Advertisement

ಅಡಕತ್ತರಿಯಲ್ಲಿದ್ದ “ಕೋಸ್ಟಲ್‌ಬರ್ತ್‌’ಗೆ ಮರುಜೀವದ ನಿರೀಕ್ಷೆ!

07:47 PM Aug 16, 2021 | Team Udayavani |

ಮಹಾನಗರ: ಕರಾವಳಿಯ ವಾಣಿಜ್ಯ ಚಟುವಟಿಕೆಗೆ ಹೊಸ ರೂಪ ನೀಡುವ ಆಶಯದೊಂದಿಗೆ ಸಾಗರಮಾಲ ಯೋಜನೆಯಡಿ ಮಂಗಳೂ ರಿನ ಬೆಂಗ್ರೆಯಲ್ಲಿ ಆರಂಭಿಸಲಾದ “ಕೋಸ್ಟಲ್‌ ಬರ್ತ್‌’ ಯೋಜನೆಯು ಹಲವು ತೊಡಕುಗಳ ಮೂಲಕ ಅಡಕತ್ತರಿಯಲ್ಲಿದ್ದು, ಸದ್ಯ ಮರು ಆರಂಭದ ನಿರೀಕ್ಷೆ ಮೂಡಿಸಿದೆ.

Advertisement

ಕಳೆದ ನವೆಂಬರ್‌ನಲ್ಲಿ ಯೋಜನೆ ಪ್ರಾರಂಭ ಗೊಂಡಿತ್ತಾದರೂ ಇಲ್ಲಿಯ ವರೆಗೆ ಈ ಯೋಜನೆಯಲ್ಲಿ ಆಗಿರುವ ಕೆಲಸ ಶೇ. 10 ಕೂಡ ಆಗಿಲ್ಲ!

ಕಾಮಗಾರಿಗೆ ವೇಗ ದೊರೆತಿರಲಿಲ್ಲ :

ಸ್ಥಳೀಯರ ಪ್ರತಿಭಟನೆ, ಬಂದರು ಇಲಾಖೆ ಸ್ಥಳವನ್ನು ಸಂಪೂರ್ಣವಾಗಿ ಹಸ್ತಾಂತರ ಮಾಡದ ಕಾರಣದಿಂದಾಗಿ ಯೋಜನೆ ಕಾಮಗಾರಿಗೆ ವೇಗ ದೊರೆತಿರಲಿಲ್ಲ. ಕೆಲಸವನ್ನು ನಿಧಾನ ಮಾಡಬಾರದು; ತ್ವರಿತವಾಗಿ ಕೈಗೊಂಡು ಮೂರು ವರ್ಷಗಳೊಳಗೆ ಮುಗಿಸಬೇಕು ಎಂದು ಶಿಲಾನ್ಯಾಸದ ವೇಳೆ ಗುತ್ತಿಗೆದಾರರಿಗೆ ಸೂಚಿಸಲಾಗಿತ್ತು. ಆದರೆ ಭೂಮಿ ಪೂಜೆ ನಡೆದು 8 ತಿಂಗಳುಗಳು ಕಳೆದರೂ ಕೆಲಸ ಮಾತ್ರ ನಿರೀಕ್ಷೆಯಷ್ಟು ಆಗಿರಲಿಲ್ಲ.

ಮತ್ತೂಂದೆಡೆ 29 ಕೋಟಿ ರೂ. ವೆಚ್ಚದಲ್ಲಿ ಬೆಂಗ್ರೆ ಬದಿಯಿಂದ ಅಳಿವೆ ಬಾಗಿಲಿನವರೆಗೂ 7 ಮೀಟರ್‌ ಆಳಕ್ಕೆ ಡ್ರೆಜ್ಜಿಂಗ್‌ ಯೋಜನೆಯೂ ಶಿಲಾನ್ಯಾಸ ಹಂತದಲ್ಲಿಯೇ ಬಾಕಿಯಾಗಿದೆ.

Advertisement

ನಾಡದೋಣಿ ಲಂಗರು ಹಾಕಿ ಪ್ರತಿಭಟನೆ :

ಕಾಮಗಾರಿಗೆ ಗ್ರಾಮಸ್ಥರಿಂದ ವಿರೋಧ ವ್ಯಕ್ತವಾಗಿತ್ತು. ಕೋಸ್ಟಲ್‌ಬರ್ತ್‌ ಕಾಮಗಾರಿ ನಾಡ ದೋಣಿಗಳ ತಂಗುದಾಣಗಳನ್ನು ಆಕ್ರಮಿಸುತ್ತದೆ. ಮೀನುಗಾರರ ಕೆಲವು ಮನೆಗಳನ್ನು ಪರಿಹಾರ ಇಲ್ಲದೆ ಒಕ್ಕಲೆಬ್ಬಿಸಲಾಗುತ್ತಿದೆ ಎಂದು ಆರೋಪಿಸಿ ಗ್ರಾಮದ ಸಾಂಪ್ರದಾಯಿಕ ಮೀನುಗಾರರು ತಮ್ಮ ದೋಣಿಗಳನ್ನು ಯೋಜನ ಪ್ರದೇಶದಲ್ಲಿ ಲಂಗರು ಹಾಕಿ ಮೂರು ತಿಂಗಳುಗಳಿಂದ ಫ‌ಲ್ಗುಣಿ ಸಾಂಪ್ರ ದಾಯಿಕ ಮೀನುಗಾರರ ಸಂಘದ ನೇತೃತ್ವದಲ್ಲಿ ಕಾಮಗಾರಿ ತಡೆಹಿಡಿದು ಹೋರಾಟ ನಡೆಸುತ್ತಿದ್ದಾರೆ. ದೋಣಿಗಳ ತೆರವು ಮಾಡಲು ಪ್ರಯತ್ನಿಸಿದರೂ ಹೋರಾಟಗಾರರು ಇದಕ್ಕೆ ಅವಕಾಶ ನೀಡಿರಲಿಲ್ಲ. ಹೀಗಾಗಿ ಕಾಮಗಾರಿ ನಡೆಸಲು ಸಾಧ್ಯವಾಗಿರಲಿಲ್ಲ.

ಜಿಲ್ಲಾಧಿಕಾರಿ ಮಧ್ಯಪ್ರವೇಶ :

ಯೋಜನ ಪ್ರದೇಶ, ಸಾಂಪ್ರದಾಯಿಕ ದೋಣಿ ತಂಗುದಾಣ, ಪರ್ಯಾಯವಾಗಿ ಗುರುತಿಸಿರುವ ನದಿ ದಂಡೆ, ತೆರವುಗೊಳ್ಳಲಿರುವ ಮನೆಗಳಿರುವ ಪ್ರದೇಶಗಳನ್ನು ಜಿಲ್ಲಾಧಿಕಾರಿಯವರು ಇದೀಗ ಪರಿಶೀಲಿಸಿದ್ದಾರೆ.

ನಾಡದೋಣಿ ತಂಗಲು ನದಿ ದಂಡೆಯಲ್ಲಿ ಪರ್ಯಾಯ ಜಾಗ ಗುರುತಿಸಿ ಅಲ್ಲಿಗೆ ಮೂಲಸೌಲಭ್ಯಗಳ ಜತೆಗೆ ಬಂದರು ಇಲಾಖೆಯ ಅಧೀನದ ಆ ಜಮೀನನ್ನು ಮೂರು ದಿನಗಳ ಒಳಗೆ ಮೀನುಗಾರಿಕೆ ಇಲಾಖೆಗೆ ಹಸ್ತಾಂತರಿಸಿ ನಾಡದೋಣಿಗಳ ಅಧಿಕೃತ ತಂಗುದಾಣವಾಗಿ ಆದೇಶ ಹೊರಡಿಸುವಂತೆ ಅಧಿಕಾರಿಗಳಿಗೆ ಅವರು ಸೂಚಿಸಿದ್ದಾರೆ. ಈ ಕಾರಣದಿಂದ ಕೆಲವೇ ದಿನದಲ್ಲಿ ಕೋಸ್ಟಲ್‌ಬರ್ತ್‌ ಕಾಮಗಾರಿ ಮರು ಆರಂಭವಾಗುವ ಸಾಧ್ಯತೆ ಗೋಚರಿಸುತ್ತಿದೆ.

65 ಕೋ.ರೂ.ಗಳ ಯೋಜನೆ : 
ಒಟ್ಟು 65 ಕೋಟಿ ರೂ. ಮೊತ್ತದ ಯೋಜನೆ ಇದಾಗಿದೆ. ಇಲ್ಲಿ ಹೊಸದಾಗಿ ಆಗುವ 350 ಮೀಟರ್‌ ಉದ್ದದ ಬರ್ತ್‌ನಲ್ಲಿ 5,000 ಟನ್‌ ಸಾಮರ್ಥ್ಯದವರೆಗಿನ 70 ಸರಕು ಹಡಗುಗಳನ್ನು ನಿಲ್ಲಿಸಬಹುದು. ವಾಣಿಜ್ಯ ದಕ್ಕೆ, ಎರಡು ಲೇನ್‌ನ ಕೂಡು ರಸ್ತೆ, ಪ್ರಯಾಣಿಕರ ಲೌಂಜ್‌, ಗೋದಾಮು ಇತ್ಯಾದಿಗಳೂ ಯೋಜನೆಯ ಭಾಗಗಳು. ಸರಕನ್ನು ಮಂಗಳೂರಿಗೆ ಹಾಗೂ ಮಂಗಳೂರಿನಿಂದ ಇತರ ಬಂದರುಗಳಿಗೆ ಸಾಗಿಸಲು ಇದು ನೆರವಾಗಲಿದೆ. ಹಳೆ ಬಂದರಿನಲ್ಲಿ ಜಾಗ ಇಕ್ಕಟ್ಟಾಗಿರುವುದರಿಂದ ಕೋಸ್ಟಲ್‌ ಬರ್ತ್‌ ಆಗಲಿದೆ.

ಕೋಸ್ಟಲ್‌ಬರ್ತ್‌ ಬಹು ಉಪಯೋಗಿ ಯೋಜನೆಯಾಗಿದೆ. ಪ್ರತಿಭಟನೆ ಸಹಿತ ಕೆಲವು ಕಾರಣಗಳಿಂದ ಇಲ್ಲಿ ಕಾಮಗಾರಿ ನಡೆಸಲು ಸಾಧ್ಯವಾಗಿರಲಿಲ್ಲ. ಈಗ ಜಿಲ್ಲಾಧಿಕಾರಿಗಳು ಪ್ರತಿಭಟನನಿರತರ ಜತೆಗೆ ಮಾತುಕತೆ ನಡೆಸಿದ್ದಾರೆ. ಹೀಗಾಗಿ ಮುಂದಿನ ದಿನದಲ್ಲಿ  ಯೋಜನೆ  ಮರು ಚಾಲನೆ ಪಡೆಯಲಿದೆ.  -ಸುಜನ್‌ ಚಂದ್ರ ರಾವ್‌,  ಸಹಾಯಕ ಕಾ.ನಿ. ಎಂಜಿನಿಯರ್‌ ಬಂದರು, ಮೀನುಗಾರಿಕಾ ಇಲಾಖೆ-ಮಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next