Advertisement

ಹತ್ತಿ, ತೊಗರಿ ಲಾಭ ತೆಗಿರೀ..

08:15 AM Feb 19, 2018 | |

ಶಿವಮೊಗ್ಗ ಜಿಲ್ಲೆಯ ಆಯನೂರು ಸಮೀಪದ ಉಬ್ಬನಹಳ್ಳಿಯ ಕುಮಾರ್‌ ಅಡಿಕೆ ಸಸಿಗಳ ನಡುವೆ ಹತ್ತಿ ಮತ್ತು ತೊಗರಿ ಕೃಷಿ ಮಾಡುತ್ತಿದ್ದಾರೆ. ಇದೇನು ವಿಚಿತ್ರ ಅನ್ನಬೇಡಿ. ಈ ಪ್ರಯೋಗವನ್ನು ಯಾರು ಬೇಕಾದರೂ ಮಾಡಿ ನೋಡಬಹುದು ಅನ್ನುತ್ತಾರೆ ಕುಮಾರ್‌. 

Advertisement

ಆಯನೂರಿನಿಂದ ಹಾರ್ನಹಳ್ಳಿ ಮೂಲಕ ಸವಳಂಗ ರಸ್ತೆಯಲ್ಲಿ ಸಾಗುವಾಗ ಹೆದ್ದಾರಿ ಪಕ್ಕದಲ್ಲಿಯೇ 1 ಎಕರೆ ಸ್ತೀರ್ಣದ ಇವರ ಹೊಲವಿದೆ. ಅಲ್ಲಿ ಕೊಳವೆ ಬಾವಿ ತೆಗೆಸಿ ನೀರಾವರಿ ವ್ಯವಸ್ಥೆ ರೂಪಿಸಿಕೊಂಡಿದ್ದಾರೆ ಕುಮಾರ್‌. ಕಳೆದ ವರ್ಷ ಏಪ್ರಿಲ್‌ ತಿಂಗಳ ಆರಂಭದಲ್ಲಿ ಅಡಿಕೆ ಸಸಿ ನೆಟ್ಟರು.  ನಡು ನಡುವೆ  ಬಾಳೆ,ಹತ್ತಿ ಮತ್ತು ತೊಗರಿ ಕೃಷಿ ಕೈಗೊಂಡರು.

ಅಡಿಕೆ ಸಸಿಗಳಿಂದ ಅರ್ಧ ಅಡಿ ಅಂತರ ಬಿಟ್ಟು ಸಾಲಿನಿಂದ ಸಾಲಿಗೆ ಮತ್ತು ಗಿಡದಿಂದ ಗಿಡಕ್ಕೆ 2 ಅಡಿ ಅಂತರ ಇರುವಂತೆ ಬಾಳೆ ಗಿಡ ಮತ್ತು ಹತ್ತಿ ಗಿಡ ಬೆಳೆಸಿದ್ದಾರೆ.  ಹೊಲದ ಗಡಿಯ ಸುತ್ತ ತೊಗರಿ ಸಸಿ ಬೆಳೆಸಿದ್ದಾರೆ.   550 ಅಡಿಕೆ ಸಸಿ, 300 ಬಾಳೆ ಗಿಡ ಮತ್ತು 350 ಹತ್ತಿ ಗಿಡ ಮತ್ತು 500 ತೊಗರಿ ಗಿಡದ ಕೃಷಿ ನಡೆಸಿದ್ದಾರೆ.  ಹತ್ತಿ ಗಿಡದ ಬಿತ್ತನೆ ಮಾಡಿ ಒಂದು ವಾರದಲ್ಲಿಯೇ ಮೊಳಕೆಯೊಡೆದು ಎರಡು ಎಲೆಗಳು ಕಾಣಿಸಿಕೊಂಡಿದ್ದವು. ಈ ಹಂತದಲ್ಲಿ 19:19 ಗೊಬ್ಬರ ಹಾಕಿ ಮಣ್ಣು ಏರಿಸಿ ಕೃಷಿ ನಡೆಸಿದರು. ನಂತರ ಪ್ರತಿ 25 ದಿನಕ್ಕೆ ಒಮ್ಮೆಯಂತೆ ಒಟ್ಟು 4 ಸಲ 20:20 ಕಾಂಪ್ಲೆಕ್ಸ್‌ ಗೊಬ್ಬರ ನೀಡಿ ಕೃಷಿ ಮುಂದುವರೆಸಿದರು. ಅಲ್ಲದೆ ಪ್ರತಿ 20 ದಿನಕ್ಕೆ ಒಮ್ಮೆಯಂತೆ 3 ಸಲ ಎಲೆ ಮತ್ತು ಕಾಂಡ ಕೊರಕ ನಿಯಂತ್ರಣ ಔಷಧ ಮತ್ತು ಹೂ ಮೊಗ್ಗು ಬಿಟ್ಟ ಸಮಯದಲ್ಲಿ ಪ್ರತಿ 10 ದಿನಕ್ಕೆ ಒಮ್ಮೆಯಂತೆ 2 ಸಲ ಕೀಟ ನಾಶಕ ಸಿಂಪಡಿಸಿದ್ದಾರೆ. 

ತೊಗರಿ ಬೀಜ ಬಿತ್ತನೆ ಮಾಡಿ ಸಸಿಯಾಗುತ್ತಿದ್ದಂತೆ ಕಾಂಪ್ಲೆಕ್ಸ್‌ ಗೊಬ್ಬರ ನೀಡಿ ಕೃಷಿ ಮುಂದುವರೆಸಿದರು. ತೊಗರಿ ಗಿಡಕ್ಕೆ ಪ್ರತಿ 3 ದಿನಕ್ಕೆ ಒಮ್ಮೆಯಂತೆ 3 ಸಲ ಗೊಬ್ಬರ ನೀಡಿದ್ದಾರೆ. ಈ ಪ್ರದೇಶದಲ್ಲಿ ಮಳೆ ಪ್ರಮಾಣ ಕಮ್ಮಿ. ಹೀಗಾಗಿ ಕೊಳವೆ ಬಾವಿ ನೆರವಾಗಿದೆ. 

ಲಾಭ ಹೇಗೆ ?
ಅಡಿಕೆ ಮತ್ತು ಬಾಳೆ ಸಸಿಗಳ ನಡುವೆ ಬೆಳೆದ ಹತ್ತಿ ಫ‌ಸಲು ಉತ್ತಮ ಆದಾಯ ನೀಡಿದೆ. ನವೆಂಬರ್‌ ಮೂರನೇ ವಾರದಿಂದ ಡಿಸೆಂಬರ್‌ 2 ನೇ ವಾರದ ವರೆಗೆ ಮೂರು ಹಂತದಲ್ಲಿ ಹತ್ತಿಯ ಫ‌ಸಲು ಕಿತ್ತಿದ್ದಾರೆ. 350 ಹತ್ತಿ ಗಿಡಗಳಿಂದ ಒಟ್ಟು  5 ಕ್ವಿಂಟಾಲ್‌ ಹತ್ತಿ  ದೊರೆತಿದೆ. ಕ್ವಿಂಟಾಲ್‌ ಒಂದಕ್ಕೆ ರೂ.7,500 ರೂ. ನಂತೆ ಮಾರಾಟವಾಗಿದೆ.  ಇದರಿಂದ ಇವರಿಗೆ ರೂ.37000ಅದಾಯ ದೊರೆತಿದೆ. ಬೀಜ ಖರೀದಿ, ಗೊಬ್ಬರ, ಕೂಲಿ ನಿರ್ವಹಣೆ, ಔಷಧ ಸಿಂಪಡಣೆ ಎಲ್ಲ ಲೆಕ್ಕ ಹಾಕಿದರೂ ಇವರಿಗೆ ರೂ.8 ಸಾವಿರ ಖರ್ಚಾಗಿದೆ. ರೂ.29 ಸಾವಿರ ನಿವ್ವಳ ಲಾಭ. ಇದರಂತೆ ಫೆಬ್ರವರಿ ಮೊದಲ ವಾರ ತೊಗರಿ ಫ‌ಸಲು ಕಟಾವು ಮಾಡಿ ಮಾರಾಟ ಮಾಡಿದ್ದಾರೆ. 400 ತೊಗರಿ ಗಿಡದಿಂದ ಗಿಡವೊಂದಕ್ಕೆ ಸರಾಸರಿ 1.5 ಕಿ.ಗ್ರಾಂ. ನಂತೆ 6 ಕ್ವಿಂಟಾಲ್‌ ತೊಗರಿ ಫ‌ಸಲು ದೊರೆತಿದೆ. ಕ್ವಿಂಟಾಲ್‌ ಒಂದಕ್ಕೆ ರೂ.6,000ನಂತೆ ಮಾರಾಟವಾಗಿದೆ. ಇದರಿಂದ ಇವರಿಗೆ ರೂ.36 ಸಾವಿರ ಆದಾಯ ದೊರೆತಿದೆ. ಖರ್ಚು ರೂ.8 ಸಾವಿರ ಬಂದಿದ್ದು ನಿವಳ ರೂ.28 ಸಾವಿರ ಲಾಭ. ಹೀಗೆ ಬಹುವಾರ್ಷಿಕ ಬೆಳೆಯ ಅಡಿಕೆ ಸಸಿಗಳ ನಡುವೆ ಅಂತರ್‌ ಬೆಳೆಯಾಗಿ ಇವರು ಹತ್ತಿ ಮತ್ತು ತೊಗರಿ ಕೃಷಿ ಮಾಡಿ  ಸುತ್ತಮುತ್ತಲ ರೈತರ ಗಮನ ಸೆಳೆದಿದ್ದಾರೆ.

Advertisement

ಮಾಹಿತಿಗೆ- 9945665928 

ಎನ್‌.ಡಿ.ಹೆಗಡೆ ಆನಂದಪುರಂ

Advertisement

Udayavani is now on Telegram. Click here to join our channel and stay updated with the latest news.

Next