ತುಮಕೂರು: ಭ್ರಷ್ಟಾಚಾರ ಬಿತ್ತಿದ್ದು, ಬೆಳಸಿದ್ದು ಕಾಂಗ್ರೆಸ್ ಪಕ್ಷ. ವ್ಯವಸ್ಥೆಯಲ್ಲಿ ಭ್ರಷ್ಟಾಚಾರ ಸೇರಿ ಹೋಗಿದೆ. ಅದನ್ನು ನಿಯಂತ್ರಿಸಬೇಕು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ತಿಳಿಸಿದರು.
ನಗರದಲ್ಲಿ ಶನಿವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪಿಎಸ್ಐ ಪರೀಕ್ಷೆ ಅಕ್ರಮದ ವಿರುದ್ದ ಬಿಜೆಪಿ ಸರ್ಕಾರ ಕಠಿಣ ಕ್ರಮ ತೆಗೆದುಕೊಂಡಿದೆ. ಕ್ರಮ ತೆಗೆದುಕೊಂಡರೂ ಅಪರಾಧ ಹೇಗಾಗುತ್ತದೆ. ಮುಚ್ಚಿ ಹಾಕಿದರೆ ಅಪರಾಧ ಆಗುತ್ತಿತ್ತು ಎಂದರು.
ಪ್ರಕರಣವನ್ನು ಮುಚ್ಚಿ ಹಾಕುವ ಕೆಲಸ ಮಾಡಿಲ್ಲ. ಆದರೆ ಮುಚ್ಚಿಹಾಕುವ ಕೆಲಸವನ್ನು ಬಹಳ ಹಿಂದಿನಿಂದ ವ್ಯವಸ್ಥಿತವಾಗಿ ಕಾಂಗ್ರೆಸ್ ಮಾಡಿಕೊಂಡು ಬಂದಿದೆ. ಸ್ವತಃ ಅರ್ಕಾವತಿ ಹಗರಣದಲ್ಲಿ ಸಿದ್ದರಾಮಯ್ಯ ಮಾಡಿದ್ದೇನು? ರಿಡ್ಯೂ ಎನ್ನುವ ಹೊಸ ಪರಿಭಾಷೆ ಹುಟ್ಟು ಹಾಕಿದರು. ಕದ್ದಿದ್ದ ವಾಚನ್ನು ಕಟ್ಟಿಕೊಂಡಿದ್ದವರು ಯಾರು? ಅದನ್ನು ಹೇಗೆ ಮುಚ್ಚಿ ಹಾಕಿದರು. ಬೇರೆ ಯಾರೋ ವಿಪಕ್ಷ ನಾಯಕರು ಕದ್ದು ವಾಚು ಕಟ್ಟಿಕೊಂಡಿದ್ದರೆ ಇವರು ಬಿಡುತ್ತಿದ್ದರಾ ಎಂದು ಪ್ರಶ್ನಿಸಿದರು.
ಇದನ್ನೂ ಓದಿ:ಗಂಜಿ ಕುಡಿದು ಬದುಕುತ್ತೇನೆ ಹೊರತು ಭ್ರಷ್ಟಾಚಾರ ಮಾಡಲ್ಲ; ಹಾಲಪ್ಪ ಅವರಿಗೆ ಬೇಳೂರು ಟಾಂಗ್
40% ಕಮಿಷನ್ ಎನ್ನುವುದು ಸುಳ್ಳು. ಅಷ್ಟೊಂದು ಹಣ ಕೊಟ್ಟು ಕೆಲಸ ಮಾಡಲು ಸಾಧ್ಯವಿದೆಯೇ? ಕೆಲಸ ಮಾಡುವುದೇ ಕಷ್ಟವೆಂಬ ಸ್ಥಿತಿಯಲ್ಲಿ 40% ಕೊಟ್ಟು ಕೆಲಸ ಮಾಡಲಾಗುತ್ತದೆಯೇ? ನಮ್ಮ ಸರ್ಕಾರಕ್ಕೆ ಕೆಟ್ಟ ಹೆಸರು ತರಬೇಕೆಂಬ ಉದ್ದೇಶದಿಂದ ವ್ಯವಸ್ಥಿತವಾಗಿ ಷಡ್ಯಂತ್ರ ನಡೆಯುತ್ತಿದೆ ಎಂದು ಆರೋಪಿಸಿದರು.
ಹುಬ್ಬಳಿ ಪ್ರಕರಣ ಮಾತ್ರನಲ್ಲ, ಪಾದರಾಯನಪುರ, ಕೆಜಿಹಳ್ಳಿ, ಡಿಜೆಹಳ್ಳಿ ಹೀಗೆ ರಾಜ್ಯದ ಉದ್ದಗಲಕ್ಕೂ ನಡೆದ ಗಲಭೆಗಳ ಹಿಂದೆ ಕಾಂಗ್ರೆಸ್ ಪಾತ್ರ ಇರುವುದು ಸ್ಪಷ್ಟವಾಗಿ ಕಾಣುತ್ತದೆ. ಹಿಜಾಬ್ ಗಲಾಟೆಯಿಂದ ಮೊದಲುಗೊಂಡು ಎಲ್ಲಾ ಗಲಭೆಯಲ್ಲೂ ಕಾಂಗ್ರೆಸ್ ಪಾತ್ರವಿದೆ ಎಂದು ಸಿ.ಟಿ ರವಿ ಹೇಳಿದರು.
ಏಕರೂಪ ನಾಗರೀಕ ಸಂಹಿತೆ ಬಗ್ಗೆ ಅಂಬೇಡ್ಕರ್ ರೇ ಪ್ರತಿಪಾದನೆ ಮಾಡಿದ್ದಾರೆ. ಈ ಕುರಿತು ಸಾರ್ವಜನಿಕ ಚರ್ಚೆಯಾಗಲಿ. ಸಂವಿಧಾನ ರಚನೆಯಾದಾಗಲೇ ಏಕರೂಪ ನಾಗರಿಕ ಸಂಹಿತೆ ಕುರಿತು ಚರ್ಚೆ ನಡೆದಿದೆ. ಅಂಬೇಡ್ಕರ್ ಈ ಬಗ್ಗೆ ಬಲವಾಗಿ ಪ್ರತಿಪಾದನೆ ಮಾಡಿದ್ದರು. ಸಾರ್ವಜನಿಕ ಚರ್ಚೆಯಲ್ಲಿ ಅಭಿಪ್ರಾಯ ರೂಪಿಸಿ, ಅಭಿಪ್ರಾಯ ಏಕರೂಪ ನಾಗರಿಕ ಸಂಹಿತೆ ಪರವಾಗಿದ್ದರೆ ಜಾರಿ ತರಬೇಕು ಎಂದರು.