ನವದೆಹಲಿ: ಮುಂದಿನ ಒಂದು ವರ್ಷದ ವರೆಗೆ ಶೇ.30ರಷ್ಟು ಕಡಿಮೆ ವೇತನ ಸ್ವೀಕರಿಸಲಿದ್ದಾರೆ ರಾಷ್ಟ್ರಪತಿ ರಾಮನಾಥ ಕೋವಿಂದ್.
ಇದರ ಜತೆಗೆ ದೇಶೀಯವಾಗಿ ಕೈಗೊಳ್ಳಲಿರುವ ಅನಗತ್ಯ ಪ್ರವಾಸ ಮತ್ತು ಕಾರ್ಯಕ್ರಮಗಳನ್ನು ರದ್ದು ಮಾಡಲಿದ್ದಾರೆ.
ದೇಶದಲ್ಲಿ ಕೋವಿಡ್ ವೈರಸ್ ನಿಂದ ಉಂಟಾಗಿರುವ ಪರಿಸ್ಥಿತಿ ನಿಭಾಯಿಸುವ ನಿಟ್ಟಿನಲ್ಲಿ ರಾಷ್ಟ್ರಪತಿ ಭವನದಲ್ಲಿ ವೆಚ್ಚ ಕಡಿಮೆ ಮಾಡುವ ನಿಟ್ಟಿನಲ್ಲಿ ಈ ನಿರ್ಧಾರವನ್ನು ಅವರು ಕೈಗೊಂಡಿದ್ದಾರೆ.
ವಿದೇಶಿ ಗಣ್ಯರು, ರಾಷ್ಟ್ರಪತಿ ಪ್ರವಾಸಕ್ಕಾಗಿ ಖರೀದಿಸಲು ಉದ್ದೇಶಿಸಿದ್ದ ಹೊಸ ಲಿಮೋ ಸಿನ್ ಕಾರು ಖರೀದಿಗೆ ತಡೆ ನೀಡಿದ್ದಾರೆ.
ಪ್ರಸಕ್ತ ಆರ್ಥಿಕ ವರ್ಷದಲ್ಲಿ ರಾಷ್ಟ್ರಪತಿ ಭವನದ ಬಜೆಟ್‌ನಲ್ಲಿ ಶೇ.20 ರಷ್ಟು ವೆಚ್ಚವನ್ನು ತಗ್ಗಿಸಲು ವಿವಿಧ ಕ್ರಮಗಳನ್ನು ತೆಗೆದುಕೊಂಡಿದ್ದಾರೆ.
ಇದರ ಜತೆಗೆ ದುರಸ್ತಿ ಮತ್ತು ಇತರ ಮೇಲುಸ್ತುವಾರಿ ಕೆಲಸಗಳನ್ನು ಆದಷ್ಟು ಕಡಿಮೆಗೊಳಿಸಲೂ ನಿರ್ಧರಿಸಲಾಗಿದೆ. ರಾಷ್ಟ್ರಪತಿ ಭವನದಲ್ಲಿ ಆಯೋಜಿಸುವ ಕಾರ್ಯಕ್ರಮಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಸೂಚನೆ ನೀಡಿದ್ದಾರೆ.