ರಾಯಚೂರು: ಕೃಷಿಕರು ಒಂದೆಡೆ ಇಳುವರಿ ಬಂದಿಲ್ಲ ಎಂದು ಪೇಚಾಡುವ ಹೊತ್ತಲ್ಲೇ ಉತ್ಪನ್ನಗಳಿಗೆ ಉತ್ತಮ ಬೆಲೆ ಸಿಗುತ್ತಿರುವುದು ಸಮಾಧಾನಕರ. ಈ ಬಾರಿ ಹತ್ತಿಗೂ ಭಾರೀ ಬೆಲೆ ಸಿಕ್ಕಿದ್ದು, ಬೆಳೆಗಾರರಿಗೆ ನಿಟ್ಟುಸಿರು ಬಿಡುವಂತಾಗಿದೆ.
ಕಳೆದ ತಿಂಗಳು ಜಿಲ್ಲೆಯ ವಿವಿಧೆಡೆ ಅಕಾಲಿಕ ಮಳೆ ಸುರಿದು ಬೆಳೆಗಳಿಗೆಲ್ಲ ಕುತ್ತುಂಟಾಯಿತು. ಇಳುವರಿ ಕಡಿಮೆಯಾಗಲು ಇದೇ ಪ್ರಮುಖ ಕಾರಣ ಎನ್ನಲಾಗುತ್ತಿದೆ. ಆದರೆ, ಕೆಲವೆಡೆ ಮಳೆ ಸುರಿದರೂ ಉತ್ತಮ ಇಳುವರಿ ಸಿಕ್ಕಿದೆ. ಫಸಲು ಕಡಿಮೆ ಬಂದಿರುವ ಕಡೆ ದರ ಹೆಚ್ಚಳ ಕೈ ಹಿಡಿದರೆ, ಉತ್ತಮ ಬೆಳೆ ಬೆಳೆದ ರೈತರಿಗೆ ಈ ಬಾರಿ ಶುಕ್ರದೆಸೆ ಎಂದೇ ಹೇಳಬೇಕು.
ಪ್ರತಿ ವರ್ಷ ಹತ್ತಿ ಮಾರುಕಟ್ಟೆ ಪ್ರಾಂಗಣಕ್ಕೆ ಸಾಲುಗಟ್ಟುತ್ತಿದ್ದ ವಾಹನಗಳು ಈ ಬಾರಿ ಅತ್ತ ಸುಳಿಯುವುದನ್ನು ಕಡಿಮೆ ಮಾಡಿವೆ. ಹತ್ತಿಗೆ ಎಲ್ಲಿಲ್ಲದ ಬೇಡಿಕೆ ಬಂದಿರುವ ಕಾರಣ ನೇರ ಮಿಲ್‌ಗಳಿಗೆ ಸಾಗಣೆ ಮಾಡುತ್ತಿದ್ದಾರೆ. ನಗರದ ರಾಯಚೂರು ಹತ್ತಿ ಗಂಜ್ ಮಾರುಕಟ್ಟೆ ಪ್ರಾಂಗಣದಲ್ಲಿ 111 ವರ್ತಕ ಮಳಿಗೆಗಳಿದ್ದವು. ಅದರಲ್ಲಿ ಅರ್ಧದಷ್ಟು ಅಂಗಡಿಗಳು ಸ್ಥಗಿತಗೊಂಡಿದ್ದು, ಉಳಿದವು ಮಾತ್ರ ಕಾರ್ಯ ನಿರ್ವಹಿಸುತ್ತಿವೆ. ಈ ಬಾರಿ ಅದರಲ್ಲೂ ಸಾಕಷ್ಟು ಅಂಗಡಿಗಳಿಗೆ ನಿರೀಕ್ಷಿತ ವ್ಯಾಪಾರ ನಡೆಯುತ್ತಿಲ್ಲ. ರೈತರು ನೇರವಾಗಿ ಮಿಲ್‌ಗಳಿಗೆ ಹೋಗುತ್ತಿದ್ದಾರೆ ಎನ್ನುತ್ತಾರೆ ವರ್ತಕರು.
ಕಳೆದ ವರ್ಷ ಭಾರತೀಯ ಹತ್ತಿ ನಿಗಮ (ಸಿಸಿಐ)ದಿಂದಲೇ 6,500 ರೂ.ಗೆ ಹತ್ತಿ ಖರೀದಿಸಲಾಗಿತ್ತು. ಆದರೆ, ಈ ವರ್ಷ ಕ್ವಿಂಟಲ್ ಹತ್ತಿ ದರ 10 ಸಾವಿರ ರೂ. ಗಡಿ ದಾಟಿದೆ. ಒಂದು ಕಾಲದಲ್ಲಿ ಅತಿ ಹೆಚ್ಚು ಹತ್ತಿ ಬೆಲೆಯುವ ಪ್ರದೇಶವಾಗಿದ್ದ ರಾಯಚೂರು ಜಿಲ್ಲೆಯಲ್ಲಿ ಕ್ರಮೇಣ ಹತ್ತಿ ಬೆಳೆ ಮಾಯವಾಗಿತ್ತು. ಈಚೆಗೆ ಮತ್ತೆ ಹತ್ತಿ ಬೆಳೆಯುತ್ತಿದ್ದು, ಈ ದರ ಹೆಚ್ಚಳ ರೈತರಿಗೆ ಮತ್ತಷ್ಟು ಪುಷ್ಟಿ ನೀಡಿದೆ.
ರಾಯಚೂರು ಮಾತ್ರವಲ್ಲದೇ, ಆಂಧ್ರ, ತೆಲಂಗಾಣ ಸೇರಿದಂತೆ ಅಕ್ಕಪಕ್ಕದ ಜಿಲ್ಲೆಗಳ ರೈತರು ರಾಯಚೂರಿಗೆ ಹತ್ತಿ ತರುತ್ತಿದ್ದಾರೆ. ಎಪಿಎಂಸಿ ಅಂಗಡಿಗಳಲ್ಲಿ ಮುಂಗಡ ಸಾಲ ಪಡೆದ ರೈತರು ಮಾತ್ರ ಮಾರುಕಟ್ಟೆಗೆ ಹತ್ತಿ ತಂದರೆ, ಸ್ವಾವಲಂಬೆಯಿಂದ ಕೃಷಿ ಮಾಡಿದ ಬಹುತೇಕರು ಎಲ್ಲಿ ಬೆಲೆ ಹೆಚ್ಚು ಸಿಗುತ್ತಿದೆಯೋ ಅಲ್ಲಿಯೇ ಮಾರುತ್ತಿದ್ದಾರೆ. ಕೃಷಿ ಮಾರುಕಟ್ಟೆ ವ್ಯವಸ್ಥೆಯನ್ನು ಸರ್ಕಾರ ಖಾಸಗೀಕರಣ ಮಾಡಿದ ಮೇಲೆ ನಾವು ಕೂಡ ನಿಯಂತ್ರಣ ಕಳೆದುಕೊಂಡಿದ್ದೇವೆ. ರೈತರು ತಮಗೆ ಹೆಚ್ಚಿನ ಲಾಭ ಸಿಕ್ಕಲ್ಲಿ ಮಾರಾಟ ಮಾಡಿಕೊಳ್ಳುತ್ತಿದ್ದಾರೆ ಎನ್ನುತ್ತಾರೆ ಎಪಿಎಂಸಿ ಅಧಿಕಾರಿಗಳು.
ಸಿಗದ ಕೂಲಿ ಕಾರ್ಮಿಕರು
ಇನ್ನೂ ಸಾಕಷ್ಟು ಜಮೀನುಗಳಲ್ಲಿ ಹತ್ತಿ ಬಿಡಿಸಲಾಗದೆ ಬಿಡಲಾಗಿದೆ. ಅದಕ್ಕೆ ಕೂಲಿ ಕಾರ್ಮಿಕರ ಕೊರತೆಯೇ ಮುಖ್ಯ ಕಾರಣ. ಈಗ ಕೂಲಿ ಲೆಕ್ಕದಲ್ಲಿ ಯಾರು ಕೆಲಸಕ್ಕೆ ಬರುತ್ತಿಲ್ಲ. ಕೆಜಿ ಹತ್ತಿಗೆ ಇಂತಿಷ್ಟು ಎಂದು ನೀಡಬೇಕು ಎನ್ನುತ್ತಿದ್ದಾರೆ. ಸದ್ಯಕ್ಕೆ ಕೆಜಿಗೆ 14 ರೂ. ನೀಡುತ್ತಿದ್ದು, ಒಬ್ಬ ಕೂಲಿ ಮಹಿಳೆ ನಿತ್ಯ 70-80 ಕೆಜಿ ಹತ್ತಿ ಬಿಡಿಸುತ್ತಿದ್ದಾರೆ. ಅಲ್ಲದೇ, ಎಲ್ಲರೂ ಒಂದೇ ಸಮಯದಲ್ಲಿ ಹತ್ತಿ ಬಿಡಿಸುತ್ತಿರುವ ಕಾರಣ ಸಮಯಕ್ಕೆ ಸರಿಯಾಗಿ ಕೂಲಿ ಕಾರ್ಮಿಕರೇ ಸಿಗುತ್ತಿಲ್ಲ. ಈ ಕಾರಣಕ್ಕೆ 40-50 ಕಿ.ಮೀ. ದೂರದಿಂದ ಕೂಲಿಯಾಳುಗಳನ್ನು ವಾಹನಗಳಲ್ಲಿ ಕರೆ ತರುವಂತ ಸ್ಥಿತಿ ಇದೆ.
ಜಿಲ್ಲೆಯಲ್ಲಿ ರೈತರು ಹತ್ತಿ ಹೆಚ್ಚಾಗಿ ಬೆಳೆದಿದ್ದು, ಹತ್ತಿ ಬಿಡಿಸಲು ಕೂಲಿ ಕಾರ್ಮಿಕರೇ ಸಿಗುತ್ತಿಲ್ಲ. ಕೇವಲ ಹತ್ತಿ ಬೆಲೆ ಮಾತ್ರವಲ್ಲ, ಕೂಲಿ ದರವೂ ಹೆಚ್ಚಾಗಿದೆ. ಅದರ ಜತೆಗೆ ಕ್ರಿಮಿನಾಶಕ ಸಿಂಪಡಣೆ ಸೇರಿದಂತೆ ಖರ್ಚುಗಳು ಹೆಚ್ಚಾಗಿದೆ. ಮಳೆ ಹೆಚ್ಚಾಗಿ ಇಳುವರಿ ಕಡಿಮೆಯಾಗಿದ್ದು, ಬೆಲೆ ಹೆಚ್ಚಾಗಿರುವುದು ರೈತರಿಗೆ ಅನುಕೂಲವಾಗಿದೆ.
-ಎನ್.ಲಕ್ಷ್ಮಣಗೌಡ ಕಡಗಂದೊಡ್ಡಿ, ರೈತ ಮುಖಂಡ