ಕೋಲಾರ: ಭ್ರಷ್ಟಾಚಾರವೇ ಅಭಿವೃದ್ಧಿಗೆ ಮಾರಕ. ಭ್ರಷ್ಟಾಚಾರ ನಿರ್ಮಲನೆಗೆ ನಾವೆಲ್ಲರೂ ಕಂಕಣಬದ್ಧರಾಗೋಣ ಎಂದು ಕೋಲಾರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಕೆ.ಆರ್.ನಾಗರಾಜ್ ಸಲಹೆ ನೀಡಿದರು.
ಜಿಲ್ಲಾ ನ್ಯಾಯಾಲಯ ಸಂಕೀರ್ಣ ಕಟ್ಟಡದ ಮುಂದೆ ಏರ್ಪಡಿಸಿದ್ದ ಪ್ರತಿಜ್ಞಾ ಕಾರ್ಯಕ್ರಮದಲ್ಲಿ ಕೋಲಾರ ಜಿಲ್ಲೆಯ ನ್ಯಾಯಾಲಯಗಳ ನ್ಯಾಯಾಧೀಶರು ಹಾಗೂ ಸಿಬ್ಬಂದಿ ವರ್ಗವು ಭಾಗವಹಿಸಿ ಭ್ರಷ್ಟಾಚಾರ ನಿರ್ಮಲನೆಗೆ ನಾವೆಲ್ಲರೂ ಒಟ್ಟಾಗಿ ಸೇರಿ ಕೆಲಸ ಮಾಡೋಣ ಎಂದು ಕೋಲಾರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಕೆ.ಆರ್.ನಾಗರಾಜ್ ರವರ ಸಮಕ್ಷಮದಲ್ಲಿ ಪ್ರತಿಜ್ಞೆಯನ್ನು ಮಾಡಿದರು.
ಬಳಿಕ ಮಾತನಾಡಿದ ಅವರು, ಯಾವ ರಾಷ್ಟ್ರದಲ್ಲಿ ಭ್ರಷ್ಟಾಚಾರ ಮಿತಿ ಮೀರಿರುತ್ತದೆಯೋ ಅಲ್ಲಿ ಬಡತನ, ಗುಂಪುಗಾರಿಕೆ, ಸ್ವಜನ ಪಕ್ಷಪಾತ, ಕ್ಷುಲ್ಲಕ ರಾಜಕಾರಣ, ಗೂಂಡಾಪ್ರವೃತ್ತಿ ಅವತರಿಸಿರುತ್ತದೆ. ಈ ಎಲ್ಲದರ ಕಾರಣದಿಂದ ಅಲ್ಲಿ ನೈತಿಕ ಮೌಲ್ಯಗಳು ಕುಸಿದಿರುತ್ತದೆ. ಇದರಿಂದ ಆಡಳಿತ ಅಧಃಪತನ ಸಂಭವಿಸುತ್ತದೆ. ಒಟ್ಟಾರೆ ಆ ರಾಷ್ಟ್ರವು ವಿನಾಶದತ್ತ ಕ್ರಮೇಣ ಸಾಗುತ್ತದೆ ಎಂದರು.
ನಮ್ಮ ರಾಷ್ಟ್ರದಲ್ಲಿ ನಾಗರಿಕ ಸಮಾಜ ಅವತರಿಣಿಕೆ ಕಾಲದಿಂದಲೂ ನ್ಯಾಯವ್ಯವಸ್ಥೆಗೆ ಮೇರುಸ್ಥಾನವಿದೆ. ಇಂಥ ಶ್ರೇಷ್ಠ ಹಾಗೂ ಪ್ರಬುದ್ಧ ನ್ಯಾಯಿಕ ವ್ಯವಸ್ಥೆಗೂ ಭ್ರಷ್ಟಾಚಾರ ಕಾಲಿಡದಂತೆ ಕಾಯ್ದುಕೊಳ್ಳುವುದು ಇಡೀ ನ್ಯಾಯಾಂಗ ವ್ಯವಸ್ಥೆಗೆ ಒಳಪಡುವ ಪ್ರತಿಯೊಬ್ಬನ ಆಧ್ಯ ಕರ್ತವೇ ಆಗಿದೆ.
ಏಕೆಂದರೆ ನ್ಯಾಯಿಕ ಪ್ರಕ್ರಿಯೆಯತ್ತ ಯಾವೊಬ್ಬ ಬೆರಳು ಮಾಡಿದ ದಿನ-ಕ್ಷಣದಿಂದಲೂ ನ್ಯಾಯಾಂಗ ವ್ಯವಸ್ಥೆಯ ಘನತೆ-ಗೌರವ-ಶ್ರೇಷ್ಠತೆಗೆ ಖಂಡಿತಾ ಕುಂದುಂಟಾಗುತ್ತದೆ ಎಂದರು. ನೆರೆದ ಎಲ್ಲಾ ನ್ಯಾಯಾಧೀಶರು, ಸಿಬ್ಬಂಧಿವರ್ಗವು ಒಕ್ಕೊರಲಿನಿಂದ ಕೋಲಾರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಕೆ.ಆರ್.ನಾಗರಾಜ್ ಹೇಳಿಕೊಟ್ಟಂತೆ ಪ್ರತಿಜ್ಞೆ ಮಾಡಿದರು. ಎಲ್ಲಾ ನ್ಯಾಯಾಧೀಶರು, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸುನಿಲ ಹೊಸಮನಿ, ಭ್ರಷ್ಟಾಚಾರ ವಿರೋಧಿ ಹೋರಾಟ ವೇದಿಕೆಯ ಅಧ್ಯಕ್ಷ ಹಾಗೂ ವಕೀಲ ಕೆ.ನರೇಂದ್ರಬಾಬು ಹಾಜರಿದ್ದರು.