ಸುವರ್ಣ ವಿಧಾನಸೌಧ: ವಿಶ್ವವಿದ್ಯಾಲಯಗಳ ಕುಲಪತಿ ನೇಮಕಾತಿಯಲ್ಲಿ 5ರಿಂದ 6 ಕೋಟಿ ರೂ. ತೆಗೆದುಕೊಳ್ಳಲಾಗುತ್ತಿದೆ ಎಂಬ ಸಂಸದ ಪ್ರತಾಪ ಸಿಂಹ ಅವರ ಹೇಳಿಕೆ ಮೇಲ್ಮನೆಯಲ್ಲಿ ಕೆಲಕಾಲ ಕೋಲಾಹಲ ಸೃಷ್ಟಿಸಿದ್ದಲ್ಲದೇ ಪ್ರತಿಪಕ್ಷ ಸದಸ್ಯರು ಬಾವಿಗಿಳಿದು ಪ್ರತಿಭಟನೆ ನಡೆಸಿದ ಪ್ರಸಂಗ ಜರುಗಿತು.
ಭೋಜನ ವಿರಾಮದ ಬಳಿಕ ಸದನ ಪ್ರಾರಂಭವಾಗುತ್ತಿದ್ದ ಮೇಲ್ಮನೆ ವಿಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್ ವಿಷಯ ಪ್ರಸ್ತಾಪಿಸಿ, ಜವಾಬ್ದಾರಿಯುತ ಲೋಕಸಭಾ ಸದಸ್ಯರು ವಿವಿಗಳ ಕುಲಪತಿ ನೇಮಕಾತಿಯಲ್ಲಿ ಭ್ರಷ್ಟಾಚಾರ ನಡೆಯುತ್ತಿವೆ ಎಂಬ ಹೇಳಿಕೆ ನೀಡಿದ್ದಾರೆ. ಆಡಳಿತದಲ್ಲಿರುವ ಸರಕಾರದ ಪ್ರತಿನಿಧಿಯೇ ಇಂತಹ ಹೇಳಿಕೆ ನೀಡಿದರೆ ಸಾಮಾನ್ಯ ಜನರ ಗತಿ ಏನಾಗಬಹುದು. ಈ ಕುರಿತು ಸಮಗ್ರ ಚರ್ಚೆಗೆ ಅವಕಾಶ ಕಲ್ಪಿಸಬೇಕು ಎಂದು ಪಟ್ಟು ಹಿಡಿದರು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸಭಾಪತಿ ಬಸವರಾಜ ಹೊರಟ್ಟಿ, ಯಾವುದೇ ವಿಷಯ ಪ್ರಸ್ತಾಪ ಮಾಡುವುದಕ್ಕೂ ಮುನ್ನ ನೋಟಿಸ್ ನೀಡಬೇಕು. ಇದ್ದಕ್ಕಿದ್ದಂತೆ ಚರ್ಚೆಗೆ ಅವಕಾಶ ಕೋರಿದರೆ ಅದು ಅಸಾಧ್ಯ. ಪ್ರತಿಯೊಂದು ರೀತಿ-ನೀತಿ ಪ್ರಕಾರ ನಡೆಯಬೇಕು ಎಂದು ಹೇಳಿದರು.
ಸಭಾನಾಯಕ ಕೋಟ ಶ್ರೀನಿವಾಸ ಪೂಜಾರಿ, ವಿರೋಧ ಪಕ್ಷ ಏನೇ ಪ್ರಶ್ನೆ ಕೇಳಿದರೂ ಅದಕ್ಕೆ ಉತ್ತರಿಸಲು ಸರಕಾರ ಸಮರ್ಥವಿದೆ. ಆದರೆ, ಅದಕ್ಕೆ ಒಂದು ನಿಯಮವಿದೆ. ಅದರ ಪ್ರಕಾರ ವಿಪಕ್ಷ ನಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಇದರಿಂದ ಆಕ್ರೋಶಗೊಂಡ ಕಾಂಗ್ರೆಸ್ ಮತ್ತು ಜೆಡಿಎಸ್ ಸದಸ್ಯರು, ಸದನದ ಬಾವಿಗಿಳಿದು ಸರಕಾರದ ವಿರುದ್ಧ ಘೋಷಣೆ ಕೂಗಲು ಪ್ರಾರಂಭಿಸಿದರು. ಭ್ರಷ್ಟಾಚಾರ ನಡೆಯುತ್ತಿದ್ದರೂ ಅದನ್ನು ಸಮರ್ಥನೆ ಮಾಡಿಕೊಳ್ಳುತ್ತಿದೆ ಎಂದು ಆಕ್ರೋಶ ಹೊರಹಾಕಿದರು.
ಮಧ್ಯ ಪ್ರವೇಶಿಸಿದ ಸಭಾಪತಿ ಹೊರಟ್ಟಿ, ಈ ಕುರಿತು ಚರ್ಚೆಗೆ ಅವಕಾಶ ನೀಡುತ್ತೇನೆ. ಆದರೆ, ನೋಟಿಸ್ ನೀಡಬೇಕು. ಅದನ್ನು ನೀಡಿದರೆ ಸಮಯ ನಿಗದಿ ಮಾಡಿ ಚರ್ಚೆಗೆ ಅವಕಾಶ ಕೊಡುವುದಾಗಿ ಭರವಸೆ ನೀಡಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪ್ರತಿಭಟನೆ ಹಿಂಪಡೆಯಿತು.