Advertisement

ಕರ ವಸೂಲಿಗೆ ನಿರ್ಲಕ್ಷ್ಯ ಸಲ್ಲ

05:55 PM May 26, 2018 | Team Udayavani |

ಯಾದಗಿರಿ: ಜಿಲ್ಲೆಯ ನಗರಸಭೆ ಮತ್ತು ಪುರಸಭೆ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಆಗದಂತೆ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ಕ್ರಮ ಕೈಗೊಳ್ಳುವ ಜೊತೆಗೆ ನೀರಿನ ಬಾಕಿ ಕರ ವಸೂಲಿ ಮಾಡಬೇಕು. ಇಲ್ಲದಿದ್ದರೆ ಸಂಬಂಧಪಟ್ಟ ಅಧಿಕಾರಿಗಳ ಸಂಬಳ ತಡೆ ಹಿಡಿಯಲಾಗುವುದು ಎಂದು ಜಿಲ್ಲಾಧಿಕಾರಿ ಜೆ. ಮಂಜುನಾಥ ಎಚ್ಚರಿಕೆ ನೀಡಿದರು. ನಗರದ ಜಿಲ್ಲಾಧಿಕಾರಿಗಳ ಕಾರ್ಯಾಲಯದ ಸಭಾಂಗಣದಲ್ಲಿ ಗುರುವಾರ ನಡೆದ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯ ಎಲ್ಲಾ ಯೋಜನೆಗಳ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

Advertisement

ರಾಜ್ಯ ಸರ್ಕಾರ ಕುಡಿಯುವ ನೀರಿನ ಸಂಬಂಧ ಯೋಜನೆಗಳಿಗೆ ಹೆಚ್ಚಿನ ಅನುದಾನ ಬಳಸಿ ಸೌಕರ್ಯಗಳನ್ನು ನೀಡುತ್ತಿದ್ದು, ಇವುಗಳ ನಿರ್ವಹಣೆಗಾಗಿ ತಿಂಗಳಿಗೆ ಕೇವಲ ಗೃಹಪಯೋಗಿ ಬಳಕೆಗೆ ರೂ. 120 ಹಾಗೂ ವಾಣಿಜ್ಯ ಬಳಕೆಗೆ ರೂ. 240ಗಳನ್ನು ನಿಗದಿಗೊಳಿಸಿದ್ದು, ಬಹುತೇಕ ಜನರು ಇದನ್ನು ಸಕಾಲದಲ್ಲಿ ನಗರ ಸ್ಥಳೀಯ ಸಂಸ್ಥೆಗಳಿಗೆ
ಪಾವತಿಸುತ್ತಿಲ್ಲ. ಸಂಬಂಧಪಟ್ಟ ಅಧಿಕಾರಿಗಳು ಸಹ ಇದನ್ನು ವಸೂಲು ಮಾಡಲು ಕ್ರಮ ವಹಿಸದಿರುವುದು ಪರಿಶೀಲನೆಯಲ್ಲಿ ಕಂಡು ಬಂದಿದೆ. ಈ ತಿಂಗಳ ಕೊನೆಯಲ್ಲಿ ಮತ್ತೂಮ್ಮೆ ನಗರ ಸ್ಥಳೀಯ ಸಂಸ್ಥೆಗಳ ಸಭೆ ಕರೆಯಲಾಗುವುದು. ಅಲ್ಲಿಯವರೆಗೆ ಶೇ. 90ರಷ್ಟು ಬಾಕಿ ಕರ ವಸೂಲಿ ಮಾಡಿರಬೇಕು ಎಂದು ಅವರು ನಗರಸಭೆ ಪೌರಾಯುಕ್ತರು ಮತ್ತು ಪುರಸಭೆ ಮುಖ್ಯಾಧಿಕಾರಿಗಳಿಗೆ ಸೂಚಿಸಿದರು.

ಯಾದಗಿರಿ, ಶಹಾಪುರ, ಸುರಪುರ ನಗರಸಭೆ ಹಾಗೂ ಗುರುಮಠಕಲ್‌, ಕೆಂಭಾವಿ, ಕಕ್ಕೇರಾ ಪುರಸಭೆ ವ್ಯಾಪ್ತಿಯಲ್ಲಿ
ಬಾಕಿ ಉಳಿದಿರುವ ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸಬೇಕು. 

ಗುತ್ತಿಗೆದಾರರು ಗುತ್ತಿಗೆ ಪಡೆದು ಕಾಮಗಾರಿ ನಿರ್ವಹಿಸದಿದ್ದಲ್ಲಿ ಅಂತಹವರನ್ನು ಕಪ್ಪು ಪಟ್ಟಿಗೆ ಸೇರಿಸಬೇಕು. ಆ ಕಾಮಗಾರಿಗಳನ್ನು ರದ್ದುಪಡಿಸುವ ಜೊತೆಗೆ ಹೊಸ ಟೆಂಡರ್‌ ಕರೆದು ಕಾಮಗಾರಿ ಕೈಗೊಳ್ಳಬೇಕು. ಅಲ್ಲದೇ, ವಿವಿಧ ಕುಡಿಯುವ ನೀರಿನ ಯೋಜನೆ, ಘನ ತ್ಯಾಜ್ಯ ವಿಲೇವಾರಿ ಘಟಕಗಳ ಸ್ಥಾಪನೆ, ಇತ್ಯಾದಿ ಕಾಮಗಾರಿಗಳಿಗಾಗಿ ಭೂ ಸ್ವಾಧೀನಕ್ಕೆ ಸಂಬಂಧಪಟ್ಟಂತೆ ಪ್ರಸ್ತಾವನೆ ಸಲ್ಲಿಸಬೇಕು. ಅಧಿಕಾರಿಗಳು ಕ್ರಿಯಾಶೀಲರಾಗಿ ತಮ್ಮ ತಮ್ಮ ಜವಾಬ್ದಾರಿಗಳನ್ನು ನಿಭಾಯಿಸಿದರೆ ಸಮಸ್ಯೆಗಳು ಉದ್ಬವಿಸುವುದಿಲ್ಲ ಎಂದು ಅವರು ಸಲಹೆ ನೀಡಿದರು.
 
ನಗರಸಭೆ ಪೌರಾಯುಕ್ತರು ಮತ್ತು ಪುರಸಭೆ ಮುಖ್ಯಾಧಿಕಾರಿಗಳು ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕುಡಿಯುವ ನೀರಿನ ಪ್ರಸ್ತುತ ಸ್ಥಿತಿ ಸೇರಿದಂತೆ ತಮ್ಮ ವ್ಯಾಪ್ತಿಯಲ್ಲಿ ಬರುವ ಹಲವು ಯೋಜನೆಗಳ ಪ್ರಗತಿ ಮತ್ತು ಕೈಗೊಳ್ಳಬೇಕಾದ ಕಾಮಗಾರಿಗಳ ಬಗ್ಗೆ ಸಭೆಯ ಗಮನಕ್ಕೆ ತಂದರು. 

ಈ ಸಂದರ್ಭದಲ್ಲಿ ಜಿಲ್ಲಾ ನಗರಾಭಿವೃದ್ಧಿ ಕೋಶದ ಕಾರ್ಯ ನಿರ್ವಾಹಕ ಅಭಿಯಂತರರಾದ ಮಲ್ಲಿಕಾರ್ಜುನ, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾದ ಬಂಡೆಪ್ಪ ಆಕಳ, ಯಾದಗಿರಿ ನಗರಸಭೆ ಪೌರಾಯುಕ್ತ ಸಂಗಪ್ಪ ಉಪಾಸೆ, ಶಹಾಪುರ ಮತ್ತು ಸುರಪುರ ನಗರಸಭೆ ಪೌರಾಯುಕ್ತರು, ಗುರುಮಠಕಲ್‌, ಕಕ್ಕೇರಾ ಹಾಗೂ ಕೆಂಭಾವಿ ಪುರಸಭೆ ಮುಖ್ಯಾಧಿಕಾರಿಗಳು, ಅಭಿಯಂತರರು ಸೇರಿದಂತೆ ಮುಂತಾದ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next