Advertisement

ಶಿಕ್ಷಣ ಕ್ಷೇತ್ರದಲ್ಲಿದೆ ಭ್ರಷ್ಟಾಚಾರ

02:26 PM Jun 25, 2018 | |

ಶಿವಮೊಗ್ಗ: ಹಣ ಮತ್ತು ರಾಜಕೀಯ ಪ್ರಭಾವವಿದ್ದರೆ ಶಿಕ್ಷಣ ಕ್ಷೇತ್ರದಲ್ಲಿ ಯಾವುದೇ ಹುದ್ದೆಗಳು ಸುಲಭವಾಗಿ ದೊರೆಯಲಿವೆ ಎಂದು ಕೆಎಸ್‌ಒಯು (ಕರ್ನಾಟಕ ರಾಜ್ಯ ಮುಕ್ತ ವಿವಿ) ವಿಶ್ರಾಂತ ಕುಲಪತಿ ಪ್ರೊ| ಕೆ.ಸುಧಾ ರಾವ್‌ ಹೇಳಿದರು.

Advertisement

ನಗರದ ಕರ್ನಾಟಕ ಸಂಘದಲ್ಲಿ ಶನಿವಾರ ಸಂಜೆ ತಿಂಗಳ ಅತಿಥಿ ಉಪನ್ಯಾಸ ಕಾರ್ಯಕ್ರಮದಲ್ಲಿ “ಶಿಕ್ಷಣದಲ್ಲಿ ಗುಣಮಟ್ಟ’ ಕುರಿತು ಮಾತನಾಡಿದ ಅವರು, ದೇಶದಲ್ಲಿ ಶಿಕ್ಷಣ ವ್ಯವಸ್ಥೆ ಸಂಪೂರ್ಣ ಬದಲಾವಣೆಯಾಗಿದೆ. ಹಣ ಪ್ರಾಮುಖ್ಯತೆ ವಹಿಸುತ್ತಿದೆ. ಹಣ ನೀಡಿದರೆ ಕುಲಪತಿ ಹುದ್ದೆ ದೊರಕುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ವಿಶ್ವವಿದ್ಯಾಲಯಗಳಲ್ಲಿ ಗುಣಮಟ್ಟ ಕುಸಿಯಲು ರಾಜಕಾರಣ ಕೂಡ ಕಾರಣವಾಗುತ್ತಿದೆ. ರಾಜಕಾರಣಿಗಳು ತಮ್ಮ
ಸ್ವಾರ್ಥಕ್ಕಾಗಿ ಹಣ ಕೊಟ್ಟು ವಿದ್ಯಾರ್ಥಿಗಳನ್ನು ಪ್ರತಿಭಟನೆಗಿಳಿಸುತ್ತಿದ್ದಾರೆ. ಇಂತಹ ಘಟನೆಗಳು ಶಿಕ್ಷಣ ವ್ಯವಸ್ಥೆಯನ್ನೇ ಬುಡಮೇಲು ಮಾಡುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಿದರು.

ಜಪಾನ್‌, ಸ್ವಿಜರ್ಲೆಂಡ್‌, ಅಮೆರಿಕ ಸೇರಿದಂತೆ ಇತರೆ ರಾಷ್ಟ್ರಗಳು ಅಭಿವೃದ್ಧಿ ಹೊಂದಲು ಅಲ್ಲಿನ ಶಿಕ್ಷಣ ವ್ಯವಸ್ಥೆ
ಕಾರಣವಾಗಿದೆ. ನಮ್ಮ ಮಕ್ಕಳಿಗೆ ಭಾರತದಲ್ಲಿ ಶಿಕ್ಷಣ ಕೊಡಿಸದೇ ವಿದೇಶಕ್ಕೆ ಕಳುಹಿಸುತ್ತಿದ್ದೇವೆ. ಆದರೆ ಶಿಕ್ಷಣ ಕಲಿತವರು ಅಲ್ಲಿಯೇ ಕೆಲಸಕ್ಕೆ ಸೇರಿಕೊಂಡು ಅಲ್ಲಿನ ಆರ್ಥಿಕ ಸ್ಥಿತಿಯನ್ನು ಉತ್ತಮ ಪಡಿಸುತ್ತಿದ್ದಾರೆ. ಇದರಿಂದ
ಭಾರತ ಮಾತ್ರ ಗುಣಮಟ್ಟದ ಶಿಕ್ಷಣದಲ್ಲಿ ಹಿಂದುಳಿಯುವಂತಾಗಿದೆ ಎಂದರು. ಉನ್ನತ ಹುದ್ದೆಗಳಲ್ಲಿರುವವರು ತಮ್ಮ ಕೆಲಸಗಳನ್ನು ಅಟ್ಟುಕಟ್ಟಾಗಿ ನಿರ್ವಹಿಸಿದರೆ ಶಿಕ್ಷಣ ವ್ಯವಸ್ಥೆ ಸರಿದಾರಿಗೆ ಬರುತ್ತದೆ. ಆ ಮೂಲಕ ನಮ್ಮವರಿಂದಲೇ ಶಿಕ್ಷಣ ಮತ್ತು ಸಂಸ್ಕೃತಿ ಗುಣಮಟ್ಟ ಹೆಚ್ಚಿಸುವಲ್ಲಿ ಜವಾಬ್ದಾರಿ ವಹಿಸಬೇಕಾಗಿದೆ ಎಂದು ಹೇಳಿದರು.

ಶಿಕ್ಷಣ ವ್ಯವಸ್ಥೆಯನ್ನು ಬಲಪಡಿಸಲು ನೈತಿಕತೆ ಮತ್ತು ಮೌಲ್ಯಗಳು ಮುಖ್ಯವಾಗುತ್ತದೆ. ಸಮಗ್ರತೆ, ಜವಾಬ್ದಾರಿ, ಕಾನೂನು ಮತ್ತು ನಿಯಮ, ಮಾಡುವ ಕೆಲಸಕ್ಕೆ ಗೌರವ ಕೊಡುವುದು, ಬೇರೆಯವರಿಗಿಂತ ಉತ್ತಮ ಕೆಲಸ ಮಾಡುವುದು, ಸಮಯಕ್ಕೆ ಬೆಲೆ ಕೊಡಬೇಕು ಶಿಕ್ಷಣದಲ್ಲಿ ಗುಣಮಟ್ಟ ಹೆಚ್ಚಿಸಲಿದೆ ಎಂದು ಪ್ರತಿಪಾದಿಸಿದರು. ಮಕ್ಕಳಿಗೆ ಮನೆ ಮತ್ತು ಶಾಲಾ ಕಾಲೇಜುಗಳಲ್ಲಿ ನೈತಿಕತೆ ಮತ್ತು ಮೌಲ್ಯ ಹೇಳಿಕೊಡಬೇಕು. ಆದರೆ, ಅದಕ್ಕೆ ಯಾರೊಬ್ಬರೂ ಸಮಯ ಕೊಡುತ್ತಿಲ್ಲ. ಪ್ರಸ್ತುತ ಶಿಕ್ಷಕರಲ್ಲೂ ಗುಣಮಟ್ಟದ ಕೊರತೆ ಕಂಡುಬರುತ್ತಿದೆ. 

Advertisement

ವಿದ್ಯಾರ್ಥಿ ದಿಸೆಯಿಂದಲೇ ಶೈಕ್ಷಣಿಕ ಅಡಿಪಾಯ ಭದ್ರಪಡಿಸಬೇಕು. ಕೇವಲ ಶೇ.35, 50 ಹಾಗೂ 60ರಷ್ಟು ಅಂಕ ಪಡೆದವರೇ ಮುಂದೊಂದು ದಿನ ಶಿಕ್ಷಕರಾಗುವ ಸಾಧ್ಯತೆಯೂ ಇದೆ. ಅಂತಹವರು ಮಕ್ಕಳಿಗೆ ಏನನ್ನು ಕಲಿಸಲು ಸಾಧ್ಯ ಎಂದು ಪ್ರಶ್ನಿಸಿದರು. ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ| ಡಿ.ಎಸ್‌. ಮಂಜುನಾಥ್‌ ಅಧ್ಯಕ್ಷತೆ ವಹಿಸಿದ್ದರು.
ಸಂಘದ ಗೌರವ ಕಾರ್ಯದರ್ಶಿ ಎಚ್‌.ಎಸ್‌. ನಾಗಭೂಷಣ್‌, ಕಮಲಾ ನೆಹರು ಕಾಲೇಜು ಪ್ರೊ| ಆಶಾಲತಾ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next