Advertisement

ಘೋಷಣೆಯಿಂದ ಭ್ರಷ್ಟಾಚಾರ ಮುಕ್ತ ಅಸಾಧ್ಯ

11:58 AM Apr 18, 2018 | |

ಬೆಂಗಳೂರು: ಭ್ರಷ್ಟಾಚಾರ ಮುಕ್ತ ಭಾರತ ಸ್ಥಾಪನೆ ಕೇವಲ ಘೋಷಣೆಯಿಂದ ಸಾಧ್ಯವಿಲ್ಲ. ಅದಕ್ಕೆ ಕಠಿಣ ನಿರ್ಧಾರ ಕೈಗೊಳ್ಳಬೇಕೆಂದು ಮಾಜಿ ಪ್ರಧಾನಿ ಹಾಗೂ ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಟಾಂಗ್‌ ನೀಡಿದ್ದಾರೆ. ಜೆಡಿಎಸ್‌ ಕಾನೂನು ಘಟಕದ ವತಿಯಿಂದ ನಗರದ ಅರಮನೆ ಮೈದಾನದಲ್ಲಿ ಮಂಗಳವಾರ ಏರ್ಪಡಿಸಿದ್ದ ರಾಜ್ಯಮಟ್ಟದ ವಕೀಲರ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು. 

Advertisement

ಲೋಕಪಾಲ್‌ ಸ್ಥಾಪಿಸಲು ವಿಫ‌ಲವಾಗಿರುವ ಕೇಂದ್ರ ಸರ್ಕಾರದ ಕ್ರಮವನ್ನು ಪ್ರಸ್ತಾಪಿಸಿದ ಅವರು, ಭ್ರಷ್ಟಾಚಾರ ತಡೆಯುವ ಮುನ್ನ ಅದಕ್ಕೆ ಅವಶ್ಯವಿರುವ ಕ್ರಮಗಳನ್ನು ಕೈಗೊಳ್ಳಬೇಕು. ಕೇವಲ ಘೋಷಣೆಯಿಂದ ಭ್ರಷ್ಟಾಚಾರ ಹೋಗಲಾಡಿಸಲು ಅಸಾಧ್ಯ ಎಂದರು.

ನಾನು ಪ್ರಧಾನಿಯಾಗಿದ್ದಾಗಲೇ ಲೋಕಪಾಲ್‌ ಸ್ಥಾಪಿಸುವ ಕುರಿತು ಸಂಪುಟ ಸಭೆಯಲ್ಲಿ ನಿರ್ಣಯ ಕೈಗೊಂಡಿದ್ದೆ. ಈ ಸಂದರ್ಭದಲ್ಲಿ ಪ್ರಧಾನಿಯೂ ಲೋಕಪಾಲ್‌ ವ್ಯಾಪ್ತಿಗೆ ಬರಬೇಕೆಂದು ನಿರ್ಧರಿಸಲಾಗಿತ್ತು. ಆದರೆ, ಅದನ್ನು ಮೂಲೆಗುಂಪು ಮಾಡಲಾಯಿತು.

ನಂತರದಲ್ಲಿ ಅಣ್ಣಾ ಹಜಾರೆ ಅವರು ಸಾಕಷ್ಟು ಹೋರಾಟ ಮಾಡಿದರಾದರೂ ಪ್ರಯೋಜನವಾಗಲಿಲ್ಲ. ಪ್ರಧಾನಿ ಮೋದಿ ಅವರ ಸರ್ಕಾರ ಭ್ರಷ್ಟಾಚಾರ ಮುಕ್ತ ಭಾರತ ಎಂದು ಹೇಳುತ್ತಿದೆಯೇ ಹೊರತು ಲೋಕಪಾಲ ಸ್ಥಾಪನೆಗೆ ಆಸಕ್ತಿ ತೋರುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಲೋಕಾಯುಕ್ತ ಸಂಸ್ಥೆಯನ್ನು ದುರ್ಬಲಗೊಳಿಸಿ ಎಸಿಬಿ ರಚಿಸಿದ ರಾಜ್ಯ ಸರ್ಕಾರದ ವಿರುದ್ಧವೂ ಕಿಡಿ ಕಾರಿದ ದೇವೇಗೌಡರು, ರಾಜ್ಯದಲ್ಲಿ ಜೆಡಿಎಸ್‌ ಅಧಿಕಾರಕ್ಕೆ ಬಂದರೆ ಲೋಕಾಯುಕ್ತ ಸಂಸ್ಥೆ ಮತ್ತೆ ಬಲಪಡಿಸಲಾಗುವುದು ಎಂದರು.

Advertisement

ದಾರಿ ತಪ್ಪಿದ ಮೂರು ಅಂಗಗಳು: ಪ್ರಜಾಪ್ರಭುತ್ವದ ಮೂರು ಅಂಗಗಳಾದ ಶಾಸಕಾಂಗ, ಕಾರ್ಯಾಂಗ ಮಾತ್ರವಲ್ಲ, ನ್ಯಾಯಾಂಗ ಕೂಡ ದಾರಿತಪ್ಪಿದೆ. ಇದರಿಂದಾಗಿ ಇಡೀ ವ್ಯವಸ್ಥೆಯೇ ಹಳಿ ತಪ್ಪಿದ್ದು, ಇದನ್ನು ಸರಿಪಡಿಸುವುದು ಸುಲಭವಲ್ಲ. ಹಳಿತಪ್ಪಿದ ವ್ಯವಸ್ಥೆಯನ್ನು ಮತ್ತೆ ಹಳಿಗೆ ತರುವ ಕೆಲಸ ಜನ ಸಾಮಾನ್ಯರಿಂದಲೇ ಆಗಬೇಕು.

ಇದು ತಕ್ಷಣಕ್ಕೆ ಸಾಧ್ಯವಿಲ್ಲವಾದರೂ ಮುಂದಿನ ದಿನಗಳಲ್ಲಿ ಆಗೇ ಆಗುತ್ತದೆ ಎಂಬ ವಿಶ್ವಾಸವಿದೆ ಎಂದರು. ಜೆಡಿಎಸ್‌ ಹಿರಿಯ ಉಪಾಧ್ಯಕ್ಷ ನಾರಾಯಣರಾವ್‌, ಮಾಜಿ ಸಚಿವರಾದ ಎಚ್‌.ವಿಶ್ವನಾಥ್‌, ಪಿ.ಜಿ.ಆರ್‌.ಸಿಂಧ್ಯಾ, ವಿಧಾನ ಪರಿಷತ್‌ ಸದಸ್ಯರಾದ ಬಸವರಾಜ ಹೊರಟ್ಟಿ, ಟಿ.ಎ.ಶರವಣ, ರಮೇಶ್‌ಬಾಬು,

ಶಾಸಕರಾದ ಮಧು ಬಂಗಾರಪ್ಪ, ಕೆ.ಗೋಪಾಲಯ್ಯ, ಜೆಡಿಎಸ್‌ ಕಾನೂನು ಘಟಕದ ಅಧ್ಯಕ್ಷ ಎ.ಪಿ.ರಂಗನಾಥ್‌ ಮತ್ತಿತರರು ಪಾಲ್ಗೊಂಡಿದ್ದರು. ಇದೇವೇಳೆ ಮೈಸೂರು ವಕೀಲರ ಸಂಘದ ಕಾರ್ಯದರ್ಶಿ, ಚಾಮುಂಡೇಶ್ವರಿ ಕ್ಷೇತ್ರದ ಸುರೇಶ್‌, ಬೆಂಗಳೂರು ವಕೀಲರ ಸಂಘದ ಕಾರ್ಯದರ್ಶಿ ಅನಿಲ್‌ ಭೋಸ್‌ ಸೇರಿ ಹಲವು ವಕೀಲರು ಜೆಡಿಎಸ್‌ ಸೇರ್ಪಡೆಯಾದರು.

ಆರು ನಿರ್ಣಯಗಳು: ಕರ್ನಾಟಕ ಲೋಕಾಯುಕ್ತಕ್ಕೆ ತಿದ್ದುಪಡಿ ತಂದು ಈ ಮೊದಲು ಇದ್ದ ಸಂಪೂರ್ಣ ಅಧಿಕಾರ ಮರುಸ್ಥಾಪಿಸಬೇಕು. ಯುವ ವಕೀಲರಿಗೆ ನೀಡುತ್ತಿರುವ ಪ್ರೋತ್ಸಾಹಧನವನ್ನು 2ರಿಂದ 5 ಸಾವಿರ ರೂ.ಗೆ ಹೆಚ್ಚಿಸಬೇಕು. ವಕೀಲರ ಪರಿಷತ್ತಿನ ಕಲ್ಯಾಣ ನಿಧಿಗೆ ಪ್ರತಿ ವರ್ಷ 100 ಕೋಟಿ ರೂ. ಅನುದಾನ ನೀಡಬೇಕು ಮತ್ತು ಪರಿಷತ್ತಿನ ಭವನ ನಿರ್ಮಾಣಕ್ಕೆ ಸಹಾಯಧನ ನೀಡಬೇಕು.

ವಕೀಲರಿಗೆ ನಿವೇಶನ ಮತ್ತು ಆರೋಗ್ಯ ವಿಮೆ ಒದಗಿಸಬೇಕು. ವಕೀಲರ ಸಂಘಕ್ಕೆ ನೀಡುವ ಅನುದಾನ ಹೆಚ್ಚಿಸಬೇಕು ಹಾಗೂ ಜಿಲ್ಲಾ ಮತ್ತು ತಾಲೂಕು ನ್ಯಾಯಾಲಯಗಳಲ್ಲಿ ಪ್ರಾಥಮಿಕ ಚಿಕಿತ್ಸಾಲಯ ಆರಂಭಿಸಬೇಕು ಎಂಬ ನಿರ್ಣಗಳನ್ನು ಸಮಾವೇಶದಲ್ಲಿ ಕೈಗೊಳ್ಳಲಾಯಿತು.

ರಾಜ್ಯದಲ್ಲಿ ಹದಗೆಟ್ಟ ಆಡಳಿತ ಸರಿಪಡಿಸಲು ವರ್ಷ ಬೇಕು
ಬೆಂಗಳೂರು:
ರಾಜ್ಯದಲ್ಲಿ ಜೆಡಿಎಸ್‌ ಅಧಿಕಾರಕ್ಕೆ ಬಂದರೂ ಇಲ್ಲಿನ ಅತ್ಯಂತ ಕೀಳುಮಟ್ಟದ ಆಡಳಿತ ವ್ಯವಸ್ಥೆ ಸರಿಪಡಿಸಲು ಕನಿಷ್ಠ ಒಂದು ವರ್ಷ ಬೇಕು ಎಂದು ಮಾಜಿ ಪ್ರಧಾನಿ ಹಾಗೂ ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಹೇಳಿದ್ದಾರೆ.

ಜೆಡಿಎಸ್‌ ಕಚೇರಿ ಜೆ.ಪಿ.ಭವನದಲ್ಲಿ ಮಂಗಳವಾರ ಕಾಂಗ್ರೆಸ್‌ ಮತ್ತು ಬಿಜೆಪಿ ತೊರೆದು ಬಿಜೆಪಿ ಸೇರಿದ ಪ್ರಮುಖರನ್ನು ಪಕ್ಷಕ್ಕೆ ಬರಮಾಡಿಕೊಂಡ ಬಳಿಕ ಮಾತನಾಡಿದ ಅವರು, ರಾಜ್ಯದಲ್ಲಿರುವ ಕೀಳುಮಟ್ಟದ ಆಡಳಿತ ವ್ಯವಸ್ಥೆಯಿಂದ ಜನತೆ ಬೇಸರಗೊಂಡಿ¨ªಾರೆ. ಇದೆಲ್ಲರ ನಡುವೆ ಜೆಡಿಎಸ್‌ ಅಧಿಕಾರಕ್ಕೆ ಬಂದರೂ ಅದನ್ನು ಸರಿಪಡಿಸಲು ಒಂದು ವರ್ಷ ಬೇಕು. ನಾನು ನಿಮ್ಮೊಂದಿಗಿದ್ದು, ಆ ನಿಟ್ಟಿನಲ್ಲಿ ಸಲಹೆ ನೀಡುತ್ತೇನೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next