Advertisement

ಜಲಕ್ಷಾಮದಿಂದ ಹಳ್ಳಿಗಳಲ್ಲಿ ಹಾಹಾಕಾರ

10:56 AM Mar 03, 2019 | |

ದಾವಣಗೆರೆ: ಸತತ ಮೂರ್‍ನಾಲ್ಕು ವರ್ಷಗಳಿಂದ ಮಳೆಯ ಕೊರತೆ ಪರಿಣಾಮವಾಗಿ ದಾವಣಗೆರೆ ತಾಲೂಕಿನ 7 ಗ್ರಾಮಗಳಲ್ಲಿ ಕುಡಿಯುವ ನೀರಿನ ಹಾಹಾಕಾರ ಎದುರಾಗಿದೆ.

Advertisement

ಮಳೆಗಾಲದಲ್ಲೇ ಅನೇಕ ಗ್ರಾಮಗಳಲ್ಲಿ ನೀರಿನ ಸಮಸ್ಯೆ ಉಂಟಾಗಿದ್ದರಿಂದ ಆಗಲೇ ಟ್ಯಾಂಕರ್‌ ಮೂಲಕ ನೀರು ಪೂರೈಸಲಾಗುತ್ತಿದ್ದು, ಬೇಸಿಗೆಯಲ್ಲಿ ಪರಿಸ್ಥಿತಿ ಇನ್ನಷ್ಟು ಗಂಭೀರವಾಗಲಿದೆ. ದಾವಣಗೆರೆ ತಾಲೂಕಿನ ಹೆಬ್ಟಾಳು, ಕಾಟಿಹಳ್ಳಿ, ಹುಣಸೇಕಟ್ಟೆ, ಹಾಲುವರ್ತಿ, ಕೆಂಚಮ್ಮನಹಳ್ಳಿ,
ಕದರಪ್ಪನಹಟ್ಟಿ, ಜಮ್ಮಾಪುರ, ಈಚಘಟ್ಟ… ಗ್ರಾಮಗಳಿಗೆ ಪ್ರತಿ ದಿನ ಟ್ಯಾಂಕರ್‌ ಮೂಲಕವೇ ಒದಗಿಸುವ ನೀರೇ ಮೂಲ ಆಧಾರ. ಪ್ರತಿ ನಿತ್ಯ 7 ಗ್ರಾಮಗಳಿಗೆ ಒಟ್ಟಾರೆ 39 ಟ್ರಿಪ್‌ ಟ್ಯಾಂಕರ್‌ ನೀರು ಪೂರೈಸಲಾಗುತ್ತಿದೆ. ಮುಂದೆ ಸಮಸ್ಯೆ ಇನ್ನೂ ಹೆಚ್ಚಾಗುವ ಎಲ್ಲಾ ಸಾಧ್ಯತೆ ಇರುವ ಕಾರಣಕ್ಕೆ ಜನರಲ್ಲಿ ಮಾತ್ರವಲ್ಲ ನೀರು ಸರಬರಾಜು ಹೊಣೆಗಾರಿಕೆಯ ಅಧಿಕಾರಿ ವರ್ಗದ ಚಿಂತೆಗೆ ಕಾರಣವಾಗಿದೆ.

ಹೆಬ್ಟಾಳು ಗ್ರಾಪಂ ವ್ಯಾಪ್ತಿಯ ಕಾಟಿಹಳ್ಳಿಯಲ್ಲಿ 2018ರ ಅ.22 ರಿಂದ ಪ್ರತಿ ದಿನ 6 ಟ್ಯಾಂಕರ್‌ ನೀರು ಸರಬರಾಜು ಮಾಡಲಾಗುತ್ತಿದೆ. ಹುಣಸೇಕಟ್ಟೆ ಗ್ರಾಮದಲ್ಲಿನ ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಕಳೆದ ಡಿ. 12 ರಿಂದ ಪ್ರತಿ ದಿನ 2, ಜನವಸತಿ ಪ್ರದೇಶಕ್ಕೆ 11 ಟ್ಯಾಂಕರ್‌, ಹಾಲುವರ್ತಿಯ ಶುದ್ಧ ಕುಡಿಯುವ ನೀರು ಘಟಕಕ್ಕೆ ಡಿ. 20 ರಿಂದ ಪ್ರತಿ ನಿತ್ಯ 2 ಟ್ಯಾಂಕರ್‌, ಕೆಂಚಮ್ಮನಹಳ್ಳಿ ಶುದ್ಧ ಕುಡಿಯುವ ನೀರು ಘಟಕಕ್ಕೆ ಜ.24 ರಿಂದ ಪ್ರತಿ ದಿನ 1, ಜನವಸತಿ ಪ್ರದೇಶಕ್ಕೆ 3 ಟ್ಯಾಂಕರ್‌ಗಳಲ್ಲಿ ನೀರು ಒದಗಿಸಲಾಗುತ್ತಿದೆ.

ಕಂದನಕೋವಿ ಗ್ರಾಪಂ ವ್ಯಾಪ್ತಿಯ ಸರ್ಕಾರಿ ಪ್ರೌಢಶಾಲೆಗೆ ಬಿಸಿಯೂಟ ಒಳಗೊಂಡಂತೆ ಇತರೆ ವ್ಯವಸ್ಥೆಗಾಗಿ ಕಳೆದ ಡಿ. 10ರಿಂದ ವಾರಕ್ಕೆ 2 ಟ್ಯಾಂಕರ್‌ ನಲ್ಲಿ ನೀರು ಪೂರೈಸುವ ಮೂಲಕ ವಿದ್ಯಾರ್ಥಿಗಳಿಗೆ ಸ್ಪಂದಿಸಲಾಗುತ್ತಿದೆ.
 
ಗುಡಾಳ್‌ ಗ್ರಾಪಂ ವ್ಯಾಪ್ತಿಯ ಕದರಪ್ಪನಹಟ್ಟಿ ಅ.7 ರಿಂದ ಪ್ರತಿ ದಿನ 3, ಜಮ್ಮಾಪುರದಲ್ಲಿ ನ.31 ರಿಂದ ದಿನಕ್ಕೆ 4, ನೇರ್ಲಿಗೆ ಗ್ರಾಪಂ ವ್ಯಾಪ್ತಿಯ ಈಚಘಟ್ಟದಲ್ಲಿ ಜ.29 ರಿಂದ ದಿನಕ್ಕೆ ಜನವಸತಿ ಪ್ರದೇಶಕ್ಕೆ 8, ಶುದ್ಧ ಕುಡಿವ ನೀರು ಘಟಕಕ್ಕೆ 2 ಟ್ಯಾಂಕರ್‌ನಲ್ಲಿ ನೀರು ಪೂರೈಕೆ ಮಾಡಲಾಗುತ್ತಿದೆ ಎಂದು ಗ್ರಾಮೀಣ ಕುಡಿವ ನೀರು ಮತ್ತು ನೈರ್ಮಲ್ಯ ವಿಭಾಗದ ಮೂಲಗಳು ತಿಳಿಸಿವೆ. 

ಹೆಬ್ಟಾಳು ಹೊಸ ಬಡಾವಣೆ ಪ್ರದೇಶದಲ್ಲಿ ಆ.8 ರಿಂದಲೇ ಸಿದ್ದೇಶಿ ಎಂಬುವರಿಗೆ ಸೇರಿದ ಕೊಳವೆಬಾವಿ ಬಾಡಿಗೆ ಪಡೆದು ನೀರು ಒದಗಿಸಲಾಗುತ್ತಿದೆ. ಕಾಟಿಹಳ್ಳಿ ಲಂಬಾಣಿಹಟ್ಟಿಯಲ್ಲಿ ಡಿ.26 ರಿಂದ ವೆಂಕಾನಾಯ್ಕ ಎಂಬುವರ ಕೊಳವೆಬಾವಿ ಬಾಡಿಗೆ ಪಡೆದು, ನೀರಿನ ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದೆ. ಮ್ಯಾಸರಹಳ್ಳಿಯಲ್ಲಿ ನ.29 ರಿಂದ ತಿಪ್ಪೇಸ್ವಾಮಿ ಎಂಬುವರ ಕೊಳವೆಬಾವಿ ಬಾಡಿಗೆ ಪಡೆದು ಸುತ್ತಮುತ್ತ ಪ್ರದೇಶಕ್ಕೆ ನೀರು ಕೊಡಲಾಗುತ್ತಿದೆ. ಮುಂದೆ ಒಂದೊಮ್ಮೆ ಕೊಳವೆಬಾವಿಗಳು ಕೈಕೊಟ್ಟರೆ ಪರ್ಯಾಯ ವ್ಯವಸ್ಥೆಗೆ ಆಲೋಚಿಸಲಾಗುತ್ತಿದೆ.

Advertisement

ದಾವಣಗೆರೆ ತಾಲೂಕಿನ ಒಂದು ಭಾಗದಲ್ಲಿ ಭದ್ರಾ ನಾಲೆ ಇರುವ ಕಾರಣಕ್ಕೆ ಜಿಲ್ಲಾ, ತಾಲೂಕು ಕೇಂದ್ರವಾಗಿರುವ ದಾವಣಗೆರೆ ಒಳಗೊಂಡಂತೆ ನಾಲೆಗೆ ಹೊಂದಿಕೊಂಡಿರುವ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಅಷ್ಟಾಗಿ ಬಾಧಿಸುತ್ತಿಲ್ಲ. 

ಭದ್ರಾ ನಾಲೆಯಿಂದ ದೂರ ಇರುವಂತಹ ಹಾಗೂ ಹೆಚ್ಚಾಗಿ ಮಳೆಯನ್ನೇ ಅವಲಂಬಿಸಿರುವ ಕಡೆಗಳಲ್ಲಿ ನೀರಿನ ಸಮಸ್ಯೆ ಅಧಿಕವಾಗಿಯೇ ಇರುತ್ತದೆ. ಅದರಲ್ಲೂ ಇತ್ತೀಚಿನ ವರ್ಷದಲ್ಲಿ ಎಡೆಬಿಡದೆ ಕಾಡುತ್ತಿರುವ ಮಳೆಯ ಕೊರತೆ ಸಮಸ್ಯೆ ಉಲ್ಬಣಗೊಳ್ಳಲು ಮೂಲ ಕಾರಣ. ದಾವಣಗೆರೆ ತಾಲೂಕಿನಲ್ಲಿ 300ಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುವ 81 ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರು ಘಟಕ ಇವೆ. 10 ಗ್ರಾಮಗಳಲ್ಲಿ ಶುದ್ಧ ಕುಡಿವ ನೀರಿನ ಘಟಕಗಳ ಕ್ಯಾಬಿನ್‌ ನಿರ್ಮಾಣವಾಗಿವೆ. ಯಂತ್ರೋಪಕರಣಗಳ ಅಳವಡಿಕೆ ಪ್ರಗತಿಯಲ್ಲಿದೆ. 

ಸಾವಿರ ಅಡಿ ಅಸ್ತ್ರ ವಿಫಲ: ಕಳೆದ ಜ.13 ರಂದು ಜಿಲ್ಲೆಯಲ್ಲಿ ಬರ ಅಧ್ಯಯನ ನಡೆಸಿದ್ದ ಸಚಿವ ಸಂಪುಟ ಉಪ ಸಮಿತಿ, ಸಮಸ್ಯೆ ಇರುವೆಡೆ 1,000 ದಿಂದ 1,200 ಅಡಿಗಳವರೆಗೆ ಬೋರ್‌ ಕೊರೆಸಲು, ಅಲ್ಲದೆ ರೀ-ಬೋರಿಂಗ್‌ ಸೂಚಿಸಿತ್ತು. ಅದರಂತೆ ದಾವಣಗೆರೆ ತಾಲೂಕಿನ 8ಕ್ಕೂ ಹೆಚ್ಚು ಕಡೆಯಲ್ಲಿ 800 ರಿಂದ 1 ಸಾವಿರದ ಅಡಿಯವರೆಗೆ ಬೋರ್‌ ಕೊರೆಸಿದ್ದರೂ ನಿರೀಕ್ಷಿತ ಪ್ರಮಾಣದಲ್ಲಿ ನೀರು ಸಿಕ್ಕಿಲ್ಲ. ಕೆಲವು ಕಡೆ 1 ಇಂಚು ನೀರು ಸಿಕ್ಕಿದೆ. ಕೆಲವು ತಾಂತ್ರಿಕ ಕಾರಣಕ್ಕೆ 1,000 ಅಡಿ ಮೇಲ್ಪಟ್ಟು ಬೋರ್‌ ಕೊರೆಸುವುದು ಸಾಧುವಲ್ಲ. ಬಿಲ್‌ ಇತರೆ ಕಾರಣಕ್ಕೆ ಭೂರ್ಗರ್ಭಶಾಸ್ತ್ರಜ್ಞರು ನೀಡುವ ರಿಪೋರ್ಟ್‌ ಅತೀ ಮುಖ್ಯ. ಈ ಹಿನ್ನೆಲೆಯಲ್ಲಿ ಸಾವಿರ ಅಡಿ ಕೊಳವೆಬಾವಿ ಕೊರೆಸುವ ಯೋಜನೆ ವೈಫಲ್ಯವೇ ಹೆಚ್ಚು.

ಸಮಸ್ಯಾತ್ಮಕ ಗ್ರಾಮಗಳು: ಜನವರಿಯಲ್ಲಿ ದಾವಣಗೆರೆ ತಾಲೂಕಿನಲ್ಲಿ 10 ಗ್ರಾಮಗಳನ್ನು ಸಮಸ್ಯಾತ್ಮಕ ಗ್ರಾಮಗಳು ಎಂದು ಗುರುತಿಸಲಾಗಿತ್ತು. ಫೆಬ್ರವರಿಯಲ್ಲಿ ಈ ಸಂಖ್ಯೆ 11ಕ್ಕೆ ಏರಿತ್ತು. ಮಾರ್ಚ್‌ನಲ್ಲಿ 16ಕ್ಕೆ ಏರಿದೆ. ಜೂನ್‌ ಮೊದಲ ವಾರಕ್ಕೆ ಈ ಗ್ರಾಮಗಳ ಸಂಖ್ಯೆ 29 ಆಗಲಿದೆ ಎಂದು ಅಂದಾಜಿಸಲಾಗಿದೆ.

ಬಹಳಾನೇ ಸಮಸ್ಯೆ …
ಹೆಬ್ಟಾಳು ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಹೊಸ ಬಡಾವಣೆಯಲ್ಲಿ ಬಹಳಾನೇ ಸಮಸ್ಯೆ ಇದೆ. ಟ್ಯಾಂಕರ್‌ ಮೂಲಕ ನೀರು ಕೊಡಲಾಗುತ್ತಿದೆ. ಹೆಬ್ಟಾಳು ಸಮೀಪದ ಕೆಂಚಮ್ಮನಹಳ್ಳಿಯಲ್ಲೂ ನೀರಿನ ಸಮಸ್ಯೆ ಇದೆ. ನೀರು ಅಷ್ಟೊಂದು ಟೇಸ್ಟ್‌ ಇಲ್ಲ. ಆದರೂ, ಅನಿವಾರ್ಯವಾಗಿ ಬಳಸುತ್ತಿದ್ದೇವೆ. ಚೆನ್ನಾಗಿ ಮಳೆ ಬರಬೇಕು. ಸಮಸ್ಯೆ ದೂರ ಆಗಬೇಕು. 
 ಶ್ರೀನಿವಾಸ್‌, ಹೆಬ್ಟಾಳು ಗ್ರಾಮಸ್ಥ.

ಹಣಕ್ಕೆ ಕೊರತೆ ಇಲ್ಲ 
ದಾವಣಗೆರೆ ತಾಲೂಕಿನ 7-8 ಗ್ರಾಮದಲ್ಲಿ ನೀರಿನ ಸಮಸ್ಯೆ ಇದೆ. ಟ್ಯಾಂಕರ್‌ ಮೂಲಕ ನೀರು ಒದಗಿಸಲಾಗುತ್ತಿದೆ. ಕೆಲವು ಗ್ರಾಮಗಳಲ್ಲಿ ಕೊಳವೆಬಾವಿ ಬಾಡಿಗೆ ಪಡೆಯಲಾಗಿದೆ. ಕುಡಿಯುವ ನೀರಿನ ಸಮಸ್ಯೆಗೆ ಮುಂಗಾರು ಹಂಗಾಮಿನಲ್ಲಿ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ 50, ಹಿಂಗಾರು ಹಂಗಾಮಿನಲ್ಲಿ 40 ಲಕ್ಷ ಅನುದಾನ ನೀಡಲಾಗಿದೆ. ಅನುದಾನದ ಕೊರತೆ ಇಲ್ಲ. 
 ಜಿ. ಸಂತೋಷ್‌ಕುಮಾರ್‌, ದಾವಣಗೆರೆ ತಹಶೀಲ್ದಾರ್‌

ನೀರು ಪೂರೈಕೆಗೆ ಕ್ರಮ
ಆನಗೋಡು ಜಿಲ್ಲಾ ಪಂಚಾಯತ್‌ ಕ್ಷೇತ್ರ ವ್ಯಾಪ್ತಿಯ ಕೆಲವಾರು ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ.
ಕೊಳವೆಬಾವಿ ಕೊರೆಸುವುದು, ಬೋರ್‌ ಬಾಡಿಗೆ ಪಡೆದು ನೀರಿನ ವ್ಯವಸ್ಥೆ ಮಾಡಲಾಗುತ್ತಿದೆ. ಸತತ ಎರಡು ವರ್ಷಗಳ ಕಾಲ ಬಿಟ್ಟು ಬಿಡದಂತೆ ಕಾಡುತ್ತಿರುವ ಬರದಿಂದ ಸಾಕಷ್ಟು ಸಮಸ್ಯೆ ನಿರ್ಮಾಣವಾಗುತ್ತಿದೆ.
 ಕೆ.ಎಸ್‌. ಬಸವಂತಪ್ಪ, ಆನಗೋಡು ಜಿಪಂ ಸದಸ್ಯ

ನೀರಿನ ಸಮಸ್ಯೆ ಅಷ್ಟಾಗಿ ಇಲ್ಲ
ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಅಷ್ಟಾಗಿ ಇಲ್ಲ. ನಾಗನೂರು ಬಹುಗ್ರಾಮ ಕುಡಿಯುವ ನೀರು ಯೋಜನೆ ಮೂಲಕ ಹಾಗೂ ಬೆಳವನೂರು, ತುರ್ಚಘಟ್ಟದಲ್ಲಿ ಹೊಸ ಕೆರೆಗಳ ನಿರ್ಮಾಣ ಆಗಿರುವುದಿಂದ ನೀರಿನ ಸಮಸ್ಯೆ ಇಲ್ಲ. ಸಮಸ್ಯೆ ಎದುರಾದಲ್ಲಿ ನಿವಾರಣೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು.
 ಶಾಮನೂರು ಶಿವಶಂಕರಪ್ಪ, ಶಾಸಕರು ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರ.

ಕೆಲಸ ನಡೆದಿದೆ
ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಓವರ್‌ ಹೆಡ್‌ ಟ್ಯಾಂಕ್‌ ನಿರ್ಮಾಣ, ಪೈಪ್‌ಲೈನ್‌ ಹಾಕುವ ಕೆಲಸ
ಮಾಡಲಾಗಿದೆ. ಈ ತನಕ ನೀರಿನ ಸಮಸ್ಯೆ ಬಹಳವಾಗಿ ಆಗಿಲ್ಲ. ಒಂದೊಮ್ಮೆ ಆದರೆ ಪರಿಹಾರಕ್ಕೆ ಏನು ಬೇಕೋ ಆ ಕೆಲಸ ಮಾಡಿಸಲಾಗುವುದು.
 ಎಸ್‌.ಎ. ರವೀಂದ್ರನಾಥ್‌, ಶಾಸಕರು ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರ.

ನೀರಿನ ಸಮಸ್ಯೆ ಇದೆ
ಮಾಯಕೊಂಡ ವಿಧಾನಸಭಾ ಕ್ಷೇತ್ರದ ಕೆಲವಾರು ಗ್ರಾಮಗಳಲ್ಲಿ ನೀರಿನ ಸಮಸ್ಯೆ ಇದೆ. ಟ್ಯಾಂಕರ್‌
ಮೂಲಕ ನೀರು ಕೊಡಲಾಗುತ್ತಿದೆ. ಹೊಸದಾಗಿ ಬೋರ್‌ ಕೊರೆಯುವುದು, ರೀ-ಬೋರಿಂಗ್‌, ಪೈಪ್‌ಲೈನ್‌ ಕೆಲಸ
ಮಾಡಿಸಲಾಗುತ್ತಿದೆ. 
 ಪ್ರೊ| ಎನ್‌. ಲಿಂಗಣ್ಣ, ಶಾಸಕರು ಮಾಯಕೊಂಡ ವಿಧಾನಸಭಾ ಕ್ಷೇತ್ರ. 

„ರಾ.ರವಿಬಾಬು

Advertisement

Udayavani is now on Telegram. Click here to join our channel and stay updated with the latest news.

Next