Advertisement

ಟ್ಯಾಕ್ಸ್‌ ಹಣದಿಂದ ಭ್ರಷ್ಟಾಚಾರ: ಕಡಿವಾಣಕ್ಕೆ ಮನವಿ

10:12 AM Feb 26, 2018 | Team Udayavani |

ಕಲಬುರಗಿ: ದೇಶದಲ್ಲಿನ ಸಾರ್ವಜನಿಕರು ಕಟ್ಟುವ ಟ್ಯಾಕ್ಸ್‌ ಹಣ ರಾಜಕಾರಣಿಗಳ, ಅಧಿಕಾರಿಗಳ ಭ್ರಷ್ಟಾಚಾರಕ್ಕೆ ತುತ್ತಾಗುತ್ತಿದೆ. ಇದನ್ನು ತಡೆಯಲು ಬಿಜೆಪಿ ಏನು ಮಾಡುತ್ತದೆ ಎನ್ನುವ ಪ್ರಶ್ನೆಯೊಂದು ಕೆಲ ಕಾಲ ನಗರದ ಪಿಡಿಎ ಇಂಜಿನಿಯರಿಂಗ್‌ ಕಾಲೇಜಿನಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರ ಸಂವಾದ ಕಾರ್ಯಕ್ರಮವನ್ನು ಗಂಭೀರತೆಗೆ ದೂಡಿದ ಪ್ರಸಂಗ ರವಿವಾರ ಸಂಜೆ ನಡೆಯಿತು.

Advertisement

ಈ ಕುರಿತು ವೈದ್ಯೆ ಪ್ರತಿಮಾ ಕಾಮರೆಡ್ಡಿ ಅವರ ಪ್ರಶ್ನೆಗೆ ತುಂಬಾ ಸರಳವಾಗಿ ಉತ್ತರಿಸಿದ ಅಮಿತ್‌ ಶಾ, ದೇಶದಲ್ಲಿ ನಾವು(ಬಿಜೆಪಿ) ಅಧಿಕಾರಕ್ಕೆ ಬರುವ ಮುನ್ನ 3.5ಕೋಟಿ ಜನರು ಟ್ಯಾಕ್ಸ್‌ ಕಟ್ಟುತ್ತಿದ್ದರು. ಅದನ್ನು ಅಳೆದು, ತೂಗಿ, ಎಚ್ಚರಿಸಿ, ಅಂಜಿಸಿ ಈಗ 8 ಕೋಟಿಗೆ ತಂದಿದ್ದೇವೆ. ಅದಿನ್ನು ಹೆಚ್ಚಾಗಬೇಕು. ಆಗ ಮಾತ್ರವೇ ದೇಶದ ಸಮಗ್ರ ವಿಕಾಸಕ್ಕೆ ಸಾಧ್ಯವಾಗುತ್ತದೆ. ಆದರೂ, ಟ್ಯಾಕ್ಸ್‌ ಕಟ್ಟುವ ಜನರಿಗಾಗಿ ಹಲವಾರು ಆಕರ್ಷಕ ಯೋಜನೆ ಜಾರಿಗೆ ತರಲಾಗುತ್ತಿದೆ ಎಂದು ಹೇಳಿದರು. 

ಬಹುತೇಕ ಪ್ರಶ್ನೆಗಳಿಗೆ ತುಂಬಾ ಜಾಣತನದಿಂದ ಉತ್ತರಿಸಿದ ಅವರು, ವಿಸ್ತಾರವಾಗಿ ನನಗೆ ಡ್ರಾಪ್‌ ಮಾಡಿ ಮೇಲ್‌ ಮಾಡಿ ಎಂದು ಮುನ್ನಡೆದದ್ದು, ಪ್ರಶ್ನೆ ಕೇಳುಗರ ಉತ್ಸಾಹವನ್ನು ತುಸು ನಿಯಂತ್ರಿಸಿದ್ದು ಸುಳ್ಳಲ್ಲ. ಆದರೆ, ಕರ್ನಾಟಕದಲ್ಲಿ ಬಿಜೆಪಿ ಚುನಾವಣೆ ತಂತ್ರ ಏನಿರುತ್ತದೆ ಎನ್ನುವುದನ್ನು ಗುಪ್ತವಾಗಿಟ್ಟುಕೊಂಡದ್ದು ಚಾಣಕ್ಯನ ನೀತಿ ಅನಾವರಣವೂ ಆಯಿತು. 

ಈ ಭಾಗದ ತೊಗರಿ ಉದ್ಯಮ, ವಿಶೇಷ ಪ್ಯಾಕೇಜ್‌ ಮತ್ತು ಭಾವಾಂತರ ಯೋಜನೆ ಕುರಿತು ಎಚ್‌ಕೆಸಿಸಿಐ ಸದಸ್ಯ ಸಂತೋಷ ಲಂಗರ್‌, ಚಂದ್ರಶೇಖರ ತಲ್ಲಳ್ಳಿ ಅವರು ಕೇಳಿದ ಪ್ರಶ್ನೆಗೆ, ಅಮಿತ್‌ ಶಾ, ದೇಶದಲ್ಲಿ ತೊಗರಿ ಸೇರಿದಂತೆ ಬೇಳೆ ಕಾಳುಗಳನ್ನು ನಮ್ಮ ಸರಕಾರ ಮಾತ್ರವೇ ಬೆಂಬಲ ಬೆಲೆಯಲ್ಲಿ ಖರೀದಿ ಮಾಡುತ್ತಿದೆ. ರೈತರ ನೆರವಿಗೆ ಬರಲು ಉತ್ಪಾದನಾ ವೆಚ್ಚದ ಶೇ.1.5ರಷ್ಟು ಬೆಲೆ ನೀಡಲು ಬಜೆಟ್‌ನಲ್ಲಿ ಘೋಷಣೆ ಮಾಡಲಾಗಿದೆಯಲ್ಲ. ಭಾವಾಂತರ ಯೋಜನೆ ವ್ಯಾಪ್ತಿಗೆ ಕರ್ನಾಟಕವನ್ನು ತರುವ ನಿಟ್ಟಿನಲ್ಲಿ ಆಲೋಚನೆ ಇದೆ. ಇನ್ನೂ ವಿಶೇಷ ಪ್ಯಾಕೇಜ್‌ ನೀಡುವ ಯೋಚನೆ ಇಲ್ಲ. ಕ್ರಿಮಿನಾಶಕದ ಮೇಲಿನ ಶೇ|18ರ ಮಿತಿಯನ್ನು ಸಮರ್ಥನೆ ಮಾಡಿಕೊಂಡ ಅವರು, ದೇಶದಲ್ಲಿ ಈ ಹಿಂದೆ 17 ತರಹದ ಟ್ಯಾಕ್ಸ್‌ಗಳು, 23 ಸೆಸ್‌ಗಳು ಇದ್ದವು. ಅವುಗಳನ್ನು ಒಂದು ಮಾಡಿ ಜಿಎಸ್‌ಟಿ ತಂದಿದ್ದೇವೆ. 300 ವಸ್ತುಗಳನ್ನು ಶೇ. 18ರ ವ್ಯಾಪ್ತಿಯಿಂದ ಕೆಳಗೆ ಇಳಿಸಿದ್ದೇವೆ. ಇನ್ನಷ್ಟು ಇಳಿಸುವ ಮುನ್ಸೂಚನೆ ನೀಡಿದರು. ಡೆಂಟಿಸ್ಟ್‌ ಸುಧಾ ಅಲ್ಕಾಯಿ ಅವರು ಕೇಳಿದ ಡೆಂಟಲ್‌ ಕವರೇಜ್‌, ಪರಂಜೋಶಿ ಪಾಟೀಲ ಕೇಳಿದ ಕಡ್ಡಾಯ ಶಿಕ್ಷಣದ ಜತೆಯಲ್ಲಿ ಸ್ಕಿಲ್‌ ಬೇಸ್‌ ಶಿಕ್ಷಣ ಕಡ್ಡಾಯ ಮಾಡುವುದು, ಕೆಂದ್ರೀಯ ವಿವಿ ಪ್ರಾಧ್ಯಾಪಕ ಮಲ್ಲಿಕಾರ್ಜುನ ಅಳಗವಾಡಿ ಅವರ ಪ್ರಶ್ನೆಗಳನ್ನು ಆಲಿಸಿ ನೋಡಿ ಈ ಕುರಿತು ವಿವರವಾಗಿ ಪತ್ರವನ್ನು ಬರೆದು ನನಗೆ ಮೇಲ್‌ ಮಾಡಿ ಎಂದು ಹೇಳಿದರು. 

ಸ್ಮಾರ್ಟ್‌ಸಿಟಿ ಕುರಿತ ಆರ್ಕಿಟೆಕ್ಟ್ ಬಸವರಾಜ ಖಂಡೇರಾವ್‌ ಕೇಳಿದ ಪ್ರಶ್ನೆಗೆ, ಸ್ಮಾರ್ಟ್‌ ಸಿಟಿಗಾಗಿ ಒಂದಷ್ಟು ಮಾನದಂಡಗಳಿದ್ದವು. ಅವುಗಳನ್ನು ಪೂರ್ಣ ಮಾಡಿರುವ ನಗರಗಳು ಈ ಯೋಜನೆ ಅಡಿ ಬಂದಿವೆ. ಬನಾರಸ್‌ ಸಿಟಿಯೇ ಮೂರನೇ ಪಟ್ಟಿಯಲ್ಲಿ ಘೋಷಣೆಗೊಂಡಿದೆ. ಆದ್ದರಿಂದ ಇದಕ್ಕೆ ಇನ್ನೂ ಕಾಲವಿದೆ. ಬಿಜೆಪಿ ರಾಜ್ಯದಲ್ಲಿ ಅಧಿಕಾರಕ್ಕೆ ತನ್ನಿ ಆಗ ತಾನೇ ಸ್ಮಾರ್ಟ್‌ಸಿಟಿಯಾಗುತ್ತದೆ ಎಂದು ನಕ್ಕರು.

Advertisement

ಅನಂತಕುಮಾರ ದೇಶಪಾಂಡೆ ಅವರು ರೈಲ್ವೆ ಡಿವಿಷನ್‌ ಪ್ರಶ್ನೆಗೆ ಶಾಸಕ ದತ್ತಾತ್ರೇಯ ಪಾಟೀಲ ಕಡೆಗೆ ಬೆರಳು ತೋರಿಸಿದ ಅವರು, ಈ ಕುರಿತು ನನ್ನ ಬಳಿಯಲ್ಲಿ ಮಾಹಿತಿ ಇಲ್ಲ ಎಂದು ಮಾತು ಮುಗಿಸಿದರು. ಸಂವಾದಕ್ಕೆ ಬಹಳಷ್ಟು ಉದ್ಯಮಿಗಳು ಆಗಮಿಸಿದ್ದರೂ, ಸಿದ್ಧ ಪ್ರಶ್ನೆಗಳಿಗೆ ಮಾತ್ರವೇ ಅಮಿತ್‌ ಉತ್ತರಿಸಿದ್ದು, ಕಾಟಾಚಾರದ ಸಂವಾದ ಎನ್ನುವಂತೆ ಕಂಡುಬಂತು. 

Advertisement

Udayavani is now on Telegram. Click here to join our channel and stay updated with the latest news.

Next