಮಾಡುತ್ತಾರೆ ಎಂಬುದು ಮತ್ತೂಂದು ವಿಶೇಷ. ದೈನಂದಿನ ವ್ಯವಹಾರಕ್ಕೆ ಬಟ್ಟೆ ಕೊಳ್ಳಲು ಬಂದವರಿಗೆ ನೈಲಾನ್ ಉಡುಪುಗಳಿಗಿಂತ ಕಾಟನ್ ಬಟ್ಟೆಗಳನ್ನೇ ಖರೀದಿಸಿ ಎಂದು ಹೇಳುತ್ತೇವೆ. ಇದರಲ್ಲಿ ಸೆಕೆ ಹೆಚ್ಚಾಗದಂತೆ ತಡೆಯುವ ಗುಣವಿದ್ದು, ಧರಿಸಿದವರಿಗೆ ಸ್ವಲ್ಪ ಮಟ್ಟಿನ ನಿರಾಳ ಸಿಗುತ್ತದೆ ಎಂಬುದೇ ಕಾರಣ ಎಂಬುದು ಬಟ್ಟೆ ಅಂಗಡಿಗಳ ಸಿಬಂದಿ ಮಾತು.
ಕಾಟನ್ ಮಾರಾಟ ಜಾಸ್ತಿ
ಬಟ್ಟೆ ಮಳಿಗೆಯೊಂದರ ಸಿಬಂದಿ ಶಿವಕುಮಾರ್ ಹೇಳುವ ಪ್ರಕಾರ, ಪುರುಷರ ಕಾಟನ್ ಶರ್ಟ್, ಇತರ ಬಟ್ಟೆಗಳಿಗೆ ಹೆಚ್ಚು ಬೇಡಿಕೆ ಇದೆ. ಕಳೆದ ಮೂರ್‍ನಾಲ್ಕು ವರ್ಷಗಳಿಂದ ಮಂಗಳೂರಿನ ಹವಾಗುಣ ಬದಲಾಗಿರುವುದರಿಂದ ಮತ್ತು ಉಷ್ಣತೆ ಜಾಸ್ತಿ ಇರುವುದರಿಂದ ಕಾಟನ್ ಬಟ್ಟೆಗಳೇ ಜಾಸ್ತಿ ಮಾರಾಟವಾಗುತ್ತಿವೆ ಎನ್ನುತ್ತಾರೆ.
– ಧನ್ಯಾ ಬಾಳೆಕಜೆ