ಹುಬ್ಬಳ್ಳಿ: ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ. ಇದಕ್ಕೆ ಪೊಲೀಸ್ ಅಧಿಕಾರಿಗಳು ಠಾಣೆಗಳಿಗೆ ವರ್ಗವಾಗಿ ಬರಲು ಹಣ ಕೊಟ್ಟು ಬಂದಾಗ ಅವರಿಂದ ಏನು ನಿರೀಕ್ಷೆ ಮಾಡಲು ಸಾಧ್ಯ ಎಂದು ವಿಧಾನಸಭೆ ವಿಪಕ್ಷ ಉಪ ನಾಯಕ ಅರವಿಂದ ಬೆಲ್ಲದ ಗಂಭೀರ ಆರೋಪ ಮಾಡಿದರು.
ಮೃತ ಅಂಜಲಿ ನಿವಾಸಕ್ಕೆ ರವಿವಾರ ಭೇಟಿಕೊಟ್ಟು ಅವರ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಪೊಲೀಸರು ಹಣ ಕೊಟ್ಟು ಠಾಣೆಗೆ ಬರುವಂತಾದಾಗ ಅವರು ದುಡ್ಡು ಹೇಗೆ ತೆಗೆಯಬೇಕು. ಆಗ ಪೊಲೀಸರೇ ಸ್ವತಃ ಗಾಂಜಾ ಮಾರಲ್ಲ, ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಭಾಗಿಯಾಗಲ್ಲ. ಬೇರೆಯವರ ಮೂಲಕ ಅಕ್ರಮ ಚಟುವಟಿಕೆ ನಡೆಸಿ ಹಣ ವಸೂಲಿ ಮಾಡುತ್ತಾರೆ. ಇದು ಸರ್ಕಾರಕ್ಕೆ ಗೊತ್ತಾಗಲ್ಲವೇ? ಕೊಲೆ, ಅಪರಾಧ ಚಟುವಟಿಕೆಗಳು ನಡೆಯಲು ಭ್ರಷ್ಟಾಚಾರವೇ ಮುಖ್ಯ ಕಾರಣ. ಭ್ರಷ್ಟಾಚಾರ ನಿಲ್ಲಿಸಿದಾಗ ಮಾತ್ರ ಹತ್ಯೆಯಾದ ನೇಹಾ ಹಿರೇಮಠ, ಅಂಜಲಿ ಅಂಬಿಗೇರಗೆ ನ್ಯಾಯ ಸಿಗಲು ಸಾಧ್ಯ ಎಂದರು.
ರಾಜ್ಯದ ಎರಡನೇ ರಾಜಧಾನಿಯಾಗಿರುವ ಹು-ಧಾ.ದಲ್ಲಿ ಎರಡು ಅಹಿತಕರ ಘಟನೆಗಳು ನಡೆದಿವೆ. ಈ ಘಟನೆಗೆ ಪೋಲಿಸ್ ಇಲಾಖೆಯಲ್ಲಿ ನಡೆದಿರುವ ಭ್ರಷ್ಟಾಚಾರವೇ ಕಾರಣ. ಅವರು ಅಕ್ರಮ ಚಟುವಟಿಕೆ ಮಾಡುವವರೊಂದಿಗೆ ಶಾಮೀಲಾಗಿದ್ದಾರೆ. ಅಂಜಲಿ ಕುಟುಂಬಸ್ಥರಿಗೆ ಸೋನಿಯಾ ಗಾಂಧಿ ನಗರದಲ್ಲಿ ಮನೆ ಕೊಡಬೇಕು. ಕುಟುಂಬಕ್ಕೆ ಭದ್ರತೆ ಒದಗಿಸಬೇಕು. ಸರ್ಕಾರ ಈ ವಿಚಾರದಲ್ಲಿ ಕಣ್ಣೊರೆಸುವ ತಂತ್ರ ಮಾಡಬಾರದು ಎಂದರು. ಇದೇ ಸಂದರ್ಭದಲ್ಲಿ ಶಾಸಕರು ಅಂಜಲಿ ಕುಟುಂಬಸ್ಥರಿಗೆ 10 ಸಾವಿರ ರೂ.ಗಳ ಆರ್ಥಿಕ ನೆರವು ನೀಡಿದರು.