ಬೆಂಗಳೂರು : ವಿಧಾನಸಭೆಯಲ್ಲಿ ಶುಕ್ರವಾರ ಕಲಾಪದ ಆರಂಭದಲ್ಲಿ ಕೋರಂ ಕೊರತೆ ಕೊರಗು ಎಲ್ಲರನ್ನೂ ಕಾಡಿತು.ಒಂದೂ ತಾಸಿಗೂ ಹೆಚ್ಚು ಕಾಲ ಕೋರಂಗಾಗಿ ಸಚಿವರಾದಿಯಾಗಿ ಎಲ್ಲರೂ ಕಾದು ಸದಸ್ಯರ ನಿರಾಸಕ್ತಿಗೆ ಕೆಂಡಾಮಂಡಲವಾದರು.
ಕಾರ್ಯಕಲಾಪ ಪಟ್ಟಿ ಪ್ರಕಾರ ಬೆಳಿಗ್ಗೆ 10 ಗಂಟೆಗೆ ಸದನ ಆರಂಭವಾಗಬೇಕಿತ್ತು.9.50 ರಿಂದ 11.15 ರ ತನಕ ಸತತವಾಗಿ ಬೆಲ್ ಶಬ್ಧಮಾಡಿದರೂ ಅಗತ್ಯ ಕೋರಂ ಸದನದೊಳಗೆ ಸೇರಿರಲಿಲ್ಲ.ನಂತರ ಶೇಕಡ 10 ರಷ್ಟು ಸದಸ್ಯರ ಕೋರಂ ಭರ್ತಿಯಾದಾಗ ಕಲಾಪ ಪ್ರಾರಂಭವಾಯಿತು.
ಪ್ರತಿಪಕ್ಷನಾಯಕ ಜಗದೀಶ್ ಶೆಟ್ಟರ್ ಕಲಾಪದ ಆರಂಭದಲ್ಲಿ ಸಚಿವರ ಗೈರು ಬಗ್ಗೆ ಅತೃಪ್ತಿ ವ್ಯಕ್ತಪಡಿಸಿದರು.ಸಚಿವರು ಸದನದಲ್ಲೂ ಇರಲ್ಲವೆಂದರೆ ಎಲ್ಲಿ ಹೋಗುತ್ತಾರೆಂದು ಪ್ರಶ್ನಿಸಿದರು.ಈ ಸಂದರ್ಭದಲ್ಲಿ ಉಪಸಭಾಧ್ಯಕ್ಷರು ಸಚಿವರಾದ ಡಿ.ಕೆ ಶಿವಕುಮಾರ್, ರಮೇಶ್ ಜಾರಕಿಹೊಳಿ,ಎಸ್.ಎಸ್ ಮಲ್ಲಿಕಾರ್ಜುನ,ಸಂತೋಷ ಲಾಡ್,ರುದ್ರಪ್ಪ ಲಮಾಣಿ,ಶರಣ ಪ್ರಕಾಶ್ ಪಾಟೀಲ್ ಸೇರಿದಂತೆ 8 ಜನ ಸಚಿವರು ಗೈರು ಹಾಜರಾಗುವುದಕ್ಕೆ ಅನುಮತಿ ಪಡೆದಿದ್ದಾರೆಂದು ಸದನಕ್ಕೆ ಮಾಹಿತಿ ನೀಡಿದರು.ಇದಕ್ಕೆ ಶೆಟ್ಟರ್ ಪ್ರತಿಕ್ರಿಯಿಸಿ ತುರ್ತು ಸಂದರ್ಭಸಚಿವರ ಗೈರು ಬಗ್ಗೆ ಅನುಮತಿ ನಿಡಬಾರದು ಎಂದು ಒತ್ತಾಯಿಸಿದರು.
ಹಿರಿಯ ಸಚಿವ ರಮೆಶ್‌ಕುಮಾರ್,ಶೆಟ್ಟರ್ ಮಾತಿಗೆ ದನಿಗೂಡಿಸಿ ಗಂಟೆಗೂ ಹೆಚ್ಚು ಹೊತ್ತು ಬೆಲ್ ಹೊಡೆದರೂ ಕನಿಷ್ಟ ಸಂಖ್ಯೆಯ ಸದಸ್ಯರು ಸದನಕ್ಕೆ ಬಾರದಿರುವ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿದರು. ಕೋರಂ ಗಾಗಿ ನಾನು ಒಂದು ತಾಸಿಗೂ ಹೆಚ್ಚು ಕಾಲ ಕಾದೆ. ಹೀಗೆ ಆದರೆ ಸದನದ ಗಾಂಭೀರ್ಯ ಕಳೆದುಕೊಳ್ಳುತ್ತದೆ ಆಗ ಕಲಾಪಕ್ಕೇನು ಮರ್ಯಾದೆ ಇರುತ್ತದೆ ಎಂದು ಸಭಾಧ್ಯಕ್ಷರ ಪೀಠದಲ್ಲಿ ಕುಳಿತಿದ್ದ ಉಪಸಭಾಧ್ಯಕ್ಷರನ್ನು ಪ್ರಶ್ನಿಸಿದರು.ಅಗತ್ಯ ಕೋರಂ ಇಟ್ಟುಕೊಂಡು ತಾಂತ್ರಿಕವಾಗಿ ಸದನ ನಡೆಸಿದರೆ ಅದಕ್ಕೆ ಅರ್ಥವಿರುತ್ತದೆಯೇ ಎಂದು ಖಾರವಾಗಿ ಪ್ರಶ್ನಿಸಿದರು.
ಸಚಿವ ರಮೆಶ್‌ಕುಮಾರ್ ಮಾತಿಗೆ ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಸಹಮತ ವ್ಯಕ್ತಪಡಿಸಿ ಮಾತನಾಡುತ್ತ ನಾನು 25 ವರ್ಷಗಳಿಂದ ಸದನಕ್ಕೆ ಬರುತ್ತಿದ್ದೇನೆ ಇಂತಹ ಪರಿಸ್ಥಿತಿ ಎಂದೂ ನೋಡಿದ್ದಿಲ್ಲ.ಕೋರಂಗೆ ಅಗತ್ಯವಿರುವಷ್ಟು ಶಾಸಕರು ಅಧಿವೇಶನಕ್ಕೆ ಬರುವುದಿಲ್ಲವೆಂದರೆ ಹೇಗೆಂದು ಖೇದ ವ್ಯಕ್ತಪಡಿಸಿದರು.