Advertisement

ಕುಟೀರದಲ್ಲಿ ಆರಂಭವಾದ ಶಾಲೆಗೀಗ 103ರ ಸಂಭ್ರಮ

11:17 PM Dec 09, 2019 | Sriram |

19ನೆಯ ಶತಮಾನದ ಉತ್ತರಾರ್ಧದಲ್ಲಿ ಬ್ರಿಟಿಷ್‌ ಆಡಳಿತದಡಿ, ಊರ ಹಿರಿಯರ ಮುತುವರ್ಜಿಯಲ್ಲಿ ಸ್ಥಾಪನೆಗೊಂಡು ಈಗಲೂ ವಿದ್ಯೆಯ ಬೆಳಕನ್ನು ಪಸರಿಸುತ್ತಿರುವ ಹಲವು ಸರಕಾರಿ ಶಾಲೆಗಳು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿವೆ. ಈಗಿನ ಆಂಗ್ಲ ಮಾಧ್ಯಮ ಶಿಕ್ಷಣದ ಆಕರ್ಷಣೆಯ ನಡುವೆ ಈ ಶಾಲೆಗಳು ಸುತ್ತಮುತ್ತಲಿನ ಊರುಗಳಿಗೆ ಅಕ್ಷರಶಃ ಜ್ಞಾನ ದೇಗುಲಗಳೇ ಆಗಿವೆ. ಇಂತಹ ಶತಮಾನದ ಹಿರಿಮೆಯ ಕನ್ನಡ ಮಾಧ್ಯಮ ಸರಕಾರಿ ಶಾಲೆಗಳನ್ನು ಗುರುತಿಸಿ ಪರಿಚಯಿಸುವ ಪ್ರಯತ್ನ ನಮ್ಮದು.

Advertisement

ಬ್ರಹ್ಮಾವರ: ಇಲ್ಲಿನ ಈಗಿನ ಎಸ್‌.ಎಂ.ಎಸ್‌. ಚರ್ಚ್‌ ಬಳಿ ಕಲ್ಲಿನ ಕಟ್ಟೆ ಮೇಲೆ ಬೆಲ್ಲ ಮತ್ತು ನೀರು ಇಡಲಾಗುತ್ತಿತ್ತು. ಪ್ರಯಾಣಿಕರು ಅದನ್ನು ಸೇವಿಸಿ ದಣಿವಾರಿಸಿಕೊಳ್ಳುತ್ತಿದ್ದರು. ಪಕ್ಕದ ದೂಪದಕಟ್ಟೆಯಲ್ಲಿ ಹೊರೆ ಇಳಿಸಲೆಂದೇ ಎತ್ತರದ ಕಲ್ಲು ಇದ್ದಿತ್ತು..!

ಬೆಲ್ಲ ನೀರು ಇಡುತ್ತಿದ್ದ ಸ್ಥಳದ ಸಮೀಪ ಧರ್ಮಗುರುಗಳಾದ ವಂ| ಆರ್‌.ಝಡ್‌. ನೊರೊನ್ಹಾ ಅವರು ತಮ್ಮ ತರಕಾರಿ ತೋಟದ ಮೂಲೆಯಲ್ಲಿ ಒಂದು ಕುಟೀರ ಕಟ್ಟಿ 1916ರ ಅ.1ರಂದು ಸಿ.ಎಚ್‌.ಇ. ಇನ್ನುವ ವಿದ್ಯಾಸಂಸ್ಥೆ ಪ್ರಾರಂಭಿಸಿದರು. ಇದು ಮುಂದೆ ಕೊಸ್ಮೊಪೊಲಿಟನ್ ಹಿರಿಯ ಪ್ರಾಥಮಿಕ ಶಾಲೆಯಾಯಿತು. ಬಹಳಷ್ಟು ವರ್ಷ ಬೆಲ್ಲದ ಕಟ್ಟೆ ಶಾಲೆಯೆಂದೇ ಹೆಸರುವಾಸಿಯಾಗಿತ್ತು.

ಐರೋಡಿ, ಸಾಸ್ತಾನ, ಪಾಂಡೇಶ್ವರ, ಗುಂಡ್ಮಿ, ಹಂದಾಡಿ, ಕುಮ್ರಗೋಡು, ಮಟಪಾಡಿ, ಚಾಂತಾರು, ಹೇರೂರು, ಉಪ್ಪೂರು, ಬೈಕಾಡಿ, ಹೊನ್ನಾಳ, ಸಾಲಿಕೇರಿ, ಮಾಬುಕಳ, ಉಪ್ಪಿನಕೋಟೆಯಿಂದ ವಿದ್ಯಾರ್ಥಿಗಳು ಆಗಮಿಸುತ್ತಿದ್ದರು.

ವಿಶೇಷತೆಗಳು
ದಿ. ಮಾರ್ಷಲ್‌ ಡಿಸೋಜ ಅವರು ಶಾಲೆಯ ಮೊದಲ ಮುಖ್ಯ ಅಧ್ಯಾಪಕರಾಗಿದ್ದರು. ಅನಂತರ ವರ್ಷಗಳಲ್ಲಿ ರೆ.ಫಾ. ಕೆ.ಟಿ. ವರ್ಗಿಸ್‌ ಅವರು ಶಾಲೆ ಏಳಿಗೆಗಾಗಿ ಅವಿರತ ಶ್ರಮಿಸಿದ್ದರು.

Advertisement

ಈ ಶಾಲೆ ಪ್ರಾರಂಭಗೊಂಡ ಅನಂತರದ ವರ್ಷಗಳಲ್ಲಿ ಕೊಸೊ¾ಪಾಲಿಟನ್‌ ಹಿ.ಪ್ರಾ. ಶಾಲೆ ಉಪ್ಪಿನಕೋಟೆಯಲ್ಲಿ ಪ್ರಾರಂಭಿಸಲಾಯಿತು. ಹಾಗೂ ಈ ಶಾಲೆಯ ವಠಾರದಲ್ಲಿ ಎಸ್‌.ಎಂ.ಎಸ್‌. ನಾಮಾಂಕಿತದಲ್ಲಿ ಕನ್ನಡ ಮಾಧ್ಯಮ ಪ್ರೌಢಶಾಲೆ, ಪಪೂ ಕಾಲೇಜು, ಪದವಿ ಕಾಲೇಜು, ಪ್ರಾಥಮಿಕ ಹಾಗೂ ಪ್ರೌಢ ಆಂಗ್ಲ ಮಾಧ್ಯಮ ಶಾಲೆ ಸ್ನಾತಕೋತ್ತರ ಪದವಿ ಶಿಕ್ಷಣದ ವ್ಯವಸ್ಥೆ ಇದ್ದು ಒಟ್ಟು 4,309 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ.

ಸಾಧಕ ವಿದ್ಯಾರ್ಥಿಗಳು
ಯು. ಕೃಷ್ಣಮೂರ್ತಿ ರಾವ್‌ ಉಪ್ಪೂರು, ಆನಂದ ಶೆಟ್ಟಿ ಬೈಕಾಡಿ, ದುಬೈ ಉದ್ಯಮಿ ರೋಬರ್ಟ್‌ ಸಿಕ್ವೇರಾ ಸೇರಿದಂತೆ ನೂರಾರು ಮಂದಿ ಇಲ್ಲಿನ ವಿದ್ಯಾರ್ಥಿಗಳು ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಸಾಧನೆಗೈದಿದ್ದಾರೆ.

ಈಗ 70 ವಿದ್ಯಾರ್ಥಿಗಳು, ಮೂವರು ಖಾಯಂ ಶಿಕ್ಷಕರು, ಮೂವರು ಆಡಳಿತ ಮಂಡಳಿಯಿಂದ ನೇಮಿಸಲ್ಪಟ್ಟ ಶಿಕ್ಷಕರು ಸೇವೆ ಸಲ್ಲಿಸುತ್ತಿದ್ದಾರೆ. ಶಾಲೆ ಪ್ರಸ್ತುತ ಎಸ್‌.ಎಂ.ಎಸ್‌. ಚರ್ಚ್‌ನ ವಠಾರದಲ್ಲಿದ್ದು ಓ.ಎಸ್‌.ಸಿ. ವಿದ್ಯಾಸಂಸ್ಥೆಯ ಅಧೀನದಲ್ಲಿ ನಡೆಯುತ್ತಿದೆ.

ಮೂಲ ಸೌಕರ್ಯಗಳು:
ಸುಸಜ್ಜಿತ ಕೊಠಡಿಗಳು, ಕಂಪ್ಯೂಟರ್‌ ಶಿಕ್ಷಣದ ವ್ಯವಸ್ಥೆ, ಅಕ್ಷರದಾಸೋಹ ವ್ಯವಸ್ಥೆ, ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ, ವಾಚನಾಲಯ, ದೂರದ ವಿದ್ಯಾರ್ಥಿಗಳಿಗೆ ವಾಹನ ವ್ಯವಸ್ಥೆಯಿದೆ. ತರಗತಿಗೊಬ್ಬ ಶಿಕ್ಷಕರಿದ್ದಾರೆ. ಹೂ ತೋಟವಿದೆ. ಅಕ್ಷರದಾಸೋಹಕ್ಕಾಗಿ ತರಕಾರಿ ಕೃಷಿ ಮಾಡಲಾಗುತ್ತಿದೆ. ರಾಜ್ಯದ ವಿವಿಧ ಜಿಲ್ಲೆಯ ವಲಸೆ ವಿದ್ಯಾರ್ಥಿಗಳು ಸೇರಿದಂತೆ ನೇಪಾಳ, ಉತ್ತರ ಭಾರತದ ವಿದ್ಯಾರ್ಥಿಗಳೂ ವ್ಯಾಸಂಗ ಮಾಡುತ್ತಿರುವುದು ವಿಶೇಷ. ಹೆಸರಿಗೆ ತಕ್ಕಂತೆ ಜಾತ್ಯಾತೀತ ನೆಲೆಯಲ್ಲಿ ಶಾಲೆ ಬೆಳೆದು ಬಂದಿದೆ.ಕ್ರೈಸ್ತ ಧರ್ಮಗುರುಗಳ ನಾಯಕತ್ವದಲ್ಲಿ ಆರಂಭವಾಗಿ, ಸರ್ವಧರ್ಮಿಯರಿಗೂ ಜ್ಞಾನಾರ್ಜನೆ ನೀಡಿ, ಅವರ ಬಾಳನ್ನು ಹಸನಾಗಿಸಲು ಶ್ರಮಿಸುತ್ತಿದೆ.

ಈ ಜ್ಞಾನಮಂದಿರ ಕ್ರೈಸ್ತ ಧರ್ಮಗುರುಗಳ ನಾಯಕತ್ವದಲ್ಲಿ ಆರಂಭವಾಗಿ, ಸರ್ವಧರ್ಮೀಯರಿಗೂ ಜ್ಞಾನಾ ರ್ಜನೆ ನೀಡಿ, ಅವರ ಬಾಳನ್ನು ಹಸನಾಗಿಸಲು ಶ್ರಮಿಸುತ್ತಿದೆ. ಶಾಲೆಯ ಏಳಿಗೆಗೆ ಬೆನ್ನೆಲುಬಾಗಿ ನಿಂತಿರುವ ಶಾಲಾ ಆಡಳಿತ ಮಂಡಳಿ ಹಾಗೂ ಹಳೆ ವಿದ್ಯಾರ್ಥಿಗಳ ನಿರಂತರ ಸಹಕಾರ ಅವಿಸ್ಮರಣೀಯ.
-ಸುಮಿತ್ರಾ, ಮುಖ್ಯೋಪಾಧ್ಯಾಯಿನಿ

ಅಂದಿನ ದಿನಗಳಲ್ಲಿ ಶಿಕ್ಷಕರು ಮುತುವರ್ಜಿ ವಹಿಸಿ, ಸರ್ವಾಂಗೀಣ ಶಿಕ್ಷಣ ನೀಡಿ ವಿದ್ಯಾರ್ಥಿಗಳನ್ನು ರೂಪಿಸುತ್ತಿದ್ದರು. ಅದರಲ್ಲೂ ಫಾ. ವರ್ಗೀಸ್‌ ಅವರ ಅತ್ಯುತ್ತಮ ಪಾಠ, ಆದರ್ಶ, ಶಿಸ್ತು, ಉತ್ತಮ ಆಡಳಿತ, ವಿದ್ಯಾರ್ಥಿಗಳ ಮೇಲಿನ ಪ್ರೀತಿ ಮರೆಯಲಾಗದು..
-ಡಾ| ಮಹಾಬಲೇಶ್ವರ ರಾವ್‌
ಪ್ರಾಂಶುಪಾಲರು, ಡಾ. ಟಿ.ಎಂ.ಎ. ಪೈ ಶಿಕ್ಷಣ ಕಾಲೇಜು, ಉಡುಪಿ

- ಪ್ರವೀಣ್‌ ಮುದ್ದೂರು

Advertisement

Udayavani is now on Telegram. Click here to join our channel and stay updated with the latest news.

Next