Advertisement

ಭ್ರಷ್ಟಾಚಾರರಹಿತ, ನಿಷ್ಪ್ರಹ ಆಡಳಿತದ ತೃಪ್ತಿ

12:34 PM May 27, 2017 | Team Udayavani |

ಉಡುಪಿ: ಪಕ್ಷಭೇದ ಮರೆತು, ತಾರತಮ್ಯಗೈಯದೆ, ಯಾವುದೇ ರೀತಿಯ ಲಾಬಿಗೆ ಮಣಿಯದೆ, ಭ್ರಷ್ಟಾಚಾರ ರಹಿತ ನಿಷ್ಪ್ರಹ ಆಡಳಿತ ನೀಡುವ ಮೂಲಕ ಜನರ ಸಮಸ್ಯೆಗೆ ಸೂಕ್ತ ಸಮಯದಲ್ಲಿ ಸ್ಪಂದಿಸಿ ಸೇವೆಗೈದ ತೃಪ್ತಿ ನನಗಿದೆ ಎಂದು ಸಚಿವ ಪ್ರಮೋದ್‌ ಮಧ್ವರಾಜ್‌ ಹೇಳಿದರು.

Advertisement

ಉಡುಪಿ ಬೋರ್ಡ್‌ ಹೈಸ್ಕೂಲ್‌ ಸಭಾಂಗಣ (ಸ.ಪ.ಪೂ. ಕಾಲೇಜು)ದ‌ಲ್ಲಿ ಶುಕ್ರವಾರ ನಡೆದ ಉಡುಪಿ ನಗರ ಸಭೆ ವ್ಯಾಪ್ತಿಯ ಶಿರಿಬೀಡು ವಾರ್ಡ್‌ ಮಟ್ಟದ ಜನಸಂಪರ್ಕ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಉಡುಪಿ ವಿಧಾನಸಭಾ ಕ್ಷೇತ್ರ ಮತ್ತು ನಗರಸಭೆ ವ್ಯಾಪ್ತಿಯಲ್ಲಿ ಕಳೆದ 4 ವರ್ಷಗಳಿಂದ ಯಾವ ಇಲಾಖೆಯಡಿ ಯಾವ ಯೋಜನೆಯಡಿ ಯಾವ ಕಾಮಗಾರಿ ನಡೆದಿದೆ ಎಂಬ ವಿವರ, ಪರಾಮರ್ಶೆ, ಬಾಕಿ ಉಳಿದ ಕೆಲಸಗಳ ಬಗ್ಗೆ ಜನರು ನನ್ನಲ್ಲಿ ಪ್ರಶ್ನೆ ಕೇಳಿ ತಿಳಿದುಕೊಳ್ಳಬೇಕು ಎಂಬ ನೆಲೆಯಲ್ಲಿ ಜನಸಂಪರ್ಕ ಸಭೆ ನಡೆಸಲಾಗುತ್ತಿದೆ. ನಗರಸಭೆ ವ್ಯಾಪ್ತಿಯ ಪ್ರತಿ ಮನೆಗೂ ನೊಟೀಸು ನೀಡಿ ಪಕ್ಷಾತೀತವಾಗಿ ನಡೆಸಲಾಗುತ್ತಿರುವ “ಜನಸಂಪರ್ಕ ಸಭೆ’ಯಿಂದ ಜನತೆಗೆ ಸಹಕಾರಿ ಎಂದರು. 

ಜನರು ಸಮಸ್ಯೆ ಹೊತ್ತು ನನ್ನನ್ನು ಹುಡುಕುವುದು ಹಾಗೂ ನನ್ನನ್ನು ಕಾಣಲು ಅಲೆಯುವುದನ್ನು ತಪ್ಪಿಸಲು ಜನರಿದ್ದಲ್ಲಿಗೆ ವಿವಿಧ ಇಲಾಖಾಧಿಕಾರಿಗಳನ್ನು ಕರೆದೊಯ್ದು ಸಮಸ್ಯೆ ಆಲಿಸಿ ಪರಿಹರಿಸುವ ಉದ್ದೇಶದಿಂದ ಈ ಸಭೆ ಆಯೋಜಿಸಲಾಗಿದೆ. ಜನರು ಯಾವುದೇ ಸಂಕೋಚ ಇರಿಸಿಕೊಳ್ಳದೆ ಸಮಸ್ಯೆ, ಸಂಕಷ್ಟಗಳಿದ್ದಲ್ಲಿ ನೇರವಾಗಿ ಪ್ರಶ್ನಿಸಿ ಸೇವೆ ಪಡೆದುಕೊಳ್ಳಬಹುದು ಎಂದರು. 

ಫ‌ಲಾನುಭವಿಗಳಿಗೆ ಸವಲತ್ತು ವಿತರಣೆ 
ಇದೇ ಸಂದರ್ಭ ಸಚಿವರು ಅರ್ಹ ಫ‌ಲಾನುಭವಿಗಳಿಗೆ ವಿವಿಧ ಸವಲತ್ತುಗಳಾದ ಪಿಂಚಣಿ, ವಿಧವಾ ವೇತನ, ಸಂಧ್ಯಾ ಸುರಕ್ಷಾ, ಮನಸ್ವಿನಿ, ಅಂಗವಿಕಲ ವೇತನ, ಪ್ರೋತ್ಸಾಹಧನ ವಿತರಿಸಿದರು. ಗ್ರಾಮಸ್ಥರಿಂದ ಅಹವಾಲು ಅರ್ಜಿ ಸ್ವೀಕರಿಸಿದ ಸಚಿವರು ಬಹುತೇಕ ಅರ್ಜಿಗಳಿಗೆ ವಿವಿಧ ಇಲಾಖಾಧಿಕಾರಿಗಳ ಮುಖಾಂತರ ಸ್ಥಳದಲ್ಲಿಯೇ ಪರಿಹಾರ ಸೂಚಿಸಿದರು.

Advertisement

ನಗರಸಭೆ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ಉಡುಪಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಸತೀಶ್‌ ಅಮೀನ್‌ ಪಡುಕೆರೆ, ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಿ. ನರಸಿಂಹ ಮೂರ್ತಿ, ಶಿರಿಬೀಡು ವಾರ್ಡ್‌ ಸದಸ್ಯ, ವಿಪಕ್ಷ ನಾಯಕ ಡಾ| ಎಂ.ಆರ್‌. ಪೈ, ನಗರಸಭೆ ಸದಸ್ಯರಾದ ರಮೇಶ್‌ ಕಾಂಚನ್‌, ನಾರಾಯಣ ಕುಂದರ್‌, ಜನಾರ್ದನ್‌ ಭಂಡಾರ್ಕರ್‌, ಗಣೇಶ್‌ ನೇರ್ಗಿ, ಆರ್‌ಟಿಒ ಗುರುಮೂರ್ತಿ ಕುಲಕರ್ಣಿ, ಬ್ರಹ್ಮಾವರ ತಹಶೀಲ್ದಾರ್‌ ಪ್ರದೀಪ್‌ ಕುರುಡೇಕರ್‌ ಹಾಗೂ ವಿವಿಧ ಇಲಾಖಾಧಿಕಾರಿಗಳು ಉಪ ಸ್ಥಿತರಿದ್ದರು.

ನಗರಸಭೆ ಪೌರಾಯುಕ್ತ ಡಿ. ಮಂಜುನಾಥಯ್ಯ ಸ್ವಾಗತಿಸಿ ಪ್ರಸ್ತಾ ವನೆಗೈದರು. 
ಸುಧಾಕರ ಪೆರಂಪಳ್ಳಿ ಕಾರ್ಯ ಕ್ರಮ ನಿರೂಪಿಸಿದರು. 

ಕೊಟ್ಟ ಮಾತಿಗೆ ತಪ್ಪಿಲ್ಲ
ಜನರಿಂದ ಬಂದ ಬೇಡಿಕೆಗಳಿಗೆ ಸರಕಾರದಿಂದ ಅನುದಾನ ಲಭಿಸಿದಾಗ ಹಂತ ಹಂತವಾಗಿ ವಿವಿಧ ಕಾಮಗಾರಿ ಮಾಡಿಸಿ ಕೊಡಲಾಗುವುದು. ಸಚಿವನಾಗುವ ಮೊದಲು ಕೊಟ್ಟ ಮಾತಿನಂತೆ ಬಹುತೇಕ ಅವಶ್ಯ ಕಾಮಗಾರಿ ಮಾಡಿ ಪೂರೈಸಿದ ಹೆಮ್ಮೆ ನನಗಿದೆ. ಒಳಚರಂಡಿ, ಕುಡಿಯುವ ನೀರಿನ ವ್ಯವಸ್ಥೆಗೆ ಉಡುಪಿ ವಿಧಾನಸಭಾ ಕ್ಷೇತ್ರಕ್ಕೆ 320 ಕೋ. ರೂ., ನಗರೋತ್ಥಾನ ಕಾರ್ಯಕ್ಕೆ 35 ಕೋ. ರೂ. ಮಂಜೂರಾಗಿದೆ. 24 ಗಂಟೆ ವಿದ್ಯುತ್‌, 16,000 ಮಂದಿಗೆ ಬಿಪಿಎಲ್‌ ಕಾರ್ಡ್‌ ವಿತರಣೆ, 55 ನರ್ಮ್ ಬಸ್‌ಗಳಿಗೆ ಪರವಾನಿಗೆ ಹೀಗೆ ಹತ್ತು ಹಲವು ಕಾರ್ಯ ಮಾಡುವ ಮೂಲಕ ಜನರ ವಿಶ್ವಾಸಕ್ಕೆ ಪಾತ್ರವಾಗಿದ್ದೇನೆ. ಟೀಕೆ ಮಾಡುವವರ ಮಾತಿಗೆ ಕಿವಿಗೊಡದೇ “ಕರ್ತವ್ಯವೇ ದೇವರು’ ಎನ್ನುವ ನೆಲೆಯಲ್ಲಿ ಜನರ ಸೇವೆ ಮಾಡಲು ಬದ್ಧನಾಗಿದ್ದೇನೆ ಎಂದು ಸಚಿವರು ಭರವಸೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next