ಕೆಂಭಾವಿ: ಭ್ರಷ್ಟಾಚಾರ ನಿಗ್ರಹ ದಳಕ್ಕೆ ಸಾರ್ವಜನಿಕರ ಸಹಕಾರ ಅಗತ್ಯ. ತಮ್ಮೆಲ್ಲ ಸಹಕಾರದೊಂದಿಗೆ ಭ್ರಷ್ಟಾಚಾರ ಮುಕ್ತ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದು ಯಾದಗಿರಿ ಜಿಲ್ಲಾ ಎಸಿಬಿ ಡಿವೈಎಸ್‌ಪಿ ವೀರೇಶ ಹೇಳಿದರು.
ಪಟ್ಟಣದ ಉಪ ತಹಶೀಲ್ದಾರ್ ಕಾರ್ಯಾಲಯದ ಆವರಣದಲ್ಲಿ ಸೋಮವಾರ ಕಂದಾಯ ಇಲಾಖೆ ಸಹಕಾರದೊಂದಿಗೆ
ಯಾದಗಿರಿ ಜಿಲ್ಲಾ ಭ್ರಷ್ಟಾಚಾರ ನಿಗ್ರಹ ದಳ ಆಯೋಜಿಸಿದ್ದ ಅರ್ಜಿ ಸ್ವೀಕಾರ ಹಾಗೂ ಜನ ಸಂಪರ್ಕ ವಿಶೇಷ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸಾರ್ವಜನಿಕ ಹುದ್ದೆ ಬಳಸಿಕೊಂಡು ನ್ಯಾಯಯುತವಾಗಿ ಮಾಡಬೇಕಾದ ಸಾರ್ವಜನಿಕ ಸೇವಾ ಕಾರ್ಯಕ್ಕೆ ಸರಕಾರಿ ಅಧಿಕಾರಿಗಳು ಲಂಚ ಪಡೆಯುವುದು ಅಥವಾ ಲಂಚದ ರೂಪದಲ್ಲಿ ಬೇರೆ ಪ್ರತಿಫಲ ಪಡೆಯುವುದು ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ 1988ರ ಪ್ರಕಾರ ಅಪರಾಧವಾಗುತ್ತದೆ. ಇಂಥಹ ಸಂದರ್ಭ ತಮಗೆ ಕಂಡು ಬಂದಲ್ಲಿ ಸಾರ್ವಜನಿಕರು ಹೆದರದೆ ನೇರವಾಗಿ ದೂರು ಸಲ್ಲಿಸಬಹುದು. ದೂರುದಾರರಿಗೆ ಸೂಕ್ತ ರಕ್ಷಣೆ ಕೊಡುವ ಹೊಣೆ ನಮ್ಮದಾಗಿರುತ್ತದೆ ಎಂದು ಹೇಳಿದರು.
ಭ್ರಷ್ಟಾಚಾರ ನಿಗ್ರಹಕ್ಕೆ ಕಾಯ್ದೆ 1988 ಒಂದೆ ಕಾನೂನು, ಉಳಿದಂತೆ ಯಾವುದೇ ಐಪಿಸಿ ಸೆಕ್ಸೆನ್ ಇರುವುದಿಲ್ಲ. ಸರಕಾರದ ಹಲವು ಯೋಜನೆಗಳ ಮೂಲಕ ಬಡವರಿಗೆ ದೊರೆಯುವ ಸೌಲಭ್ಯಗಳು ದೊರೆಯಬೇಕಾದರೆ ಅಧಿಕಾರಿಗಳು, ಅಧಿಕಾರಿಗಳ ಸಂಬಂಧಿಕರು, ಮಧ್ಯವರ್ತಿಗಳು ಯಾರೆ ಇದ್ದರೂ ಅವ್ಯವಹಾರದಲ್ಲಿ ಭಾಗಿಯಾದ ಎಲ್ಲರಿಗೂ ಶಿಕ್ಷೆ ಸಮಾನ್ಯವಾಗುತ್ತದೆ ಎಂದು ಹೇಳಿದರು.
ಭ್ರಷ್ಟಾಚಾರ ನಿಗ್ರಹ ದಳದ ಪಿಐ ಯಶವಂತ ಬಿಸನಾಳ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪ ತಹಶೀಲ್ದಾರ್ ರೇವಪ್ಪ, ಕಂದಾಯ ನಿರೀಕ್ಷಕ ರಾಜಾಸಾಬ್, ಭ್ರಷ್ಟಾಚಾರ ನಿಗ್ರಹ ದಳದ ಸಿಬ್ಬಂದಿ ಎಚ್‌ಸಿ ಸಾಬಣ್ಣ, ಪಿಸಿ ಗುತ್ತಪ್ಪಗೌಡ, ರವಿ ನಾಯಕ, ಕಂದಾಯ ಇಲಾಖಾ ಸಿಬ್ಬಂದಿ ಇದ್ದರು. ಕೆಂಭಾವಿ ಪಟ್ಟಣ ಸೇರಿದಂತೆ ಸುತ್ತಮುತ್ತಲ ಗ್ರಾಮದ ನೂರಾರು ಜನರು ಭಾಗವಹಿಸಿದ್ದರು.