Advertisement

ಖರ್ಚಾಗದ ಅನುದಾನ: ಅಧಿಕಾರಿಗಳ ವಿರುದ್ಧ ಅಸಮಾಧಾನ

10:50 PM Jun 19, 2019 | Sriram |

ಮಡಿಕೇರಿ: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ವಿವಿಧ ಯೋಜನೆಗಳಿಗೆ ಬಿಡುಗಡೆಯಾದ ಅನುದಾನದ ಮೊತ್ತ ಸರ್ಕಾರಕ್ಕೆ ವಾಪಸ್‌ ಹೋಗಿರುವುದಕ್ಕೆ ವೀರಾಜಪೇಟೆ ತಾಲೂಕು ಪಂಚಾಯ್ತಿ ಸಾಮಾನ್ಯ ಸಭೆಯಲ್ಲಿ ಸದಸ್ಯರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

Advertisement

ಪೊನ್ನಂಪೇಟೆ ಸಾಮರ್ಥ್ಯಸೌಧದಲ್ಲಿ ವೀರಾಜಪೇಟೆ ತಾಲೂಕು ಪಂಚಾಯ್ತಿ ಅಧ್ಯಕ್ಷೆ ಬೊಳ್ಳಚಂಡ ಸ್ಮಿತಾ ಪ್ರಕಾಶ್‌ ಅಧ್ಯಕ್ಷತೆಯಲ್ಲಿ ನಡೆದ ವೀರಾಜಪೇಟೆ ತಾಲೂಕು ಪಂಚಾಯ್ತಿ ಸಾಮಾನ್ಯ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಸದಸ್ಯರುಗಳು ಅಧಿಕಾರಿಯ ನಿರ್ಲಕ್ಷ್ಯವನ್ನು ಖಂಡಿಸಿದರು.

ಅಂಗನವಾಡಿ ಕಟ್ಟಡಗಳ ಕಾಮಗಾರಿ ಪೂರ್ಣಗೊಂಡಿದ್ದರೂ ವಿವಿಧ ಕಾಮಗಾರಿಗಳ ರೂ. 2.4 ಲಕ್ಷ ಅನುದಾನ ಸರ್ಕಾರಕ್ಕೆ ವಾಪಸ್‌ ಹೋಗಿರುವುದರಿಂದ ಮೊದಲು ಹಣ ಖರ್ಚು ಮಾಡಿದ ಗುತ್ತಿಗೆದಾರರ ಆರ್ಥಿಕ ಸ್ಥಿತಿಗೆ ತೊಡಕಾಗಿದೆ. ಅನುದಾನ ಕೂಡ ಇಲಾಖೆ ನಿರ್ಲಕ್ಷ್ಯದಿಂದ ವಾಪಸ್‌ ಹೋಗಿರುವುದು ಅಧಿಕಾರಿಗಳ ಬೇಜವಾಬ್ದಾರಿಗೆ ಉದಾಹಣೆಯಾಗಿದೆ. ಇದರಿಂದ ಮುಂದಿನ ದಿನಗಳಲ್ಲಿ ಗುತ್ತಿಗೆದಾರರು ಕಾಮಗಾರಿ ಗುತ್ತಿಗೆ ಪಡೆಯಲು ಹಿಂದೇಟು ಹಾಕುವ ಸ್ಥಿತಿ ನಿರ್ಮಾಣವಾಗಲಿದೆ ಎಂದು ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು.

ಸದಸ್ಯ ಮಾಳೇಟೀರ ಪ್ರಶಾಂತ್‌ ಅವರು ಮಾತನಾಡಿ, ನಿವೇಶನ ರಹಿತರು ಎಂದು ಹೇಳಿಕೊಂಡು ಕೆದಮುಳ್ಳೂರು ವ್ಯಾಪ್ತಿಯಲ್ಲಿ ಕೂಡ ಹೊರಗಿನಿಂದ ಬಂದವರು ಸೇರಿಕೊಂಡಿದ್ದಾರೆ. ಅವರನ್ನು ಅಲ್ಲಿಂದ ತೆರವುಗೊಳಿಸಬೇಕು ಎಂದು ಹೇಳಿದರು. ನಿವೇಶನ ರಹಿತರಿಗೆ ಆಯಾ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ನಿವೇಶನ ಕಲ್ಪಿಸಬೇಕು ಈ ಬಗ್ಗೆ ಸ್ಥಳೀಯ ಪಂಚಾಯ್ತಿ ಕ್ರಮಕೈಗೊಳ್ಳಬೇಕು ಎಂಬ ನಿರ್ಣಯವನ್ನು ಸಭೆಯಲ್ಲಿ ತೆಗೆದುಕೊಳ್ಳಲಾಯಿತು.

ತಹಶೀಲ್ದಾರ್‌ ಬಾರದೆ ನಿರ್ಲಕ್ಷ್ಯ
ತಹಶೀಲ್ದಾರ್‌ ಸಭೆಗೆ ಬಾರದೆ ನಿರ್ಲಕ್ಷ್ಯ ಮಾಡುತ್ತಿರುವುದಕ್ಕೆ ಸದಸ್ಯರಿಂದ ಆಕ್ರೋಶ ವ್ಯಕ್ತವಾಯಿತು. ಒಟ್ಟಾಗಿ ನಿಯೋಗ ತೆರಳಿ ಕ್ರಮಕ್ಕೆ ಜಿಲ್ಲಾಧಿಕಾರಿಗಳನ್ನು ಒತ್ತಾಯಿಸಲು ಸದಸ್ಯರು ಒಮ್ಮತದ ನಿರ್ಧಾರ ತೆಗೆದುಕೊಂಡರು. ಮುಂದಿನ ದಿನಗಳಲ್ಲಿ ತಾಲೂಕು ಮಟ್ಟದ ಕಾರ್ಯಕ್ರಮಗಳನ್ನು ಬಹಿಷ್ಕರಿಸುವ ನಿರ್ಧಾರವನ್ನು ಸದಸ್ಯರು ಪ್ರಕಟಿಸಿದರು.

Advertisement

ತಹಶೀಲ್ದಾರ್‌ ಅವರಿಗೆ ವಿಶೇಷ ಆಹ್ವಾನ ನೀಡಲಾಗಿದೆ. ಆದರೂ ಗೈರು ಹಾಜರಾಗಿದ್ದಾರೆ ಎಂದು ಇಒ ಜಯಣ್ಣ ಮಾಹಿತಿ ನೀಡಿದರು.

ಜಾತಿ ಪ್ರಮಾಣಪತ್ರ ಪಡೆಯಲು ವಿಳಂಬ ವಾಗುತ್ತಿರುವುದರಿಂದ ತಾಲೂಕಿ ನಲ್ಲಿ ಸಾಕಷ್ಟು ವಿದ್ಯಾರ್ಥಿಗಳು ಸರ್ಕಾರಿ ಸವಲತ್ತು ನೀಡುವ ಶಾಲೆ ಸೇರಲು ಆಗುತ್ತಿಲ್ಲ. ಅನಾವಶ್ಯಕ ಮನೆಯಲ್ಲಿಯೇ ದಿನ ಕಳೆಯುವಂತಾಗಿದೆ ಎಂದು ಸದಸ್ಯರಾದ ಪಲ್ವಿನ್‌ ಪೂಣಚ್ಚ ಹಾಗೂ ಪ್ರಕಾಶ್‌ ಗಮನ ಸೆಳೆದರು.

ಕ‌ೂಡಲೇ ಕಾಮಗಾರಿ
ತಾಲೂಕಿನಲ್ಲಿ ಸುಮಾರು 36 ಮುಖ್ಯರಸ್ತೆ ಕಾಮಗಾರಿಗಳಿಗೆ ಹಣ ಬಿಡುಗಡೆಯಾದ ಕೂಡಲೇ ಕಾಮಗಾರಿ ನಡೆಸಲಾಗುವುದು ಎಂದು ಲೋಕೋಪಯೋಗಿ ಇಲಾಖೆ ಅಧಿಕಾರಿ ಮಾಹಿತಿ ನೀಡಿದರು. ಪಾಲಿಬೆಟ್ಟ-ಮೇಕೂರು ರಸ್ತೆ ಕಾಮಗಾರಿ ನವೆಂಬರ್‌ ತಿಂಗಳಿನಲ್ಲಿ ನಡೆಯಲಿದೆ ಎಂದು ಅಧಿಕಾರಿ ಮಾಹಿತಿ ನೀಡಿದರು. ಆಯಾ ಇಲಾಖೆವಾರು ನಡೆಯುವ ಕಾಮಗಾರಿಗಳ ಗುತ್ತಿಗೆದಾರರನ್ನು ತಾಲೂಕು ಪಂಚಾಯತ್‌ ಅಧಿಕಾರಿಗಳು ಕಚೇರಿಗೆ ಕರೆಸಿಕೊಳ್ಳುತ್ತಿರುವುದರಿಂದ ಗುತ್ತಿಗೆದಾರರಿಗೆ ತೊಂದರೆಯಾಗುತ್ತಿದೆ ಎಂದು ನೆಲ್ಲಿರ ಚಲನ್‌ ಅಧಿಕಾರಿಗಳಿಗೆ ಹೇಳಿದರು. ಆಯಾ ಇಲಾಖೆ ಮೂಲಕ ಅವರು ವ್ಯವಹರಿಸಿಕೊಳ್ಳಲಿ.ತಾಲೂಕು ಕಚೇರಿ ಸಿಬಂದಿ ಮಧ್ಯಪ್ರವೇಶ ಮಾಡುವುದರಿಂದ ಗುತ್ತಿಗೆದಾರರಿಗೆ ಆರ್ಥಿಕವಾಗಿ ತೊಂದರೆಯಾಗಿ ಅಭಿವೃದ್ಧಿ ಕುಂಠಿತಕ್ಕೆ ಕಾರಣವಾಗಲಿದೆ ಎಂದು ಹೇಳಿದರು. ಸಭೆಯಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷ ಜೆನ್ನಿಸ್‌, ಇಒ ಜಯಣ್ಣ ಮೊದಲಾದವರು ಉಪಸ್ಥಿತರಿತದ್ದರು.

ಸಬ್ಸಿಡಿ ಸಮಸ್ಯೆ
ಇಲಾಖೆಗಳ ಮೂಲಕ ಪರಿಶಿಷ್ಟ ಜಾತಿ, ಪಂಗಡದ ಫ‌ಲಾನುಭವಿಗಳಿಗೆ ಸಬ್ಸಿಡಿ ಮೂಲಕ ನೀಡುವ ವಸ್ತುಗಳು ಉಪಯೋಗಕ್ಕೆ ಬಾರದೆ ಫ‌ಲಾನುಭವಿಗಳ ಕರೆಯಿಂದ ಘಿತೊಂದರೆಯಾಗುತ್ತಿದೆ ಎಂದು ಸದಸ್ಯ ಅಜಿತ್‌ ಕರುಂಬಯ್ಯ ದೂರಿದರು. ಸಾಮಾಜಿಕ ಅರಣ್ಯ ಇಲಾಖೆ ಮೂಲಕ ವಿತರಣೆ ಮಾಡಿರುವ ಸೋಲಾರ್‌ ಲ್ಯಾಂಪ್‌ ಉರಿಯದೇ ಇರುವುದರಿಂದ ಫ‌ಲಾನುಭವಿಗಳು ಸಮಸ್ಯೆ ಹೇಳಿಕೊಳ್ಳುತ್ತಿದ್ದಾರೆ. ಮತ್ತೆ ಕುಕ್ಕರ್‌ ವಿತರಣೆ ಮಾಡುವ ಮೂಲಕ ತೊಂದರೆ ನೀಡಬೇಡಿ. ಸಬ್ಸಿಡಿ ಮೂಲಕ ನೀಡುವ ವಸ್ತುಗಳನ್ನು ಕಂಪೆನಿಗಳು ಪ್ರತ್ಯೇಕವಾಗಿ ತಯಾರಿ ಮಾಡುತ್ತಿವೆ. ಇದರಿಂದ ಕಳಪೆ ವಸ್ತು ಕೈಸೇರುವಂತಾಗಿದೆ ಎಂದು ಆರೋಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next